×
Ad

ಭಾರತದಲ್ಲಿ ಹಿಂದೂ-ಮುಸ್ಲಿಂ ಏಕತೆಯನ್ನು ಬೆಂಬಲಿಸಿದ ಅಟ್ಟೋಮನ್ ಯುಗದ ಟರ್ಕಿಯ ದಿನಪತ್ರಿಕೆ

Update: 2022-01-08 10:19 IST

ಹಿಂದೂ-ಮುಸ್ಲಿಂ ದಂಗೆ

1913ರ ಜುಲೈ 25ರ ಸಂಚಿಕೆಯಲ್ಲಿ ಕಾನ್ಪುರದಲ್ಲಿ ನಡೆದ ದಂಗೆಯ ಘಟನೆಯನ್ನು ಎಚ್ಚರಿಕೆಯಿಂದ ವರದಿ ಮಾಡಲಾಗಿದೆ. ಬ್ರಿಟಿಷ್ ಅಧಿಕಾರಿಗಳು ಬ್ರಿಟಿಷರ ವಸಾಹತುಶಾಹಿಯ ವಿರುದ್ಧದ ಹಿಂದೂ-ಮುಸ್ಲಿಮ್ ಒಗ್ಗಟ್ಟನ್ನು ದುರ್ಬಲಗೊಳಿಸಲು ಈ ಕೋಮುಗಲಭೆಯನ್ನು ದುರ್ಬಳಕೆ ಮಾಡಿಕೊಂಡರು ಎಂದು ವರದಿ ಹೇಳಿದೆ. ಮದ್ರಾಸ್(ಚೆನ್ನೈಯಲ್ಲಿ) ಹಿಂದೂ-ಮುಸ್ಲಿಮ್ ವ್ಯಾಪಾರಿಗಳು ಒಗ್ಗಟ್ಟಿನಿಂದ ವಾಣಿಜ್ಯ ಮಹಾಮಂಡಳಿ(ಛೇಂಬರ್ ಆಫ್ ಕಾಮರ್ಸ್) ಸ್ಥಾಪಿಸಿದ್ದರು ಎಂದು ಪತ್ರಿಕೆಯ ಪ್ರತಿನಿಧಿ ಎಸ್.ಎಂ. ತೌಫೀಕ್ ಉಲ್ಲೇಖಿಸಿದ್ದಾರೆ.

ಅಟ್ಟೋಮನ್ ಸಾಮಾಜ್ರ್ಯ ಯುಗದ ಹಲವು ದಿನಪತ್ರಿಕೆಗಳ ಕಡತಗಳನ್ನು ಟರ್ಕಿ ಸರಕಾರ ಡಿಜಿಟಲೀಕೃತ (ಅಂಕೀಕೃತಗೊಳಿಸುವುದು) ರೂಪದಲ್ಲಿ ಸಂಗ್ರಹಿಸಿದ್ದು ಇವು ಅಟ್ಟೋಮನ್ ಸಮಾಜ, ಸಂಸ್ಕೃತಿ ಮತ್ತು ರಾಜಕೀಯದ ಕುರಿತು ಹೊಸ ತಿಳುವಳಿಕೆಯನ್ನು ಒದಗಿಸುತ್ತದೆ. ಈ ಹಿಂದಿನ ಅಟ್ಟೋಮನ್ ದಿನಪತ್ರಿಕೆಗಳಲ್ಲಿ ‘ದಿ ಸಬೀಲುರ್ರಿಶಾದ್’ ಎಂಬ ಪತ್ರಿಕೆ ಅತ್ಯಂತ ಜನಪ್ರಿಯವಾಗಿತ್ತು ಮತ್ತು ಭಾರತದ ವ್ಯವಹಾರಗಳನ್ನು ಅತ್ಯಂತ ನಿಕಟವಾಗಿ ಗಮನಿಸಿ ವರದಿ ಮಾಡುತ್ತಿತ್ತು.

ಈ ಪಾಕ್ಷಿಕ ಪತ್ರಿಕೆಯನ್ನು 1908ರಲ್ಲಿ ಅಬ್ದುಲ್ಲಾ ಝೈನ್‌ಲ್ ಆಬಿದೀನ್ ಮತ್ತು ಎಚ್. ಅಶ್ರಫ್ ಈದಿಫ್ ಅವರು ‘ಸಿರಾತೆ ಮುಸ್ತಕೀಮ್’ ಎಂಬ ಹೆಸರಿನಲ್ಲಿ ಆರಂಭಿಸಿದ್ದು ಮುಹಮ್ಮದ್ ಆಕಿಫ್ ಮುಖ್ಯ ಸಂಪಾದಕರಾಗಿದ್ದರು. ಹಲವು ಬಾರಿ ಪ್ರಕಟನೆ ನಿಲ್ಲಿಸುವ ಅಥವಾ ಹೆಸರು ಬದಲಿಸುವ ಒತ್ತಡಕ್ಕೆ ಒಳಗಾದ ಈ ಪತ್ರಿಕೆ 1912ರಲ್ಲಿ ‘ದಿ ಸಬೀಲುರ್ರಿಶಾದ್’ ಎಂಬ ಹೆಸರಿನಲ್ಲಿ ಪ್ರಕಟಗೊಂಡಿತು. ಟರ್ಕಿಯ ರಾಷ್ಟ್ರೀಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಮತ್ತು ನಂತರದ ದಿನದಲ್ಲಿ ಟರ್ಕಿಯ ರಾಷ್ಟ್ರಗೀತೆ ಬರೆದ ಮುಹಮ್ಮದ್ ಆಕಿಫ್ ಪ್ರಧಾನ ಸಂಪಾದಕರಾಗಿದ್ದರು. ಸಂಪಾದಕೀಯ ಬಳಗದವರು ದಕ್ಷಿಣ ಏಶ್ಯ, ಮಧ್ಯಪ್ರಾಚ್ಯ ಮತ್ತು ಯುರೋಪ್‌ಗಳಲ್ಲಿ ವ್ಯಾಪಕ ಪ್ರವಾಸ ಮಾಡಿ ಟರ್ಕಿಯ ಆಗುಹೋಗುಗಳ ಬಗ್ಗೆ ಅಲ್ಲಿ ಅರಿವು ಮೂಡಿಸಿ ಟರ್ಕಿಗೆ ಬೆಂಬಲ ಕ್ರೋಡೀಕರಿಸುವ ಕಾರ್ಯ ಮಾಡಿದ್ದರು. ಸಬೀಲುರ್ರಿಶಾದ್ ಪ್ರಕಟಣೆ ಆರಂಭಿಸಿದ ಸಂದರ್ಭದಲ್ಲಿ ಬ್ರಿಟಿಷರು ಮತ್ತು ಅಟ್ಟೋಮನ್‌ರ ಸಂಬಂಧ ಕ್ಷೀಣಿಸಲಾರಂಭಿಸಿತ್ತು. ಮೊದಲನೆಯ ಮಹಾಯುದ್ಧದ ನಂತರ ಟರ್ಕಿಶ್ ಪ್ರಾಂತಗಳ ಭಾಗಗಳು ಮಿತ್ರರಾಷ್ಟ್ರಗಳ ನಿಯಂತ್ರಣದಲ್ಲಿದ್ದವು.

ಸಬೀಲುರ್ರಿಶಾದ್ ಪತ್ರಿಕೆಯ ಪ್ರತಿನಿಧಿಗಳು ಭಾರತದ ವ್ಯವಹಾರಗಳ ಬಗ್ಗೆ ವರದಿ ಮಾಡಲು ಆರಂಭಿಸಿದಾಗ, ಭಾರತ ಮತ್ತು ಟರ್ಕಿಯ ಭವಿಷ್ಯಕ್ಕೆ ಸಂಬಂಧಿಸಿದ ರಾಜಕೀಯ ಸಮಸ್ಯೆಗಳ ದೀರ್ಘ ಪಟ್ಟಿ ಅವರ ಗಮನಕ್ಕೆ ಬಂತು. ಸಬೀಲುರ್ರಿಶಾದ್‌ಗೆ ಭಾರತದ ವ್ಯವಹಾರಗಳ ವಿಷಯದಲ್ಲಿ ನಿಯಮಿತವಾಗಿ ಲೇಖನ ಬರೆಯುತ್ತಿದ್ದವರಲ್ಲಿ ಅಬ್ದುಲ್ ರಷೀದ್ ಇಬ್ರಾಹೀಮ್, ಅಹ್ಮದ್ ಹಲೀಲ್, ಅಶ್ರಫ್ ಎಡಿಪ್, ಉಮರ್ ರಿಝಾ ಡೊಗ್ರಲ್ ಪ್ರಮುಖರಾಗಿದ್ದರು. 1908ರಲ್ಲಿ ಭಾರತದ ಮೂಲಕ ಜಪಾನ್‌ಗೆ ತೆರಳಿದ್ದ ಸಂದರ್ಭ ಅಬ್ದುಲ್ ರಷೀದ್ ಇಬ್ರಾಹೀಮ್ ತಾನು ಭೇಟಿ ನೀಡಿದ ಪ್ರದೇಶದ ಬಗ್ಗೆ ಸಿರಾತೆ ಮುಸ್ತಕೀಮ್ ಮತ್ತು ಸಬೀಲುರ್ರಿಶಾದ್‌ನಲ್ಲಿ ಸುದೀರ್ಘವಾಗಿ ವಿವರಿಸಿದ್ದರು.

ಭಾರತದ ಕುರಿತ ಒಂದು ಲೇಖನದಲ್ಲಿ ಅವರು ‘‘ಭಾರತ ವಿಶ್ವದ ಅತ್ಯಂತ ಪವಿತ್ರ ಸ್ಥಳ ಎಂದು ಹೇಳಿದರೆ ತಪ್ಪಾಗಲಾರದು’’ ಎಂದು ಬರೆದಿದ್ದಾರೆ. ಪ್ರವಾದಿ ಆದಮ್ ಭಾರತದ ಬಳಿಯ ಸ್ರಾಂದಿಪ್(ಶ್ರೀಲಂಕಾ)ನಲ್ಲಿ ಬಂದಿಳಿದರು ಎನ್ನಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಜತೆಯಾಗಿ ಹೋರಾಡಬೇಕು ಎಂದು ಅಬ್ದುಲ್ ರಷೀದ್ ಇಬಾಹೀಮ್ ಸಲಹೆ ನೀಡಿರುವುದನ್ನು ಅವರ ಜೀವನಚರಿತ್ರೆಕಾರ ಸಲೀಮ್ ಮುಹಮ್ಮದ್ ಒತ್ತಿಹೇಳಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ವಿಶ್ಲೇಷಿಸುವ ಸುದೀರ್ಘ ಲೇಖನವನ್ನು 1922ರಲ್ಲಿ ಅಬ್ದುಲ್ ರಷೀದ್ ಇಬ್ರಾಹೀಮ್ ಬರೆದರು. ಈ ಲೇಖನದಲ್ಲಿ 1921ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಅಧ್ಯಕ್ಷ ಹಕೀಮ್ ಅಜ್ಮಲ್ ಅಹ್ಮದ್‌ಖಾನ್ ನೇತೃತ್ವದಲ್ಲಿ ನಡೆದ ಅಹ್ಮದಾಬಾದ್ ಅಧಿವೇಶನದ ಉಲ್ಲೇಖವಿದೆ. ಇದು ಬ್ರಿಟಿಷ್ ಆಡಳಿತದ ವಿರುದ್ಧ ಎಲ್ಲಾ ಭಾರತೀಯರೂ ಒಗ್ಗೂಡಲು ದೊರೆತ ಬಲವಾದ ಸಂದೇಶ ಎಂದವರು ಹೇಳಿದ್ದಾರೆ. ‘‘ಭಾರತವು ಧರ್ಮ, ಭಾಷೆ, ನಂಬಿಕೆಯ ಅತ್ಯಂತ ವೈವಿಧ್ಯಮಯ ದೇಶವಾಗಿದೆ. ಆದರೂ ಅವರೊಳಗಿನ ಭಿನ್ನಾಭಿಪ್ರಾಯಗಳು ಅವರ ಸ್ವಾತಂತ್ರ್ಯದ ಕನಸನ್ನು ಹಾಳು ಮಾಡುತ್ತವೆ. ಎಲ್ಲಾ ಧರ್ಮಗಳ ಭಾರತೀಯರು ತೋರಿದ ಏಕತೆಗೆ ಭಾರತೀಯ ಖಿಲಾಫತ್ ಅಭಿಯಾನ ಒಂದು ಉತ್ತಮ ಉದಾಹರಣೆಯಾಗಿದೆ’’ ಎಂದು ಅವರು ಈ ಲೇಖನದಲ್ಲಿ ಬರೆದಿದ್ದಾರೆ.

ಅಬ್ದುಲ್ ರಷೀದ್ ಇಬ್ರಾಹೀಮ್ ಬಳಿಕ ಎಸ್.ಎಂ. ತೌಫೀಕ್ 1912-13ರ ಅವಧಿಯಲ್ಲಿ ಭಾರತೀಯ ನಗರಗಳಲ್ಲಿ ವ್ಯಾಪಕ ಪ್ರವಾಸ ಮಾಡಿ ತಮ್ಮ ಪ್ರವಾಸಕಥನವನ್ನು 37 ಕಂತಿನ ಧಾರಾವಾಹಿಯಾಗಿ ‘ಹಿಂದ್ ಯೆಲುಂಡ’ (ಭಾರತಕ್ಕೆ ಹೋಗುವ ದಾರಿಯಲ್ಲಿ) ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.

ಸಬೀಲುರ್ರಿಶಾದ್ ಪಾಕ್ಷಿಕ ದಿವಂಗತ ಸಂಪ್ರದಾಯವಾದಿ ಅಟ್ಟೋಮನ್ ರಾಜಕಾರಣಿಗಳ ಪತ್ರಿಕೆ ಎನಿಸಿತ್ತು. ಇಸ್ಲಾಂ, ರಾಷ್ಟ್ರೀಯತೆ ಮತ್ತು ಮುಸ್ಲಿಮ್ ಅಸ್ಮಿತೆಯ ಸಂಕೀರ್ಣ ಸಂಬಂಧವನ್ನು ಅರಿತುಕೊಳ್ಳಲು ಇದರಿಂದ ಅನುಕೂಲವಾಗಿತ್ತು. ರವೀಂದ್ರನಾಥ್ ಟಾಗೋರ್, ಮಹಾತ್ಮಾ ಗಾಂಧಿ, ಮೌಲಾನಾ ಅಬುಲ್ ಕಲಾಮ್ ಆಝಾದ್, ಮುಹಮ್ಮದ್ ಅಲಿ ಜೌಹರ್, ಶೌಕತ್ ಅಲಿ, ಶಿಬ್ಲಿ ನೂಮಾನಿ ಹಾಗೂ ಇತರ ಹಲವು ಭಾರತದ ಮುಖಂಡರು, ಭಾರತದ ಇಸ್ಲಾಮಿಕ್ ವಿದ್ವಾಂಸರ ಬಗ್ಗೆ ಉದಾತ್ತ ಶ್ಲಾಘನೆ ಮಾಡಿರುವುದು ಈ ಪತ್ರಿಕೆಯ ಅನನ್ಯ ತಿಳುವಳಿಕೆಯ ದ್ಯೋತಕವಾಗಿದೆ.

ಸುಮಾರು 2 ದಶಕಗಳ ಬಳಿಕ ಧಾರ್ಮಿಕ ನೆಲೆಯಲ್ಲಿ ಭಾರತ ವಿಭಜನೆಯಾಗಬಹುದು ಎಂಬ ಬಗ್ಗೆ ಯಾವುದೇ ಸುಳಿವು ಇಲ್ಲದೆ ಭಾರತದ ಆಗುಹೋಗುಗಳ ಬಗ್ಗೆ ವರದಿ ಮಾಡುತ್ತಿತ್ತು. ಮೌಲಾನಾ ಆಝಾದ್ ಒಬ್ಬ ರಾಜಕಾರಣಿ ಮಾತ್ರವಲ್ಲ, ಜಾಗತಿಕ ಮುಸ್ಲಿಮ್ ಸಮುದಾಯದಲ್ಲಿ ಹೊಸ ಜಾಗೃತಿಯನ್ನು ಪ್ರೇರೇಪಿಸಿದ ಮಹಾನ್ ಇಸ್ಲಾಮಿಕ್ ಚಿಂತಕ ಎಂದು ಪತ್ರಿಕೆ ಉಲ್ಲೇಖಿಸಿತ್ತು ಮತ್ತು ಅವರು ಬರೆದ ಲೇಖನ, ಭಾಷಣಗಳನ್ನು ತಕ್ಷಣ ಅನುವಾದಿಸಿ ಸಬೀಲುರ್ರಿಶಾದ್ ಹಾಗೂ ಇತರ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಈ ಅವಧಿಯಲ್ಲಿ ಭಾರತದ ಆಗುಹೋಗುಗಳ ಬಗ್ಗೆ ಹೆಚ್ಚು ಸಕ್ರಿಯವಾಗಿ ಪತ್ರಿಕೆ ಬೆಳಕು ಚೆಲ್ಲಿದೆ. ಮೌಲಾನಾ ಅಬುಲ್ ಕಲಾಮ್ ಅವರು ಕಲ್ಕತ್ತಾ (ಈಗಿನ ಕೋಲ್ಕತಾ)ದ ನಗರದಲ್ಲಿ ಮಾಡಿದ ಪ್ರಸಿದ್ಧ ಭಾಷಣವನ್ನು ಅಟ್ಟೋಮನ್ ಟರ್ಕಿಗೆ ಅನುವಾದಿಸಿ ಪ್ರಕಟಿಸಲಾಯಿತು ಹಾಗೂ ಬಳಿಕ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ರಾಂಪುರ, ಲಕ್ನೊ, ಹಮೀರ್‌ಪುರ ಇತ್ಯಾದಿ ಸಣ್ಣ ನಗರಗಳಲ್ಲಿ ನಡೆದ ಕಾರ್ಯಕ್ರಮಗಳ ವರದಿಯೂ ಪ್ರಕಟವಾದವು. 1908ರಿಂದ 1925ರ ಅವಧಿಯಲ್ಲಿ ಭಾರತಕ್ಕೆ ಸಂಬಂಧಿಸಿದ ಸುಮಾರು 500 ಲೇಖನ, ಸುದ್ದಿ ಅಥವಾ ಅನುವಾದಗಳು ಸಬೀಲುರ್ರಿಶಾದ್‌ನಲ್ಲಿ ಪ್ರಕಟವಾದವು. ಇದರಲ್ಲಿ ಬಾಂಬೆ, ಹೈದರಾಬಾದ್ ಹಾಗೂ ಇತರ ನಗರಗಳಿಗೆ ಭೇಟಿ ನೀಡಿದ ಅಬ್ದುಲ್ ರಷೀದ್ ಇಬ್ರಾಹೀಮ್ ಅವರು ಕಳುಹಿಸಿದ ವರದಿ ಸೇರಿವೆ. ಭಾರತದ ರಾಜಕೀಯ ವ್ಯವಹಾರಗಳನ್ನು ಟರ್ಕಿಯ ಓದುಗರಿಗೆ ಪರಿಚಯಿಸಿದ ಪ್ರಥಮ ಟರ್ಕಿ ಪತ್ರಕರ್ತ, ಕಾರ್ಯಕರ್ತರಾಗಿರುವ ಇಬ್ರಾಹೀಮ್ ಅವರ ಬರಹಗಳಿಂದ ಅಟ್ಟೋಮನ್ ರಾಜಕಾರಣಿಗಳು ಭಾರತದ ರಾಜಕೀಯವನ್ನು ನಿಕಟವಾಗಿ ಗಮನಿಸಲು ಸಾಧ್ಯವಾಯಿತು ಮತ್ತು ಇದರಿಂದ ಭಾರತದ ಆಗುಹೋಗುಗಳ ಕುರಿತು ಅಟ್ಟೋಮನ್/ಟರ್ಕಿಯ ಆಸಕ್ತಿ ತೀವ್ರಗತಿಯಲ್ಲಿ ಹೆಚ್ಚಿತು. ಈ ಅವಧಿಯಲ್ಲಿ ಭಾರತದ ಮುಸ್ಲಿಮರು ಅಟ್ಟೋಮನ್ ಸರಕಾರದ ಹಿಜಾಝ್ ರೈಲ್ವೇ ಯೋಜನೆ ಮತ್ತು ಟರ್ಕಿಯಲ್ಲಿ ಬಂದರುಗಳ ಸ್ಥಾಪನೆಗೆ ನೆರವಾದರು. ಈ ಪತ್ರಿಕೆಯ ಬಗ್ಗೆ ಇರಾನ್‌ನಲ್ಲಿನ ಭಾರತದ ಕಾರ್ಯಕರ್ತರಿಗೆ ಹೆಚ್ಚಿನ ಆಸಕ್ತಿ ಮೂಡಿತು. ಜಪಾನ್‌ನಲ್ಲಿ ಉಳಿದುಕೊಂಡಿದ್ದ ಸಂದರ್ಭ ಅಬ್ದುಲ್ ರಷೀದ್ ಅವರು ರವೀಂದ್ರನಾಥ್ ಟಾಗೋರ್ ಮತ್ತು ಸುಭಾಷ್‌ಚಂದ್ರ ಬೋಸ್‌ರನ್ನು ಭೇಟಿ ಮಾಡಿರುವ ಸಾಧ್ಯತೆಯಿದೆ.

1914ರಲ್ಲಿ ವಿಶ್ವಯುದ್ಧ ಆರಂಭವಾ ದಂದಿನಿಂದ ಪತ್ರಿಕೆ ಯುದ್ಧಕ್ಕೆ ಸಂಬಂಧಿಸಿದ ವಿಷಯ, ವಿಶೇಷವಾಗಿ ಭಾರತದಲ್ಲಿನ ಮುಸ್ಲಿಮರ ಸ್ಥಿತಿಗೆ ಸಂಬಂಧಿಸಿದ ವರದಿ ಪ್ರಕಟಿಸಿತು. ಅಟ್ಟೋಮನ್ ಉಸ್ಮಾನಿಯ ಖಿಲಾಫತ್‌ಗೆ ಸಂಬಂಧಿಸಿದ ಬ್ರಿಟಿಷರ ನಿಲುವು ಮತ್ತು ಮಕ್ಕಾ ಹಾಗೂ ಮದೀನಾದ 2 ಪವಿತ್ರ ಮಸೀದಿಗಳ ಕುರಿತ ವರದಿಗೆ ವಿಶೇಷ ಗಮನ ನೀಡಲಾಯಿತು. ಇದೇ ಸಂದರ್ಭ ಖಿಲಾಫತ್ ಚಳವಳಿಯೂ ಆರಂಭವಾಯಿತು. 1924ರಲ್ಲಿ ರವೀಂದ್ರನಾಥ್ ಟಾಗೋರರು ಜಪಾನ್‌ಗೆ ತೆರಳಿದ ಸಂದರ್ಭ ಅಬ್ದುಲ್ ರಷೀದ್ ಇಬ್ರಾಹೀಮ್ ಅಲ್ಲಿಯೇ ಇದ್ದರು ಮತ್ತು ಅವರು ಟಾಗೋರರ ಭಾಷಣಗಳನ್ನು ನಿಕಟವಾಗಿ ಗಮನಿಸಿ ಈ ಕುರಿತ ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು.

  ಈ ಪತ್ರಿಕೆಯಲ್ಲಿ ಅತ್ಯಂತ ವ್ಯಾಪಕವಾಗಿ ಪ್ರಕಟಿಸಲಾದ ವಿಷಯಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟವೂ ಒಂದಾಗಿದೆ. ಬಳಿಕ ಖಿಲಾಫತ್ ಚಳವಳಿಯ ವರದಿಗೆ ಪತ್ರಿಕೆ ವಿಶೇಷ ಆದ್ಯತೆ ನೀಡಿತು. ಭಾರತದ ಚರಿತ್ರೆ, ಸಂಸ್ಕೃತಿ ಮತ್ತು ಸಮಾಜಕ್ಕೆ ಸಂಬಂಧಿಸಿದ ವಿಷಯಗಳು ಪತ್ರಿಕೆಯಲ್ಲಿ ವ್ಯಾಪಕವಾಗಿ ಪ್ರಕಟಗೊಂಡವು. ಜಪಾನ್, ಏಶ್ಯನ್ ದೇಶಗಳ ರಾಜಕೀಯ, ಹಿಜಾಝ್ ರೈಲ್ವೇ ಯೋಜನೆ, ಮಕ್ಕಾ ಮತ್ತು ಮದೀನಾದ ಬಗ್ಗೆ ಬ್ರಿಟಿಷರ ಕಾರ್ಯನೀತಿ, ದೇವ್‌ಬಂದ್, ನದ್ವತುಲ್ ಉಲಮ ಮುಂತಾದ ಭಾರತದಲ್ಲಿನ ಇಸ್ಲಾಮಿಕ್ ಪಾಂಡಿತ್ಯ ಕೇಂದ್ರಗಳು, ಮೌಲಾನಾ ಅಬುಲ್ ಕಲಾಮ್ ಆಝಾದ್ ಮತ್ತು ಅಲ್ಲಾಮ ಶಿಬ್ಲಿ ನೂಮಾನಿಯವರ ಭಾಷಣ, ಉಪನ್ಯಾಸಗಳನ್ನು ಗಮನಾರ್ಹವಾಗಿ ಉಲ್ಲೇಖಿಸಲಾಗಿದೆ. 1911ರಲ್ಲಿ ಎಸ್. ಎಂ. ತೌಫೀಕ್ ಬರೆದ ಲೇಖನದಲ್ಲಿ ಭಾರತದಲ್ಲಿ ಯುನಾನಿ ಚಿಕಿತ್ಸೆ ಎಂದೇ ಕರೆಯಲಾಗುವ ಪರ್ಶಿಯನ್-ಅರಬರ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನೂ ಉಲ್ಲೇಖಿಸಲಾಗಿದೆ.

ರಾಜಕೀಯ ವಿಷಯಗಳಲ್ಲಿ ಭಾರತದ ಖಿಲಾಫತ್ ಚಳವಳಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಗಾಂಧಿ, ಆಝಾದ್, ಭಾರತದ ಕುರಿತ ಬ್ರಿಟಿಷರ ಸಮ್ಮೇಳನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 1920ರಲ್ಲಿ ಪತ್ರಿಕೆಯ ಸಂಚಿಕೆಯಲ್ಲಿ ‘ಅರಬ್ ಮತ್ತು ಟರ್ಕಿ ಸರಕಾರ ತಮ್ಮಿಳಗಿನ ಭಿನ್ನಾಭಿಪ್ರಾಯ ಪರಿಹರಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಭಾರತೀಯ ಖಿಲಾಫತ್ ಚಳವಳಿ ಪ್ರಸ್ತಾವಿಸಿದೆ’ ಎಂದು ಬರೆಯಲಾಗಿದೆ. 551-552 ಸಂಚಿಕೆಯಲ್ಲಿ ಅಲಿ ಸಹೋದರರು ಎಂದೇ ಪ್ರಸಿದ್ಧರಾದ ಮುಹಮ್ಮದ್ ಅಲಿ ಜೌಹರ್ ಮತ್ತು ಶೌಕತ್ ಅಲಿ ಕುರಿತ ವಿವರವಾದ ಲೇಖನವಿದೆ. ಬ್ರಿಟಿಷ್ ವಿರೋಧಿ ರಾಜಕಾರಣದಲ್ಲಿ ಅಲಿ ಸಹೋದರರಿಗೆ ಎಲ್ಲಾ ಮುಸ್ಲಿಮರು ಮತ್ತು ಮುಸ್ಲಿಮೇತರರ ಭಾರೀ ಬೆಂಬಲವಿತ್ತು. ಅಲಿ ಸಹೋದರರಿಗೆ, ಇಸ್ತಾಂಬುಲ್ ಮತ್ತು ಮಕ್ಕಾ ಹಾಗೂ ಮದೀನಾದಂತಹ ಇತರ ಇಸ್ಲಾಮಿಕ್ ಪವಿತ್ರ ಸ್ಥಳಗಳ ಮೇಲಿನ ಬ್ರಿಟಿಷರ ಸ್ವಾಧೀನದ ಸಂದರ್ಭ ಅಟ್ಟೋಮನ್ ಖಿಲಾಫತ್ ಚಳವಳಿಗೆ ನೀಡಿದ ಬೆಂಬಲವು ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಹೋರಾಟಕ್ಕಿಂತ ಭಿನ್ನವಾಗಿರಲಿಲ್ಲ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಹಿಂದೂಗಳಲ್ಲಿ ಬಲಗೊಳ್ಳುತ್ತಿರುವ ರಾಷ್ಟ್ರೀಯತೆಯ ಭಾವನೆ:

1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ(ಸಿಪಾಯಿ ದಂಗೆ) ವಿಫಲಗೊಂಡ ಬಳಿಕ ಭಾರತದ ಜನಸಾಮಾನ್ಯರಲ್ಲಿ, ವಿಶೇಷವಾಗಿ ಹಿಂದೂಗಳಲ್ಲಿ ರಾಷ್ಟ್ರೀಯತೆಯ ಭಾವನೆ ಬಲಗೊಳ್ಳತೊಡಗಿತು. ಬ್ರಿಟಿಷ್ ಸರಕಾರದಲ್ಲಿ ಉದ್ಯೋಗಿಯಾಗಿದ್ದ ಹಿಂದೂ ವ್ಯಕ್ತಿಯನ್ನು ಜನ ಗೇಲಿ ಮಾಡತೊಡಗಿದರು. ಇದು ಯಾವ ಮಟ್ಟಿಗೆ ಹೋಯಿತೆಂದರೆ, ಬ್ರಿಟಿಷರ ಜತೆ ಕೆಲಸ ಮಾಡುತ್ತಿದ್ದ ಹಿಂದೂಗಳು ಮುಖ ಮರೆಸಿಕೊಂಡು ಓಡಾಡುವಂತಾಯಿತು. ಹಲವರು ಕೆಲಸಕ್ಕೆ ರಾಜೀನಾಮೆ ನೀಡಿದರು.

ಈ ರಾಷ್ಟ್ರೀಯವಾದಿ ಭಾವನೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ರಾಜಕೀಯ ಹೋರಾಟದಲ್ಲಿ ಪ್ರತಿಧ್ವನಿಸಿತು. 1913ರಲ್ಲಿ ಕರಾಚಿಯಲ್ಲಿ ನಡೆದ ಅಧಿವೇಶನದ ಅಧ್ಯಕ್ಷರಾಗಿ ಸೈದ್ ಮುಹಮ್ಮದ್ ಖಾನ್ ಆಯ್ಕೆಗೊಂಡರು ಎಂದು ಪತ್ರಿಕೆಯ ಪ್ರತಿನಿಧಿ ಎಸ್.ಎಂ. ತೌಫೀಕ್ ಬರೆದಿದ್ದಾರೆ. ಅಲ್ಲದೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೈಫಲ್ಯದ ಬಳಿಕ ಆಧುನಿಕ ಶಿಕ್ಷಣ ಪದ್ಧತಿಯ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಮೂಡಿತು. ಪಾಶ್ಚಿಮಾತ್ಯ ದೇಶಗಳೊಂದಿಗೆ ಸ್ಪರ್ಧಿಸಬೇಕಿದ್ದರೆ ಆಧುನಿಕ ಶಿಕ್ಷಣ ಅತ್ಯಗತ್ಯ ಎಂದು ಅರಿತುಕೊಂಡ ಹಿಂದೂಗಳು ಕೋಲ್ಕತಾದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು ಮತ್ತು ತಮ್ಮ ಮಕ್ಕಳನ್ನು ಗಣಿತ ಮತ್ತು ವಿಜ್ಞಾನದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಯುರೋಪ್‌ಗೆ ಕಳುಹಿಸಿದರು ಎಂದು ಪತ್ರಿಕೆಯ ಪ್ರತಿನಿಧಿ ವರದಿ ಮಾಡಿದ್ದಾರೆ.

1913ರ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾದ ‘ಟರ್ಕಿಯಿಂದ ಭಾರತದ ಮುಸ್ಲಿಮರ ನಿರೀಕ್ಷೆಗಳು’ ಎಂಬ ಲೇಖನದಲ್ಲಿ 2 ಕುತೂಹಲಕಾರಿ ನಿರೀಕ್ಷೆಗಳನ್ನು ಪ್ರಸ್ತುತಪಡಿಸಲಾಗಿದೆ. 1. ಅಟ್ಟೋಮನ್‌ಗಳು ಜಪಾನ್‌ನ ಏಳಿಗೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಕಲಿಯಬೇಕು. ಎರಡನೆಯದು, ವ್ಯಾಪಾರದ ಪ್ರಮಾಣ ಚಿಕ್ಕದಾಗಿದ್ದರೂ ಟರ್ಕಿ ಭಾರತ ಸೇರಿದಂತೆ ಏಶ್ಯದ ಎಲ್ಲಾ ದೇಶಗಳೊಂದಿಗೆ ನಿಕಟ ವ್ಯಾಪಾರ ಸಂಬಂಧ ಬೆಳೆಸಿಕೊಳ್ಳಬೇಕು ಎಂಬುದು ಭಾರತದ ಮುಸ್ಲಿಮರ ನಿರೀಕ್ಷೆಗಳು ಎಂದು ಲೇಖನ ಹೇಳಿದೆ. 1911ರ ಜುಲೈ 11ರ ಸಂಚಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮೇಡಂ ಬಿಕಾಜಿ ರುಸ್ತುಂ ಕಾಮ ಅವರು ಸ್ಥಾಪಿಸಿದ ಪ್ಯಾರಿಸ್ ಮೂಲದ ‘ವಂದೇ ಮಾತರಂ’ ಪತ್ರಿಕೆಯ ಬಗ್ಗೆ ಮಾಹಿತಿ ನೀಡಲಾಗಿದೆ.

ಟರ್ಕಿಯ ಓದುಗರಿಗೆ ಹಿಂದೂ ಧರ್ಮವನ್ನು ಪರಿಚಯಿಸುವ ವಿವರವಾದ ಲೇಖನ ಬರೆಯುವುದಾಗಿ ತೌಫೀಕ್ ಹೇಳಿದ್ದರು. ಸಾಮಾನ್ಯ ರಾಜಕೀಯ ಭವಿಷ್ಯದ ನಿಟ್ಟಿನಲ್ಲಿ ಭಾರತದ ವಿವಿಧ ಧರ್ಮಗಳ ನಡುವಿನ ಒಗ್ಗಟ್ಟಿನ ಅಗತ್ಯವನ್ನು ಸಬೀಲುರ್ರಿಶಾದ್ ಒತ್ತಿಹೇಳಿದೆ. ಭಾರತದ ವೈವಿಧ್ಯತೆಯನ್ನು ಮತ್ತು ಭಾರತವನ್ನು ಬಹುತ್ವದ ವಿಚಾರ ಮತ್ತು ಮೌಲ್ಯಗಳ ದೇಶವನ್ನಾಗಿ ಮಾಡಲು ಅದರ ನಾಯಕರು ಮಾಡುವ ಪ್ರಯತ್ನಗಳನ್ನು ಶ್ಲಾಘಿಸುವ ಮೂಲಕ ಭಾರತದ ಆಗುಹೋಗುಗಳ ಬಗ್ಗೆ ಟರ್ಕಿಯ ಮಾನವತಾವಾದಿ ವಿಶ್ವ ದೃಷ್ಟಿಕೋನವನ್ನು ಪತ್ರಿಕೆಯ ವರದಿಗಳು ಬಿಂಬಿಸಿವೆ.

ಕೃಪೆ : www.timeturk.com

Writer - ಉಮೈರ್ ಅನಸ್

contributor

Editor - ಉಮೈರ್ ಅನಸ್

contributor

Similar News