ಲಸಿಕೆ ವಿರೋಧಿ ಪ್ರಚಾರ ಅಸಂಬದ್ಧ: ಬ್ರಿಟನ್ ಪ್ರಧಾನಿ ಜಾನ್ಸನ್ ಟೀಕೆ

Update: 2022-01-07 16:37 GMT
ಬ್ರಿಟನ್ ಪ್ರಧಾನಿ ಜಾನ್ಸನ್

ಲಂಡನ್, ಜ.7: ಲಸಿಕೆ ವಿರೋಧಿ ಪ್ರಚಾರಕರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಇದೊಂದು ಅಸಂಬದ್ಧ ವರ್ತನೆ ಎಂದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಮುಂಬೊ-ಜಂಬೊವನ್ನು(ಗೊಂದಲಮಯ ಅಥವಾ ಅರ್ಥಹೀನ ಭಾಷೆ) ಪೋಸ್ಟ್ ಮಾಡುತ್ತಿರುವ ಲಸಿಕೆ ವಿರೋಧಿ ಪ್ರಚಾರಕರಿಗೆ ಒಂದು ಮಾತು ಹೇಳಬಯಸುತ್ತೇನೆ : ಅವರು ಮಾಡುತ್ತಿರುವುದು ಒಂಚೂರೂ ಸರಿಯಲ್ಲ. ನಾನು ಈ ರೀತಿ ಮಾತಾಡಿರುವುದನ್ನು ನೀವು ಈ ಹಿಂದೆ ಕೇಳಿರಲಿಕ್ಕಿಲ್ಲ. ಏಕೆಂದರೆ ಈ ದೇಶದಲ್ಲಿ ನಾವು ಸ್ವಯಂಪ್ರೇರಿತ ದೃಷ್ಟಿಕೋನವನ್ನು ಹೊಂದಿರುವುದು ಮುಖ್ಯವಾಗಿದೆ ಮತ್ತು ನಾವು ಸ್ವಯಂ ಪ್ರೇರಿತ ದೃಷ್ಟಿಕೋನವನ್ನು ಹೊಂದಲಿದ್ದೇವೆ. ಇತರ ಯುರೋಪಿಯನ್ ದೇಶಗಳು ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸುತ್ತಿವೆ. ಇದಕ್ಕೆ ಒಪ್ಪದಿದ್ದವರಿಗೆ ದಂಡ ವಿಧಿಸಲು ನಿರ್ಧರಿಸಿವೆ ಎಂದವರು ಹೇಳಿದ್ದಾರೆ. ಲಸಿಕಾಕರಣ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ಧಿಗಾರರ ಜತೆ ಅವರು ಮಾತನಾಡುತ್ತಿದ್ದರು.

ತೀವ್ರ ಒತ್ತಡ ಮತ್ತು ಸಮಸ್ಯೆಯ ಮಧ್ಯೆಯೂ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಎನ್ಎಚ್ಎಸ್(ರಾಷ್ಟ್ರೀಯ ಆರೋಗ್ಯ ಸೇವೆ), ನಮ್ಮ ವೈದ್ಯರು ಮತ್ತು ದಾದಿಯರ ಆದರ್ಶ ಕಾರ್ಯದ ಜತೆಗೇ, ಲಸಿಕಾಕರಣದ ಬಗ್ಗೆ ಸಂಪೂರ್ಣ ಅಸಂಬದ್ಧತೆಯನ್ನು ಪ್ರದರ್ಶಿಸುವ ಜನರಿದ್ದಾರೆ ಎಂಬುದು ನಿಜಕ್ಕೂ ದುರಂತವಾಗಿದೆ ಎಂದು ಜಾನ್ಸನ್ ಹೇಳಿದ್ದಾರೆ.

ಯುರೋಪ್ ದೇಶಗಳಲ್ಲಿ ಸೋಂಕು ಪ್ರಕರಣ ಗರಿಷ್ಟವಾಗಿರುವ ದೇಶಗಳಲ್ಲಿ ಬ್ರಿಟನ್ ಕೂಡಾ ಸೇರಿದೆ. ನವೆಂಬರ್ ಅಂತ್ಯದಲ್ಲಿ ಒಮೈಕ್ರಾನ್ ಸೋಂಕು ಕಾಣಿಸಿಕೊಂಡ ಬಳಿಕ ದೇಶದಲ್ಲಿ ಕೊರೋನ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದ್ದು ಕೊರೋನ ಸೋಂಕಿಗೆ ಸಂಬಂಧಿಸಿದ ಸಾವಿನ ಪ್ರಮಾಣ 1,50,000ಕ್ಕೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News