ಫಿಲಿಪ್ಪೀನ್ಸ್: ಬಾಲ್ಯ ವಿವಾಹ ನಿಷೇಧ
ಮನಿಲಾ, ಜ.6: ವಿಶ್ವದಲ್ಲಿ ಅತ್ಯಧಿಕ ಬಾಲ್ಯ ವಿವಾಹ ನಡೆಯುತ್ತಿರುವ ದೇಶಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಫಿಲಿಪ್ಪೀನ್ಸ್‌ನಲ್ಲಿ ಬಾಲ್ಯ ವಿವಾಹವನ್ನು ಕಾನೂನುಬಾಹಿರ ಎಂದು ಘೋಷಿಷಿ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ಈ ದೇಶದಲ್ಲಿ ಪ್ರತೀ 6 ಹುಡುಗಿಯರಲ್ಲಿ ಒಬ್ಬಳು 18 ವರ್ಷಕ್ಕೂ ಮೊದಲೇ ವೈವಾಹಿಕ ಬಂಧನಕ್ಕೆ ಒಳಗಾಗುತ್ತಿದ್ದಾಳೆ. ದೀರ್ಘ ಕಾಲದಿಂದ ನಡೆದುಕೊಂಡು ಬರುತ್ತಿದ್ದ ಸಾಂಸ್ಕೃತಿಕ ಆಚರಣೆ ಮತ್ತು ಲಿಂಗ ಅಸಮಾನತೆ ಬದಲಾವಣೆಗೆ ತೊಡಕಾಗಿ ಪರಿಣಮಿಸಿದೆ ಎಂದು ಬ್ರಿಟನ್ ಮೂಲದ ಮಹಿಳಾ ಹಕ್ಕುಗಳ ಸಂಘಟನೆ ‘ಪ್ಲ್ಯಾನ್ ಇಂಟರ್ನ್ಯಾಷನಲ್’ ವರದಿ ಮಾಡಿದೆ.
ಆದರೆ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟ್ ಸಹಿ ಹಾಕಿರುವ ಹೊಸ ಕಾನೂನು, 18 ವರ್ಷದ ಕೆಳಗಿನ ಬಾಲಕಿಯರಿಗೆ ವಿವಾಹ ನಡೆಸುವವರಿಗೆ 12 ವರ್ಷದ ವರೆಗೆ ಜೈಲುಶಿಕ್ಷೆಗೆ ಅವಕಾಶ ಒದಗಿಸಿದೆ. ವಿವಾಹ ಪ್ರಕ್ರಿಯೆ ನಡೆಸುವ ಧಾರ್ಮಿಕ ಗುರುಗಳಿಗೂ ಈ ಶಿಕ್ಷೆ ಅನ್ವಯಿಸುತ್ತದೆ. ಈ ಕಾನೂನು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಕುರಿತ ಅಂತರಾಷ್ಟ್ರೀಯ ಒಡಂಬಡಿಕೆಗೆ ಅನುಗುಣವಾಗಿದೆ ಎಂದು ಸರಕಾರ ಹೇಳಿದೆ.
ಬಾಲ್ಯ ವಿವಾಹವು ಮಕ್ಕಳ ದೌರ್ಜನ್ಯಕ್ಕೆ ಪೂರಕವಾದ ಒಂದು ಪದ್ಧತಿಯಾಗಿದೆ. ಯಾಕೆಂದರೆ ಇದು ಮಕ್ಕಳ ವಾಸ್ತವಿಕ ಮೌಲ್ಯ, ಘನತೆಯನ್ನು ತುಚ್ಛವಾಗಿಸಿ ಅವಮಾನಿಸುತ್ತದೆ . ಆದ್ದರಿಂದ ಈ ಪದ್ಧತಿಯನ್ನು ನಿಷೇಧಿಸಲಾಗಿದೆ ಎಂದು ನೂತನ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಬಾಲ್ಯವಿವಾಹವು ತುಲನಾತ್ಮಕವಾಗಿ ಸಾಮಾನ್ಯವಾಗಿರುವ ಮುಸ್ಲಿಮರು ಮತ್ತು ಸ್ಥಳೀಯ ಸಮುದಾಯಗಳಿಗೆ ಪರಿವರ್ತನೆಯ ಅವಧಿಯಾಗಿ 1 ವರ್ಷ ಕಾಲಾವಕಾಶವನ್ನು ನೀಡಿದ್ದು ಅದುವರೆಗೆ ಕಾಯ್ದೆಯಿಂದ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಕಾಯ್ದೆಯ ಅನುಬಂಧದಲ್ಲಿ ಸೇರಿಸಲಾಗಿದೆ.