×
Ad

ಉದ್ಧವ್ ಠಾಕ್ರೆ ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಕೆ: ಬಿಜೆಪಿ ಮುಖಂಡ ಜಿತೆನ್ ಗಜಾರಿಯ ವಿರುದ್ಧ ಕೇಸ್

Update: 2022-01-07 23:16 IST
ಉದ್ಧವ್ ಠಾಕ್ರೆ ಮತ್ತು ಪತ್ನಿ ರಶ್ಮಿ ಠಾಕ್ರೆ(file photo:PTI)

ಮುಂಬೈ,ಜ.7: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿಯನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರಿಗೆ ಹೋಲಿಸಿ ಟ್ವೀಟ್ ಮಾಡಿರುವ ಬಿಜೆಪಿಯ ಸಾಮಾಜಿಕ ಜಾಲತಾಣದ ಉಸ್ತುವಾರಿ ಜಿತೆನ್ ಗಜಾರಿಯಾ ವಿರುದ್ಧ ಪುಣೆಯ ಸೈಬರ್ ಪೊಲೀಸ್ ದಳವು ಶುಕ್ರವಾರ ಪ್ರಕರಣ ದಾಖಲಿಸಿದೆ.

ವಿವಾದಿತ ಟ್ವೀಟ್‌ಗೆ ಸಂಬಂಧಿಸಿ ಮುಂಬೈನ ಪೊಲೀಸರ ಸೈಬರ್ ಸೆಲ್ ಘಟಕವು ಗುರುವಾರ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿ ಗುರುವಾರ ಗಜಾರಿಯಾ ಅವರನ್ನು ನಾಲ್ಕು ತಾಸಿಗೂ ಅಧಿಕ ಸಮಯ ವಿಚಾರಣೆ ನಡೆಸಿದ ಮರುದಿನವೇ ಪುಣೆ ಸೈಬರ್ ಪೊಲೀಸ್ ದಳವು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆಯವರನ್ನು ಮರಾಠಿ ರಾಬ್ರಿ ದೇವಿ ಎಂದು ಬಣ್ಣಿಸಿ ಅವರ ಭಾವಚಿತ್ರವನ್ನು ಟ್ವೀಟ್ ಮಾಡಿದ್ದಕ್ಕಾಗಿ ಗಜಾರಿಯಾ ವಿರುದ್ಧ ದೂರು ದಾಖಲಾಗಿತ್ತು.

ಗಜಾರಿಯಾ ಅವರನ್ನು ಬಂಧಿಸಲು ಪುಣೆ ಸೈಬರ್ ಪೊಲೀಸರ ತಂಡವೊಂದು ಅವರ ನಿವಾಸಕ್ಕೆ ಶುಕ್ರವಾರ ತೆರಳಿತ್ತಾದರೂ ಅವರು ಅಲ್ಲಿ ಇರಲಿಲ್ಲವೆಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ಜಾತಿ ಹಾಗೂ ಧರ್ಮಕ್ಕೆ ಸಂಬಂಧಿಸಿದ ವಿವಾದಾತ್ಮಕ ಪೋಸ್ಟ್ ಮಾಡಿರುವ ಆರೋಪವನ್ನು ಕೂಡಾ ಗಜಾರಿಯಾ ಎದುರಿಸುತ್ತಿದ್ದಾರೆ ಅವರ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 153ಎ,500,505(2) ಅಡಿ ಪ್ರಕರಣ ದಾಖಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News