ನ್ಯೂಯಾರ್ಕ್ ಅಗ್ನಿದುರಂತ: 19 ಮಂದಿ ಸಜೀವ ದಹನ

Update: 2022-01-10 02:35 GMT

ನ್ಯೂಯಾರ್ಕ್: ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ 9 ಮಕ್ಕಳು ಸೇರಿದಂತೆ 19 ಮಂದಿ ಸಜೀವ ದಹನವಾದ ಘಟನೆ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರ ಅನಾಹುತ ಇದಾಗಿದೆ ಎಂದು ನಗರದ ಅಗ್ನಿಶಾಮಕ ಆಯುಕ್ತರು ಹೇಳಿದ್ದಾರೆ.

ಮೇಯರ್ ಎರಿಕ್ ಅದಾಮಸ್ ಅವರ ಹಿರಿಯ ಸಲಹೆಗಾರ ಸ್ಟೀಫನ್ ರಿಂಗೆಲ್ ಅವರು ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ. 60ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು, ಈ ಪೈಕಿ 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ತೀವ್ರ ಹೊಗೆಯಿಂದ ಉಸಿರುಗಟ್ಟಿ ಜೀವ ಕಳೆದುಕೊಂಡವರು ಎಂದು ಎಫ್‌ಡಿಎನ್‌ವೈ ಆಯುಕ್ತ ಡೇನಿಯಲ್ ನೀಗ್ರೊ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈಸ್ಟ್ 181ನೇ ಬೀದಿಯ 19 ಮಹಡಿ ಹೊಂದಿದ್ದ ಬ್ರಾನೆಕ್ಸ್ ಟ್ವಿನ್ ಪಾರ್ಕ್ ಅಪಾರ್ಟ್‌ಮೆಂಟ್ಸ್‌ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಶಮನಗೊಳಿಸಲು 200ಕ್ಕೂ ಹೆಚ್ಚು ಮಂದಿ ಅಗ್ನಿಶಾಮಕ ಸಿಬ್ಬಂದಿ ಶ್ರಮಿಸಿದ್ದಾಗಿ ಎಫ್‌ ಡಿಎನ್‌ವೈ ವಿವರಿಸಿದೆ. ಪ್ರತಿ ಮಹಡಿಯಲ್ಲೂ ಸಂತ್ರಸ್ತರು ಬಿದ್ದಿರುವುದನ್ನು ಅಗ್ನಿಶಾಮಕ ಸಿಬ್ಬಂದಿ, ಹೃದಯ ಸ್ತಂಭನ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಿಬ್ಬಂದಿಯನ್ನು ಹೊರತೆಗೆದರು. "ಇದು ನಮ್ಮ ನಗರದಲ್ಲಿ ಕಂಡು ಕೇಳರಿಯದ ದುರಂತ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಇದೆ"

1990ರಲ್ಲಿ ಹ್ಯಾಪಿ ಲ್ಯಾಂಡ್ ಸೋಶಿಯಲ್ ಕ್ಲಬ್‌ನಲ್ಲಿ 87 ಮಂದಿಯನ್ನು ಬಲಿ ಪಡೆದ ಭೀಕರ ದುರಂತದ ತೀವ್ರತೆಗೆ ಈ ಘಟನೆಯನ್ನು ನೀಗ್ರೊ ಹೋಲಿಸಿದ್ದಾರೆ. ಮಾಜಿ ಪ್ರೇಯಸಿಯ ಜತೆ ವಾಗ್ವಾದಕ್ಕೆ ಇಳಿದ ವ್ಯಕ್ತಿಯೊಬ್ಬ ಕಟ್ಟಡಕ್ಕೆ ಬೆಂಕಿ ಹಚ್ಚಿ ಆ ದುರಂತ ಸಂಭವಿಸಿತ್ತು.

ಭಾನುವಾರ ಸಂಭವಿಸಿದ ಅಗ್ನಿದುರಂತ ಎರಡು ಮತ್ತು ಮೂರನೇ ಮಹಡಿಯ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಳ್ಳುವ ಮೂಲಕ ಸಂಭವಿಸಿದೆ. ಅಪಾರ್ಟ್‌ಮೆಂಟ್‌ನ ಬಾಗಿಲು ತೆರೆದಿರುವುದು ಅಗ್ನಿಶಾಮಕ ಸಿಬ್ಬಂದಿಗೆ ಕಂಡುಬಂದಿದ್ದು, ಇದು ಬೆಂಕಿ ಹಾಗೂ ಹೊಗೆ ಮೇಲ್ಮುಖವಾಗಿ ಹರಡಲು ಕಾರಣವಾಯಿತು ಎಂದು ವಿವರಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಎಂಟು ಮಕ್ಕಳು ಸೇರಿದಂತೆ 12 ಮಂದಿ ಫಿಲಿಡೆಲ್ಫಿಯಾದ ಮನೆಯೊಂದರಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News