ಪಾಕಿಸ್ತಾನ: ಭಾರೀ ಹಿಮಪಾತ; ವಾಹನದೊಳಗೆ ಸಿಲುಕಿ ಕನಿಷ್ಟ 21 ಮಂದಿ ಸಾವು
ಇಸ್ಲಮಾಬಾದ್ : ಪಾಕಿಸ್ತಾನದ ಮುರೀ ಗಿರಿಧಾಮದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದರಿಂದ ಹಿಮದ ರಾಶಿಯಡಿ ವಾಹನ ಸಿಲುಕಿಬಿದ್ದು ಅದರೊಳಗಿದ್ದ 9 ಮಕ್ಕಳ ಸಹಿತ ಕನಿಷ್ಟ 21 ಮಂದಿ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಮ ಆವರಿಸುವ ಪ್ರಖ್ಯಾತ ಮುರಿ ಗಿರಿಧಾಮಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು. ಹವಾಮಾನ ವೈಪರೀತ್ಯದ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಎಚ್ಚರಿಕೆಯನ್ನು ಕಡೆಗಣಿಸಿ ಸಾವಿರಾರು ಜನ ಹಿಮದ ರಾಶಿಯನ್ನು ವೀಕ್ಷಿಸಲು ತೆರಳಿದ್ದರು. ಏಕಾಏಕಿ ಹಿಮಪಾತ ಸಂಭವಿಸಿ ವಾಹನಗಳು ಹಿಮದ ರಾಶಿಯಡಿ ಮುಚ್ಚಿಹೋದವು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಹಿಮ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಮಂಜುಗಡ್ಡೆಯ ಚಳಿಯಿಂದ ಮರಗಟ್ಟಿ ಕನಿಷ್ಟ 21 ಮಂದಿ ಮೃತರಾಗಿದ್ದರು ಎಂದು ವರದಿಯಾಗಿದೆ.
ಈ ದುರಂತದ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಆಘಾತ ವ್ಯಕ್ತಪಡಿಸಿದ್ದು ಘಟನೆಯ ಬಗ್ಗೆ ತ ನಿಖೆಗೆ ಆದೇಶಿದ್ದಾರೆ. ಜನವರಿ 6ರಿಂದ 9ರವರಗೆ ಮುರಿ ಗಿರಿಧಾಮದಲ್ಲಿ ಭಾರೀ ಹಿಮಪಾತವಾಗಲಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮುರೀ ಗಿರಿಧಾಮವನ್ನು ವಿಪತ್ತು ಪೀಡಿತ ಪ್ರದೇಶ ಎಂದು ಶನಿವಾರ ಅಧಿಕಾರಿಗಳು ಘೋಷಿಸಿದ್ದಾರೆ. ಹಿಮಪಾತದಿಂದ ರಸ್ತೆಯಲ್ಲಿ ವಾಹನ ಸಂಚಾರ ಬಹುತೇಕ ಅಸಾಧ್ಯವಾಗಿದೆ ಎಂದು ವರದಿಯಾಗಿದೆ.