×
Ad

ಸರಕಾರ ಪತನದ ಸಂಚಿನ ಆರೋಪ: ಕಝಕಿಸ್ತಾನ ಮಾಜಿ ಬೇಹುಗಾರಿಕಾ ಮುಖ್ಯಸ್ಥನ ಬಂಧನ

Update: 2022-01-08 23:43 IST
ಸಾಂದರ್ಭಿಕ ಚಿತ್ರ

ಅಲ್ಮಾಟಿ,ಜ.8: ಹಲವಾರು ದಿನಗಳಿಂದ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ  ಕಝಕಿಸ್ತಾನದ ಮುಖ್ಯ ನಗರವಾದ ಅಲ್ಮಾಟಿಯ ರಸ್ತೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸರಕಾರ ವಿರೋಧಿ ಹಿಂಸಾಚಾರ ಭುಗಿಲೆದ್ದ ಬಳಿಕ ವಜಾಗೊಂಡಿದ್ದ ಕಝಕಿಸ್ತಾನದ ಆಂತರಿಕ ಬೇಹುಗಾರಿಕಾ ಏಜೆನ್ಸಿಯ ಮಾಜಿ ವರಿಷ್ಠ ಕರೀಮ್ ಮಾಸಿಮೊವ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ. ಮ್ಯಾಸಿಮೊವ್ ಅವರನ್ನು ರಾಜದ್ರೋಹವೆಸಗಿದ ಆರೋಪದಲ್ಲಿ ಬಂಧಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ಕಝಕಿಸ್ತಾನದ ಸ್ಥಾಪಕ ಅಧ್ಯಕ್ಷರಾದ ನುಸ್ರುಲ್ತಾನ್ ನಝರ್‌ಬಯೆವ್ ಅವರ ನಿಕಟವರ್ತಿಯಾಗಿದ್ದ ಕರೀಮ್ ಮ್ಯಾಸಿಮೊವ್ ವಿರುದ್ಧ ರಾಜದ್ರೋಹದ ಆರೋಪಕ್ಕೆ ಸಂಬಂಧಿಸಿ ಜನರಿ 6ರಂದು ತನಿಖೆಯನ್ನು ಆರಂಭಿಸಲಾಗಿದ್ದು, ಆ ದಿನವೇ ಅವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಕಝಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ(ಕೆಎನ್‌ಬಿ) ಹೇಳಿಕೆಯೊಂದರಲ್ಲಿ ತಿಳಿಸಿದೆ. ಅವರನ್ನೀಗ ಇತರ ಆರೋಪಿಗಳ ಜೊತೆ ತಾತ್ಕಾಲಿಕ ಬಂಧನಕೇಂದ್ರದಲ್ಲಿ ಇರಿಸಿರುವುದಾಗಿ ಅದು ಹೇಳಿದೆ.

ಸರಕಾರದ ಪದಚ್ಯುತಿಗೆ ಮಾಸಿಮೊವ್ ಅವರು ಸಂಚು ನಡೆಸಿದ್ದಾರೆಂಬ ಆರೋಪದ ಬಗ್ಗೆ ಕೆಎನ್‌ಬಿಯು ಯಾವುದೇ ವಿವರಗಳನ್ನು ನೀಡಿಲ್ಲ.

ಈ ವಾರ ಅಲ್ಮಾಟಿ ಸೇರಿದಂತೆ ಕಝಕಿಸ್ತಾನದ ವಿವಿಧೆಡೆ ಭುಗಿಲೆದ್ದ ಸರಕಾರಿ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಳಿಕ ಕನಿಷ್ಠ 26 ಮಂದಿ ಪ್ರತಿಭಟನಕಾರರನ್ನು ಭದ್ರತಾಪಡೆಗಳು ಹತ್ಯೆಗೈದಿದ್ದವು ಹಾಗೂ 18 ಕ್ಕೂ ಅಧಿಕ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆಯೆಂದು ಗೃಹ ಸಚಿವಾಲಯವು ತಿಳಿಸಿದೆ.

ದೇಶಾದ್ಯಂತ ಭುಗಿಲೆದ್ದಿರುವ ಸರಕಾರಿ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರತಿಭಟನಕಾರರನ್ನು ಗುಂಡಿಕ್ಕಿ ಕೊಲ್ಲುವಂತೆ ರಶ್ಯ ಬೆಂಬಲಿತ ಅಧ್ಯಕ್ಷ ಕಾಸಿಂ ಜೊಮಾರ್ಟ್ ಟೊಕಾಯೆವ್ ಶುಕ್ರವಾರ ಭದ್ರತಾಪಡೆಗಳಿಗೆ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News