ವಿದಾಯದ ಟೆಸ್ಟ್ ಪಂದ್ಯದಲ್ಲಿ ಭಾವುಕರಾದ ನ್ಯೂಝಿಲ್ಯಾಂಡ್ ಬ್ಯಾಟರ್ ರಾಸ್ ಟೇಲರ್

Update: 2022-01-11 14:25 GMT
Photo: Twitter/@sparknzsport

ವೆಲ್ಲಿಂಗ್ಟನ್: ನ್ಯೂಝಿಲ್ಯಾಂಡ್ ಕ್ರಿಕೆಟ್‌ನ ದಂತಕಥೆಗಳಲ್ಲಿ ಒಬ್ಬರಾದ ರಾಸ್ ಟೇಲರ್ ಬಾಂಗ್ಲಾದೇಶ ವಿರುದ್ಧ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ತಮ್ಮ ಕೊನೆಯ ಟೆಸ್ಟ್ ಆಡುತ್ತಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಟೇಲರ್ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 28 ರನ್ ಗಳಿಸಿದ್ದರು. ಅವರು ತಮ್ಮ ಅಂತಿಮ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಹ್ಯಾಗ್ಲಿ ಓವಲ್ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆಯ ಮೂಲಕ ಸ್ವಾಗತ ನೀಡಿದರು. ಬಾಂಗ್ಲಾದೇಶ ತಂಡದಿಂದಲೂ ಗೌರವವನ್ನು ಪಡೆದರು.

ತನ್ನ ಕೊನೆಯ ಟೆಸ್ಟ್‌ಗೆ ಮೊದಲು ನ್ಯೂಝಿಲ್ಯಾಂಡ್ ರಾಷ್ಟ್ರಗೀತೆ ಮೊಳಗುತ್ತಿದ್ದ ಸಂದರ್ಭದಲ್ಲಿ ಅನುಭವಿ ಬ್ಯಾಟರ್ ಕಣ್ಣೀರಿಟ್ಟರು.

2007ರಲ್ಲಿ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ನಂತರ ಟೇಲರ್ ನ್ಯೂಝಿಲ್ಯಾಂಡ್ ಪರ 112 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 19 ಶತಕಗಳು ಮತ್ತು 35 ಅರ್ಧ ಶತಕಗಳನ್ನು ಒಳಗೊಂಡಂತೆ 7,684 ರನ್ ಗಳಿಸಿದ್ದಾರೆ.

ಕಳೆದ ವರ್ಷ ಭಾರತದ ವಿರುದ್ಧ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅನ್ನು ಗೆದ್ದ ಕಿವೀಸ್ ತಂಡದ ಭಾಗವಾಗಿದ್ದರು.

ಈಗ ನಡೆಯುತ್ತಿರುವ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಸೋತ ನಂತರ ನ್ಯೂಝಿಲ್ಯಾಂಡ್ ಎರಡನೇ ಟೆಸ್ಟ್‌ನಲ್ಲಿ 395 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವ ಮೂಲಕ ಸುಸ್ಥಿತಿಯಲ್ಲಿದೆ.

ನಾಯಕ ಟಾಮ್ ಲ್ಯಾಥಮ್ (252) ಅದ್ಭುತ ದ್ವಿಶತಕ ಹಾಗೂ  ನಂ.3 ಬ್ಯಾಟರ್ ಡೆವೊನ್ ಕಾನ್ವೆ 109 ರನ್ ಸಿಡಿಸುವುದರೊಂದಿಗೆ ಕಿವೀಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 521 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ನಂತರ ಟ್ರೆಂಟ್ ಬೌಲ್ಟ್ ಐದು ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 126 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿದರು. ಸೋಮವಾರದಂದು ವೇಗಿ ಬೌಲ್ಟ್  300 ವಿಕೆಟ್‌ಗಳನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಪೂರ್ಣಗೊಳಿಸಿದರು.

ನ್ಯೂಝಿಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ 1-0 ಮುನ್ನಡೆ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News