ಅಮೆರಿಕ, ಐರೋಪ್ಯ ಒಕ್ಕೂಟದ ಔಷಧ ಏಕಸ್ವಾಮ್ಯ ಮುರಿಯುವತ್ತ..

Update: 2022-01-07 06:01 GMT

ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ನಿಯಮಾವಳಿಗಳ ಮೇಲೆ ಪಾಶ್ಚಾತ್ಯ ದೇಶಗಳ ಹಿಡಿತ ಕಡಿಮೆಗೊಳ್ಳಲು ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಸಮೀಕರಣದಲ್ಲಿ ಬದಲಾವಣೆಯಾಗಿರುವುದು ಮಾತ್ರ ಕಾರಣವಲ್ಲ, ಆ ದೇಶಗಳ ಒಳಗಿನಿಂದಲೇ ಹುಟ್ಟಿಕೊಂಡಿರುವ ಪ್ರತಿರೋಧವೂ ಕಾರಣ. ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಐರೋಪ್ಯ ಆಯೋಗ ಮತ್ತು ಐರೋಪ್ಯ ಸಂಸತ್ ನಡುವೆ ಒಪ್ಪಂದವೊಂದನ್ನು ಏರ್ಪಡಿಸಲು ಐರೋಪ್ಯ ಒಕ್ಕೂಟ ಪರದಾಡುತ್ತಿದೆ. ಹಾಗಾಗಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಬಲಿಷ್ಠ ಭಾಗೀದಾರಿಕೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಎಚ್‌ಐವಿ/ಏಡ್ಸ್ ಬಿಕ್ಕಟ್ಟಿನ 20 ವರ್ಷಗಳ ಬಳಿಕ, ಜಗತ್ತು ಹೊಸ ಸಾಂಕ್ರಾಮಿಕವೊಂದನ್ನು ಎದುರಿಸುತ್ತಿದೆ, ಜೊತೆಗೆ ಪರಿಚಿತ ಸಮಸ್ಯೆಯೊಂದನ್ನೂ. ಜೀವರಕ್ಷಕ ಔಷಧಗಳನ್ನು ಉತ್ಪಾದಿಸಲು ಅಗತ್ಯವಾದ ತಂತ್ರಜ್ಞಾನವನ್ನು ಅದನ್ನು ಅಭಿವೃದ್ಧಿಪಡಿಸಿರುವ ಪಾಶ್ಚಾತ್ಯ ಔಷಧ ತಯಾರಿಕಾ ಕಂಪೆನಿಗಳು ತಮ್ಮ ಕಪಿಮುಷ್ಟಿಯಲ್ಲೇ ಇಟ್ಟುಕೊಂಡಿವೆ. ಆದರೆ, ಈ ಬಿಗಿಹಿಡಿತವು ಸಡಿಲಗೊಳ್ಳಬಹುದು ಎನ್ನುವ ಸೂಚನೆಗಳು ಲಭಿಸಿವೆ.

1990ರ ದಶಕದ ಮಧ್ಯ ಭಾಗದಲ್ಲಿ, ಒಂದು ಕೋರ್ಸ್ ರೆಟ್ರೊವೈರಲ್ ನಿಗ್ರಹ ಔಷಧಿ (ಎಆರ್‌ಟಿ)ಯ ಬೆಲೆ 10,000 ಅಮೆರಿಕ ಡಾಲರ್ (ಸುಮಾರು 7.5 ಲಕ್ಷ ರೂಪಾಯಿ). ಇದು ಆಗ್ನೇಯ ಏಶ್ಯ ಮತ್ತು ಆಫ್ರಿಕದ ಸಹಾರ ಉಪಖಂಡದಲ್ಲಿ ಎಣಿಕೆಗೆ ನಿಲುಕದ ಮೊತ್ತವಾಗಿತ್ತು. 1995ರಲ್ಲಿ ಜಗತ್ತಿನಲ್ಲಿ ದಾಖಲಾದ ಎಚ್‌ಐವಿ ಪ್ರಕರಣಗಳ ಶೇ. 90ಕ್ಕೂ ಅಧಿಕ ಪ್ರಕರಣಗಳು ಈ ವಲಯಗಳಲ್ಲಿ ವರದಿಯಾಗಿದ್ದವು. ಆದರೆ, ಜಾಗತಿಕ ಮಟ್ಟದಲ್ಲಿ ಕಠಿಣ ಬೌದ್ಧಿಕ ಆಸ್ತಿ (ಐಪಿ) ನಿಯಮಗಳನ್ನು ಜಾರಿಗೊಳಿಸಿ, ತಮ್ಮ ಎಚ್‌ಐವಿ ಪೀಡಿತ ನಾಗರಿಕರಿಗೆ ಕಡಿಮೆ ಬೆಲೆಯ ಪರ್ಯಾಯ ಜನರಿಕ್ ಔಷಧಗಳನ್ನು ಒದಗಿಸುವುದರಿಂದ ಅಭಿವೃದ್ಧಿಶೀಲ ದೇಶಗಳ ಸರಕಾರಗಳನ್ನು ತಡೆಯಲಾಗಿತ್ತು.

ಹಣಬಲದಿಂದ ರೂಪಿಸಲಾದ ಪೇಟೆಂಟ್‌ಗಳು

ಬೌದ್ಧಿಕ ಆಸ್ತಿ ನಿಯಮಗಳಿಗೆ ಸಂಬಂಧಿಸಿದ ಮಾತುಕತೆಗಳಲ್ಲಿ, ಜಗತ್ತಿನ ಅತ್ಯಂತ ಪ್ರಭಾವಿ ದೇಶಗಳು, ತಮಗೆ ಅಗಾಧ ಪ್ರಮಾಣದಲ್ಲಿ ಲಾಭ ತರುವ ನಿಯಮಗಳನ್ನು ರೂಪಿಸುವುದಕ್ಕಾಗಿ ತಮ್ಮ ಹಣಬಲವನ್ನು ಉಪಯೋಗಿಸುತ್ತಿದ್ದವು. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಆಣತಿಯಂತೆ ಜಾರಿಗೊಂಡ ಕಠಿಣ ಬೌದ್ಧಿಕ ಆಸ್ತಿ ನಿಯಮಗಳು, ಪಾಶ್ಚಾತ್ಯ ಔಷಧ ತಯಾರಿಕಾ ಕಂಪೆನಿಗಳು ಅಭಿವೃದ್ಧಿಪಡಿಸಿದ ಅಧಿಕ ಮೌಲ್ಯದ ಪೇಟೆಂಟ್ ಔಷಧಿಗಳ ರಕ್ಷಣೆಗೆ ನಿಂತಿದ್ದವು.

ಎಚ್‌ಐವಿ/ಏಡ್ಸ್ ಇಡೀ ಜಗತ್ತನ್ನು ಅಸ್ಥಿರಗೊಳಿಸಬಹುದಾಗಿದೆ ಎನ್ನುವುದನ್ನು ಕ್ರಮೇಣ ಅರ್ಥಮಾಡಿಕೊಂಡ ಅಮೆರಿಕ ಮತ್ತು ಐರೋಪ್ಯ ಒಕ್ಕೂಟವು, ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ 2001ರ ದೋಹಾ ಘೋಷಣೆಗೆ ಬೆಂಬಲ ನೀಡಿದವು. ಈ ಘೋಷಣೆಯು ಸಾರ್ವಜನಿಕ ಆರೋಗ್ಯಕ್ಕಾಗಿ ಬೌದ್ಧಿಕ ಆಸ್ತಿ ನಿಯಮಾವಳಿಗಳನ್ನು ಉಲ್ಲಂಘಿಸಲು ಸರಕಾರಗಳಿಗೆ ಅನುಮತಿ ನೀಡುತ್ತದೆ. ಜನರಿಕ್ ಔಷಧಿಗಳಿಂದ ಸ್ಪರ್ಧೆಯನ್ನು ಎದುರಿಸಿದ ಪೇಟೆಂಟ್ ಎಆರ್‌ಟಿ ಔಷಧಿಗಳ ಬೆಲೆ ಕೋರ್ಸ್‌ಗೆ 700 ಡಾಲರ್ (ಸುಮಾರು 52,500 ರೂಪಾಯಿ)ಗೆ ಇಳಿಯಿತು.

ಆದರೆ ದೋಹಾ ಮಾತುಕತೆಯ ಬಳಿಕ, ಪಾಶ್ಚಾತ್ಯ ಸರಕಾರಗಳು ತಮ್ಮ ಹಿಂದಿನ ಅಭ್ಯಾಸಕ್ಕೆ ಮರಳಿದವು. ದೋಹಾ ಘೋಷಣೆಯಲ್ಲಿ ನೀಡಲಾದ ಬೌದ್ಧಿಕ ಆಸ್ತಿ ನಿಯಮಾವಳಿಗಳ ಸಡಿಲಿಕೆಯನ್ನು ವಿಫಲಗೊಳಿಸಲು ಡಬ್ಲ್ಯುಟಿಒ ಮೂಲಕ ಪ್ರಯತ್ನಿಸಿ ವಿಫಲಗೊಂಡ ಬಳಿಕ, ಈ ಪ್ರಭಾವಿ ದೇಶಗಳು ಆರ್ಥಿಕ ದಿಗ್ಬಂಧನಗಳ ಬೆದರಿಕೆ ಮತ್ತು ಸಂಕುಚಿತ ವ್ಯಾಪಾರ ಒಪ್ಪಂದಗಳಿಗೆ ಮರಳಿದವು.

2021ರಲ್ಲಿ, ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಒಳಪಡುವ ಹೆಚ್ಚಿನ ಕೋವಿಡ್-19 ಲಸಿಕೆಗಳ ಒಡೆತನವನ್ನು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದಲ್ಲಿರುವ ದೈತ್ಯ ಔಷಧ ತಯಾರಿಕಾ ಕಂಪೆನಿಗಳು ಹೊಂದಿವೆ. ಈ ಕಂಪೆನಿಗಳು ಲಸಿಕೆಗಳ ಮಾರಾಟದಿಂದ ಸಾವಿರಾರು ಕೋಟಿ ಡಾಲರ್‌ಗಳನ್ನು ಗಳಿಸಿವೆ.

ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿ ಶೇ. ನಾಲ್ಕಕ್ಕೂ ಕಡಿಮೆ ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಆದರೆ, ಶ್ರೀಮಂತ ದೇಶಗಳಲ್ಲಿ ಶೇ. 69ರಷ್ಟು ಜನರಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ. ಈ ಅಸಮಾನತೆಯಿಂದಾಗಿ ಕೊರೋನ ವೈರಸ್ ಹೊಸ ಹೊಸ ರೂಪಗಳೊಂದಿಗೆ ತಿರುಗಿ ಬರುತ್ತಿದೆ. ಈ ಲಸಿಕೆಗಳ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರದ್ದುಪಡಿಸುವಂತೆ ಅಭಿವೃದ್ಧಿಶೀಲ ದೇಶಗಳು ಮತ್ತೊಮ್ಮೆ ಡಬ್ಲ್ಯುಟಿಒಗೆ ದುಂಬಾಲು ಬಿದ್ದಿವೆ. ಆದರೆ, ಮರುಪರಿಶೀಲನಾ ಪ್ರಕ್ರಿಯೆಯು ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಕುಂಟುತ್ತಾ ಸಾಗಿದೆ.

ದೊಡ್ಡ ಕಂಪೆನಿಗಳು, ಜನರಿಕ್ ಔಷಧ ತಯಾರಕರ ನಡುವೆ ಪೈಪೋಟಿ

2015ರಲ್ಲಿ ರೂಪುಗೊಂಡ ಟ್ರಾನ್ಸ್-ಪೆಸಿಫಿಕ್ ಪಾರ್ಟ್‌ನರ್‌ಶಿಪ್ (ಟಿಪಿಪಿ) 12 ಸದಸ್ಯರ ಬೃಹತ್ ಪ್ರಾದೇಶಿಕ ಮುಕ್ತ-ವ್ಯಾಪಾರ ಒಪ್ಪಂದವಾಗಿದೆ. ಔಷಧಗಳು ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಸಂಬಂಧಿಸಿ ಡಬ್ಲ್ಯುಟಿಒ ಈಗಾಗಲೇ ವಿಧಿಸಿರುವ ನಿಯಮಾವಳಿಗಳಿಗೆ ಹೆಚ್ಚುವರಿಯಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಯನ್ನು ಅಭಿವೃದ್ಧಿಶೀಲ ದೇಶಗಳು ಕೊಡಬೇಕೆಂದು ಆ ಒಪ್ಪಂದ ಹೇಳುತ್ತದೆ.

ನಕಲಿ ವಿರೋಧಿ ವ್ಯಾಪಾರ ಒಪ್ಪಂದ (ಎಸಿಟಿಎ)ವು ಅಮೆರಿಕದ ಇನ್ನೊಂದು ವಿವಾದಾಸ್ಪದ ಹಾಗೂ ಮಹತ್ವಾಕಾಂಕ್ಷೆಯ ಒಪ್ಪಂದವಾಗಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿ ತಯಾರಿಸಲಾದ ಜನರಿಕ್ ಔಷಧಗಳು ಎಂಬ ಸಂಶಯದಲ್ಲಿ ಸಾಗಾಟದಲ್ಲಿರುವ ಈ ಔಷಧಿಗಳನ್ನು ವಶಪಡಿಸಿಕೊಳ್ಳಲು ಈ ಒಪ್ಪಂದವು ದೇಶಗಳಿಗೆ ಅವಕಾಶ ಮಾಡಿಕೊಡುತ್ತವೆ.

ಈ ಒಪ್ಪಂದಗಳ ನಿಯಮಗಳು ಪಾಶ್ಚಾತ್ಯ ಔಷಧ ತಯಾರಿಕಾ ಕಂಪೆನಿಗಳಿಗೆ ಭಾರೀ ಲಾಭಗಳನ್ನು ತಂದುಕೊಡುತ್ತವೆ ಹಾಗೂ ಭಾರತ, ಬ್ರೆಝಿಲ್ ಮತ್ತು ಥಾಯ್ಲೆಂಡ್ ಮುಂತಾದ ದೇಶಗಳಲ್ಲಿರುವ ಜನರಿಕ್ ಔಷಧ ತಯಾರಕರ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರುತ್ತವೆ.

ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಅಗಾಧ ಮಾರುಕಟ್ಟೆಗಳಿಗೆ ಪ್ರವೇಶ ಸಿಗದಿರಬಹುದು ಎಂಬ ಭಯದಲ್ಲಿ ಅಭಿವೃದ್ಧಿಶೀಲ ದೇಶಗಳು ಈ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ನಿಯಮಾವಳಿಗಳಿಗೆ ಅಂಗೀಕಾರ ನೀಡುತ್ತವೆ. ತಮ್ಮ ದೇಶಗಳಲ್ಲಿ ಶಿಕ್ಷಣ, ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಜ್ಞಾನಕ್ಕೆ ಮುಕ್ತ ಪ್ರವೇಶ ಪಡೆಯುವುದು ಅಗತ್ಯ ಎಂಬ ವಾದವನ್ನು ಈ ದೇಶಗಳು ಮಂಡಿಸುತ್ತವೆ.

ಆದರೆ, 1990ರ ದಶಕದ ಬಳಿಕ ಈ ಕ್ಷೇತ್ರಕ್ಕೆ ಹುಲಿಯೊಂದರ ಪ್ರವೇಶವಾಗಿದೆ. ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದಲ್ಲಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟವನ್ನು ಹಿಂದಿಕ್ಕಿರುವ ಚೀನಾ, ಜಾಗತಿಕ ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮಾವಳಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸ್ಥಾನದಲ್ಲಿದೆ. ತನ್ನ ಏಳಿಗೆಗೆ ಕಾರಣವಾದ ಆರ್ಥಿಕ ವ್ಯವಸ್ಥೆಗೆ ನೇರವಾಗಿ ಸವಾಲೊಡ್ಡಲು ಚೀನಾ ಹಿಂದೇಟು ಹಾಕಿದೆಯಾದರೂ, ಬೌದ್ಧಿಕ ಆಸ್ತಿ ನಿಯಮಾವಳಿಗಳಲ್ಲಿ ವಿನಾಯಿತಿಗಾಗಿ ತನ್ನ ಪ್ರಮುಖ ಆರ್ಥಿಕ ಭಾಗೀದಾರರಾದ ಅಭಿವೃದ್ಧಿಶೀಲ ದೇಶಗಳು ಮುಂದಿಟ್ಟಿರುವ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ.

ಜಾಗತಿಕ ಬೌದ್ಧಿಕ ಆಸ್ತಿ ಕ್ಷೇತ್ರದಲ್ಲಿ ಎದುರಾಳಿ ಬಣಗಳು

ವ್ಯಾಪಾರ ಒಪ್ಪಂದಗಳಲ್ಲಿ ನಿಯಮಾವಳಿಗಳಲ್ಲಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಪ್ರಾಬಲ್ಯ ಈಗ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎನ್ನುವುದನ್ನು ವ್ಯಾಪಾರ ಒಪ್ಪಂದಗಳಲ್ಲಿನ ಇತ್ತೀಚಿನ ಪೃವೃತ್ತಿಗಳು ತೋರಿಸುತ್ತಿವೆ. ಚೀನಾವು ಪ್ರಾದೇಶಿಕ ಸಮಗ್ರ ಆರ್ಥಿಕ ಭಾಗೀದಾರಿಕೆ (ಆರ್‌ಸಿಇಪಿ) ಒಪ್ಪಂದದ ಆಯಕಟ್ಟಿನ ಸ್ಥಾನದಲ್ಲಿ ಆಸಿಯನ್ ಸಂಘಟನೆಯನ್ನು ಸ್ಥಾಪಿಸಿದೆ. ಆರ್‌ಸಿಇಪಿ ಎನ್ನುವುದು ಟಿಪಿಪಿಗೆ ಪ್ರತಿಯಾಗಿ ರೂಪುಗೊಂಡ ಬೃಹತ್ ಪ್ರಾದೇಶಿಕ ವ್ಯಾಪಾರ ಒಪ್ಪಂದವಾಗಿದೆ. ಟಿಟಿಪಿಯಲ್ಲಿ ಈಗ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಎರಡೂ ಇಲ್ಲ.

ಈ ಒಪ್ಪಂದವು 2022 ಜನವರಿ 1ರಂದು ಜಾರಿಗೆ ಬಂದಿದೆ. ಇದರಲ್ಲಿ ಅಭಿವೃದ್ಧಿಶೀಲ ದೇಶಗಳಿಗೆ ಪೂರಕವಾದ ಬೌದ್ಧಿಕ ಆಸ್ತಿ ಹಕ್ಕು ನಿಯಮಾವಳಿಗಳಿವೆ. ಟಿಪಿಪಿ ಮತ್ತು ಆರ್‌ಸಿಇಪಿ ಒಪ್ಪಂದಗಳ ನಡುವೆ ಅಜಗಜಾಂತರವಿದೆ.

2017ರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಪಿಪಿಯಿಂದ ಅಮೆರಿಕವನ್ನು ಹೊರತಂದಾಗ, ಆರ್‌ಸಿಇಪಿ ಜಗತ್ತಿನ ಬೃಹತ್ ಮುಕ್ತ-ವ್ಯಾಪಾರ ಒಪ್ಪಂದವಾಯಿತು. ಒಂದು ವರ್ಷದ ಬಳಿಕ, ಟಿಪಿಪಿಯ ಉಳಿದ ಸದಸ್ಯರು ಟ್ರಾನ್ಸ್ ಪೆಸಿಫಿಕ್ ಪಾರ್ಟ್‌ನರ್‌ಶಿಪ್‌ಗಾಗಿ ಸಮಗ್ರ ಮತ್ತು ಪ್ರಗತಿಪರ ಒಪ್ಪಂದ (ಸಿಪಿಟಿಪಿಪಿ)ವನ್ನು ರೂಪಿಸಿದರು.

ಸಿಪಿಟಿಪಿಪಿಯು ಒಂದನ್ನು ಹೊರತುಪಡಿಸಿ ಮೂಲ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಎಲ್ಲ ಅಧ್ಯಾಯಗಳನ್ನು ಒಪ್ಪಂದದಿಂದ ತೆರವುಗೊಳಿಸಿತು. ಅದರಲ್ಲಿ ಔಷಧಗಳಿಗೆ ಸಂಬಂಧಿಸಿದ ಅಧ್ಯಾಯವೂ ಸೇರಿದೆ. ಒಪ್ಪಂದದ ಉಳಿದ ಅಂಶಗಳನ್ನು ಹಾಗೆಯೇ ಉಳಿಸಿಕೊಂಡಿತು. ಈಗ, ಬೌದ್ಧಿಕ ಆಸ್ತಿ ಹಕ್ಕು ನಿಯಮಾವಳಿಗಳಿಗೆ ಸಂಬಂಧಿಸಿದ ಜಾಗತಿಕ ಕ್ಷೇತ್ರವು ಒಮ್ಮೆಲೆ ಭಿನ್ನವಾಗಿ ಕಾಣಲು ಆರಂಭಿಸಿತು.

ಔಷಧಿಗಳನ್ನು ಪಡೆಯುವಲ್ಲಿನ ಬೆದರಿಕೆ ಕಡಿಮೆಯಾಗಿದೆ ಎಂಬ ನೆಲೆಯಲ್ಲಿ ಥಾಯ್ಲೆಂಡ್ ಸಿಪಿಟಿಪಿಪಿಗೆ ಸೇರುವ ಇಂಗಿತವನ್ನು ವ್ಯಕ್ತಪಡಿಸಿತು. ಚೀನಾ ಕೂಡ 2021 ಸೆಪ್ಟಂಬರ್‌ನಲ್ಲಿ ಒಪ್ಪಂದಕ್ಕೆ ಸೇರ್ಪಡೆಗೊಳ್ಳುವುದಕ್ಕಾಗಿ ಬಿಡ್ಡನ್ನು ಔಪಚಾರಿಕವಾಗಿ ಸಲ್ಲಿಸಿತು. ಸಿಪಿಟಿಪಿಪಿಯು ಈಗಿನ ರೂಪದಲ್ಲೇ ಮುಂದುವರಿದರೆ, ಜಾಗತಿಕ ಬೌದ್ಧಿಕ ಆಸ್ತಿ ನಿಯಮಾವಳಿಗಳ ಮೇಲೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಪ್ರಭಾವ ಮತ್ತಷ್ಟು ಕಡಿಮೆಯಾಗುತ್ತದೆ ಹಾಗೂ ಜನರ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಉತ್ಪಾದಿಸಲು ಜನರಿಕ್ ಔಷಧಗಳ ತಯಾರಕ ಕಂಪೆನಿಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ.

ಏಶ್ಯದ ಪ್ರಾಬಲ್ಯ

ವಿಶ್ವ ವ್ಯಾಪಾರ ಸಂಘಟನೆಯು ಬೌದ್ಧಿಕ ಆಸ್ತಿ ಹಕ್ಕು ರಕ್ಷಣಾ ನಿಯಮಾವಳಿಗಳಿಂದ ವಿನಾಯಿತಿ ನೀಡದ ಹೊರತಾಗಿಯೂ, ಲಸಿಕೆ ಉತ್ಪಾದನೆಯಲ್ಲಿ ಏಶ್ಯವು ಸ್ಪರ್ಧೆ ನೀಡುತ್ತಿದೆ. ಏಶ್ಯದ ಔಷಧ ತಯಾರಿಕಾ ಕಂಪೆನಿಗಳಿಗೆ ಲಸಿಕೆಗಳಿಗಾಗಿ ಭಾರೀ ಬೇಡಿಕೆಗಳು ಬಂದಿವೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಅವುಗಳು ಹೆಚ್ಚಿನ ಹಣವನ್ನು ವ್ಯಯಿಸುತ್ತಿವೆ. ಚೀನಾ ಮತ್ತು ಭಾರತಗಳು ಲಸಿಕೆ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ಆ ಮೂಲಕ ಈ ದೇಶಗಳು ಪಾಶ್ಚಾತ್ಯ ದೇಶಗಳ ಲಸಿಕಾ ಏಕಾಧಿಪತ್ಯಕ್ಕೆ ಸವಾಲು ಒಡ್ಡಿವೆ.

ಚೀನಾದ ಲಸಿಕೆಗಳಿಗೆ ಪ್ರತಿಕೂಲ ಪ್ರಚಾರ ಸಿಕ್ಕಿತು ಹಾಗೂ ಅದರ ಪರಿಣಾಮ ದರ ಪ್ರಶ್ನಾರ್ಹವಾಗಿತ್ತು. ಆದರೆ, ಭಾರತದ ಭಾರತ್ ಬಯೋಟೆಕ್‌ನಲ್ಲಿ ಉತ್ಪಾದನೆಯಾದ ಕೋವ್ಯಾಕ್ಸಿನ್‌ಗೆ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಅದೇ ವೇಳೆ, ಝೈಡಸ್ ಕ್ಯಾಡಿಲ ಕಂಪೆನಿ ಉತ್ಪಾದಿಸಿದ ಇನ್ನೊಂದು ಲಸಿಕೆಗೂ ಭಾರತ ಅಂಗೀಕಾರ ನೀಡಿದೆ.

ದಕ್ಷಿಣ ಕೊರಿಯ ಮತ್ತು ಜಪಾನ್ ದೇಶಗಳು ಸ್ಥಳೀಯ ಲಸಿಕೆಗಳ ಅಭಿವೃದ್ಧಿಗಾಗಿ ಬಿಲಿಯಗಟ್ಟಳೆ ಡಾಲರ್‌ಗಳನ್ನು ಸುರಿಯುತ್ತಿವೆ. ಹಲವು ಸಂಭಾವ್ಯ ಲಸಿಕೆಗಳು ಎರಡೂ ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗ ಹಂತದಲ್ಲಿವೆ. ಇನ್ನೊಂದು ಜನರಿಕ್ ಔಷಧ ತಯಾರಿಕಾ ದೇಶ ಥಾಯ್ಲೆಂಡ್‌ನಲ್ಲಿ ಎರಡು ಭರವಸೆಯ ಲಸಿಕೆಗಳು ಅಭಿವೃದ್ಧಿ ಹಂತದಲ್ಲಿವೆ.

ಏಶ್ಯದ ಲಸಿಕೆಗಳು ಜಾಗತಿಕ ಮಟ್ಟದಲ್ಲಿ ಪೂರೈಕೆಯನ್ನು ಹೆಚ್ಚಿಸುವ ಮೂಲಕ ಬೆಲೆಗಳನ್ನು ತಗ್ಗಿಸಬಲ್ಲವು. ಇದು ಮುಂದೆ ಇತರ ಹೊಸ ಔಷಧಗಳ ಅಭಿವೃದ್ಧಿಗೂ ಕಾರಣವಾಗಬಹುದು. ಆಗ ಪಾಶ್ಚಾತ್ಯ ದೇಶಗಳ ಔಷಧ ತಯಾರಕರಿಗೆ ಏಶ್ಯದ ಔಷಧ ತಯಾರಿಕಾ ಕಂಪೆನಿಗಳು ಹೆಚ್ಚಿನ ಸ್ಪರ್ಧೆ ನೀಡಬಲ್ಲವು.

ಪಾಶ್ಚಾತ್ಯ ಕಂಪೆನಿಗಳ ಪ್ರಾಬಲ್ಯ ಕುಸಿತ

ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ನಿಯಮಾವಳಿಗಳ ಮೇಲೆ ಪಾಶ್ಚಾತ್ಯ ದೇಶಗಳ ಹಿಡಿತ ಕಡಿಮೆಗೊಳ್ಳಲು ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಸಮೀಕರಣದಲ್ಲಿ ಬದಲಾವಣೆಯಾಗಿರುವುದು ಮಾತ್ರ ಕಾರಣವಲ್ಲ, ಆ ದೇಶಗಳ ಒಳಗಿನಿಂದಲೇ ಹುಟ್ಟಿಕೊಂಡಿರುವ ಪ್ರತಿರೋಧವೂ ಕಾರಣ. ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಐರೋಪ್ಯ ಆಯೋಗ ಮತ್ತು ಐರೋಪ್ಯ ಸಂಸತ್ ನಡುವೆ ಒಪ್ಪಂದವೊಂದನ್ನು ಏರ್ಪಡಿಸಲು ಐರೋಪ್ಯ ಒಕ್ಕೂಟ ಪರದಾಡುತ್ತಿದೆ. ಹಾಗಾಗಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಬಲಿಷ್ಠ ಭಾಗೀದಾರಿಕೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಆದರೆ, ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯವು ಹೆಚ್ಚು ಸಂಕೀರ್ಣವಾಗಿದೆ. ಹೊಸತನದ ಸಂಶೋಧನೆಗಳನ್ನು ಪ್ರೋತ್ಸಾಹಿಸಲು ಬೌದ್ಧಿಕ ಆಸ್ತಿ ರಕ್ಷಣೆ ಒದಗಿಸುವುದು ಅಗತ್ಯವಾಗಿದೆ. ಔಷಧ ತಯಾರಿಕಾ ಕಂಪೆನಿಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರೀ ಪ್ರಮಾಣದಲ್ಲಿ ಹಣವನ್ನು ಸುರಿಯುತ್ತಿವೆ. ದೇಶಗಳು ಹೆಚ್ಚೆಚ್ಚು ಸಂಶೋಧನೆಗಳು ಮತ್ತು ಅಭಿವೃದ್ಧಿಗೆ ಇಳಿದಾಗ ಅವುಗಳು ಹೆಚ್ಚಿನ ಬೌದ್ಧಿಕ ಆಸ್ತಿ ರಕ್ಷಣೆ ಕೋರುತ್ತವೆ.

ಚೀನಾ ಈಗ ವಸ್ತುಗಳ ವ್ಯಾಪಾರದ ಮೇಲಿನ ಅವಲಂಬನೆಯಿಂದ ಹೊರಬಂದು ಕಠಿಣ ಬೌದ್ಧಿಕ ಆಸ್ತಿ ಹಕ್ಕು ನಿಯಮಾವಳಿಗಳಿಂದ ಪ್ರಯೋಜನ ಪಡೆಯುವ ಉನ್ನತ ತಂತ್ರಜ್ಞಾನ ಕ್ಷೇತ್ರದತ್ತ ಸರಿಯುತ್ತಿದೆ. ಇತಿಹಾಸ ಮರುಕಳಿಸುತ್ತದೆ ಎಂದಾದರೆ, ಅಭಿವೃದ್ಧಿಶೀಲ ದೇಶಗಳು ಮತ್ತೊಮ್ಮೆ ಈ ಬಲಿಷ್ಠ ದೇಶಗಳ ಮರ್ಜಿಗೆ ಒಳಪಡಬೇಕಾಗಬಹುದು.

ಕೃಪೆ : theprint.in

Writer - ಹನ್ನಾ ಸ್ವೋರ್ನ್

contributor

Editor - ಹನ್ನಾ ಸ್ವೋರ್ನ್

contributor

Similar News