×
Ad

ಕ್ಯಾಪಿಟಲ್ ಹಿಲ್ಸ್ ಘಟನೆಯ ಬಗ್ಗೆ ಬೈಡನ್ ಹೇಳಿಕೆ ರಾಜಕೀಯ ಡ್ರಾಮಾ : ಟ್ರಂಪ್ ಇದಿರೇಟು‌

Update: 2022-01-07 22:50 IST
 ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಜ.7: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿರಂತರ ಬೆದರಿಕೆಯಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಟ್ರಂಪ್, ಬೈಡನ್ ರಾಜಕೀಯ ಡ್ರಾಮಾ ಮಾಡುತ್ತಿದ್ದಾರೆ. ಕ್ಯಾಪಿಟಲ್ ಹಿಲ್ಸ್ ಘಟನೆಯನ್ನು ಬಳಸಿಕೊಂಡು ಅಮೆರಿಕವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣ ವಿಫಲವಾಗಿರುವ ಬೈಡನ್, ಇದೀಗ ಈ ವಾಸ್ತವವನ್ನು ಮರೆ ಮಾಚಲು ರಾಜಕೀಯ ಡ್ರಾಮಾದ ಮೊರೆ ಹೋಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

’ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಮೇಲೆ ನಡೆದ ಆಕ್ರಮಣ ಮತ್ತು ದಂಗೆ ಪ್ರಕರಣದ ವಾರ್ಷಿಕ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಧ್ಯಕ್ಷ ಬೈಡನ್ ‘ ಟ್ರಂಪ್ ಮತ್ತವರ ಬೆಂಬಲಿಗರು ಚುನಾವಣಾ ಸುಳ್ಳುಗಳೊಂದಿಗೆ ಪ್ರಜಾಪ್ರಭುತ್ವದ ಗಂಟಲಿಗೆ ಕಠಾರಿ ಹಿಡಿದಿದ್ದರು. ನಮ್ಮ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಅಧ್ಯಕ್ಷರೊಬ್ಬರು ಚುನಾವಣೆಯಲ್ಲಿ ಸೋತಿರುವುದನ್ನು ಒಪ್ಪಿಕೊಳ್ಳದೆ, ಕ್ಯಾಪಿಟಲ್ ಹಿಲ್ಸ್ ಗೆ ಆಕ್ರಮಣ ನಡೆಸುವಂತೆ ಬೆಂಬಲಿಗರನ್ನು ಪ್ರಚೋದಿಸಿ ಅಧಿಕಾರದ ಶಾಂತಿಯುತ ವರ್ಗಾವಣೆಯನ್ನು ತಡೆಯಲು ಪ್ರಯತ್ನಿಸಿದರು. ಅಮೆರಿಕದ ಆಡಳಿತ ವ್ಯವಸ್ಥೆಗೆ ತೀವ್ರ ಬೆದರಿಕೆ ಒಡ್ಡಿದ್ದರು. ಗೆದ್ದರೆ ಮಾತ್ರ ದೇಶವನ್ನು ಪ್ರೀತಿಸುವುದು ಎಂಬ ಧೋರಣೆ ಇದಾಗಿದೆ ಎಂದು ಹೇಳಿದ್ದರು.

ಇದಕ್ಕೆ ಎದಿರೇಟು ನೀಡಿರುವ ಟ್ರಂಪ್, ಡೆಮೊಕ್ರಾಟ್ಸ್‌ಗಳು ಅಮೆರಿಕವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಜನವರಿ 6ರ (ಕ್ಯಾಪಿಟಲ್ ಹಿಲ್ಸ್ ಪ್ರಕರಣ ನಡೆದ ದಿನ) ಘಟನೆಯನ್ನು ಸದಾ ನೆನಪಿಸುವ ಮೂಲಕ ಜನರಲ್ಲಿ ಭೀತಿ ಮೂಡಿಸಿ ದೇಶವನ್ನು ವಿಭಜಿಸುವ ಉದ್ದೇಶ ಇದಾಗಿದೆ. ಅವರ ಸುಳ್ಳು ಮತ್ತು ಧ್ರುವೀಕರಣ ಪ್ರಯತ್ನಗಳನ್ನು ಅಮೆರಿಕದ ಜನತೆ ಗಮನಿಸುತ್ತಿದ್ದಾರೆ ಎಂದಿದ್ದಾರೆ.

ಬೈಡನ್ ಇಡೀ ವಿಶ್ವದ ಎದುರು ಅಮೆರಿಕವನ್ನು ನಗೆಪಾಟಲಿಗೆ ಗುರಿಯಾಗಿಸಿದ್ದಾರೆ. ಕೋವಿಡ್ ಸೋಂಕು ನಿಯಂತ್ರಣದಲ್ಲಿ ನಾವು ಕೈಚೆಲ್ಲಿದ್ದೇವೆ, ಇಂಧನದ ಸ್ವಾವಲಂಬನೆಯನ್ನೂ ಕಳೆದುಕೊಂಡಿದ್ದೇವೆ. ಹಣದುಬ್ಬರ ಗಗನಕ್ಕೇರಿದೆ, ಸೇನೆಯಲ್ಲಿ ಗೊಂದಲವಿದೆ. ಅಫ್ಘಾನಿನಿಂದ ನಮ್ಮ ವಾಪಸಾತಿ ಅಥವಾ ಶರಣಾಗತಿಯು ಬಹುಷಃ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಮುಜುಗುರದ ದಿನವಾಗಿದೆ. ಇನ್ನೂ ಹಲವು ವಿಷಯಗಳಿವೆ ಎಂದು ಟ್ರಂಪ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News