ಬಳಕೆದಾರರ ಮೇಲೆ ಆನ್‌ಲೈನ್‌ ನಿಗಾ ಆರೋಪ: ಗೂಗಲ್, ಫೇಸ್ಬುಕ್ ಗೆ ದಂಡ ವಿಧಿಸಿದ ಫ್ರಾನ್ಸ್

Update: 2022-01-06 17:55 GMT

ಪ್ಯಾರಿಸ್, ಜ.6: ಬಳಕೆದಾರರ ಮೇಲೆ ಆನ್‌ಲೈನ್‌ ಮೂಲಕ ನಿಗಾ ವಹಿಸುವ ‘ಕುಕೀಸ್’  ಗಳನ್ನು ಬಳಸಿರುವ ಪ್ರಕರಣದಲ್ಲಿ ಗೂಗಲ್ ಮತ್ತು ಫೇಸ್ಬುಕ್ ಸಂಸ್ಥೆಗಳಿಗೆ ಅನುಕ್ರಮವಾಗಿ 150 ಮಿಲಿಯನ್ ಮತ್ತು 60 ಮಿಲಿಯನ್ ಯುರೋ ಮೊತ್ತದ ದಂಡ ವಿಧಿಸಿರುವುದಾಗಿ ಫ್ರಾನ್ಸ್ ನ ಪ್ರಾಧಿಕಾರ ಗುರುವಾರ ಹೇಳಿದೆ.

ಆ್ಯಪಲ್, ಅಮೆಝಾನ್ ನಂತಹ ಅಮೆರಿಕದ ಬೃಹತ್ ತಂತ್ರಜ್ಞಾನ ಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಯುರೋಪ್‌ನಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು ಈ ಸಂಸ್ಥೆಗಳ ವಿರುದ್ಧ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ.

ಗೂಗಲ್ ಮತ್ತು ಫೇಸ್ಬುಕ್ ಬಳಕೆದಾರರಿಗೆ ಈ ಕುಕೀಸ್(ಬರಹದ ರೂಪದಲ್ಲಿರುವ ಸಣ್ಣ ಅಂಕಿಅಂಶ ಕೋಶ) ಬಳಕೆ ನಿರಾಕರಿಸುವ ಅವಕಾಶ ನಿರಾಕರಿಸಿರುವುದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಫ್ರಾನ್ಸ್‌ನ ‘ನ್ಯಾಷನಲ್ ಕಮಿಷನ್ ಫಾರ್ ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಂಡ್ ಫ್ರೀಡಂ(ಸಿಎನ್‌ಐಎಲ್) ಹೇಳಿದೆ. ತಮ್ಮ ಪದ್ಧತಿಯನ್ನು ಸರಿಹೊಂದಿಸಲು ಈ ಸಂಸ್ಥೆಗಳಿಗೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಆ ಬಳಿಕ ದಿನಕ್ಕೆ 1 ಲಕ್ಷ ಯುರೋ ಮೊತ್ತದ ದಂಡ ವಿಧಿಸಲಾಗುವುದು ಎಂದು ಹೇಳಿಕೆ ವಿವರಿಸಿದೆ. ಆದೇಶವನ್ನು ಪಾಲಿಸಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದಾಗಿ ಗೂಗಲ್ ಪ್ರತಿಕ್ರಿಯಿಸಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News