ಯುಎಇಗೆ ತೆರಳುವ ಪ್ರಯಾಣಿಕರಿಗೆ ಕಾಯುವ ಶಿಕ್ಷೆ, ದುಬಾರಿ ವೆಚ್ಚ!

Update: 2022-01-11 05:39 GMT

ಮಂಗಳೂರು, ಜ.10: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ವಿವಿಧ ಪ್ರಾಂತ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ದಾಖಲೆಗಳ ಪರಿಶೀಲನೆ, ಕೋವಿಡ್ ಟೆಸ್ಟ್ ಇತ್ಯಾದಿಗಾಗಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೇಳು ಗಂಟೆಗಳ ಕಾಲ ‘ಕಾಯುವ ಶಿಕ್ಷೆ’ಯಾಗುತ್ತಿದೆ ಎಂಬ ವ್ಯಾಪಕ ಅಸಮಾಧಾನ ಜನರಿಂದ ಕೇಳಿಬಂದಿದೆ.

ಅಂತರ್‌ರಾಷ್ಟ್ರೀಯ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಮುನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಿ ಕೋವಿಡ್ ಸೋಂಕು ಇಲ್ಲ ಎಂದು ದೃಢೀಕರಿಸುವ ಸರ್ಟಿಫಿಕೆಟ್ ಕೊಂಡೊಯ್ಯುವುದು ಕಡ್ಡಾಯವಾಗಿದೆ. ಈ ಸರ್ಟಿಫಿಕೆಟ್‌ನ ಅವಧಿಯು 48 ಗಂಟೆಯಾಗಿರುತ್ತದೆ. ಆದರೆ ಯುಎಇ ದೇಶಕ್ಕೆ ತೆರಳುವ ಪ್ರಯಾಣಿಕರು ಹೊರಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸರ್ಟಿಫಿಕೇಟ್ ಪಡೆದಿದ್ದರೂ ವಿಮಾನ ನಿಲ್ದಾಣ ಪ್ರವೇಶಿಸುವ ಮುನ್ನ ಮತ್ತೊಮ್ಮೆ ನಿಲ್ದಾಣದ ಆವರಣದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಇದು ಮಾನಸಿಕವಾಗಿ ಭಾರೀ ಹಿಂಸೆಯಾಗಿ ಪರಿಣಮಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಯುಎಇ ದೇಶದ ಅಬುಧಾಬಿ, ದುಬೈ, ಶಾರ್ಜಾ, ರಾಸಲ್ ಖೈಮಾ, ಫುಜೇರಾ, ಅಜ್ಮಾನ್‌ಗಳಿಗೆ ತೆರಳಬೇಕಾದರೆ ಕಡ್ಡಾಯವಾಗಿ ವಿಮಾನ ನಿಲ್ದಾಣದಲ್ಲೂ ಕೋವಿಡ್ ಪರೀಕ್ಷೆ ನಡೆಸಬೇಕು ಎಂಬ ನಿಯಮವಿದೆ. ಇದಕ್ಕೆ ಪ್ರಯಾಣಿಕರು, ಅವರ ಮನೆಯವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಂಗಳೂರಿನ ಟ್ರಾವೆಲ್ ಸಂಸ್ಥೆಯ ಮಾಲಕರೊಬ್ಬರು ತಿಳಿಸುತ್ತಾರೆ.

ಹೊರಗೆ ಕೋವಿಡ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋದರೂ ಅದಕ್ಕೆ ಅಲ್ಲಿ ಮಾನ್ಯತೆಯೇ ಇಲ್ಲ. ವಿಮಾನ ನಿಲ್ದಾಣದ ಕೋವಿಡ್ ಟೆಸ್ಟ್ ಕೇಂದ್ರದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿಸಬೇಕಾಗುತ್ತದೆ. ಆದರೂ ಹೊರಗಿಂದ ಟೆಸ್ಟ್ ಮಾಡಿ ನೆಗೆಟಿವ್ ವರದಿ ತೆಗೆದುಕೊಂಡು ಹೋಗುವುದು ಕಡ್ಡಾಯ.! ಹೊರಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಭಿಸುವ ಕೋವಿಡ್ ಟೆಸ್ಟ್ ಅನ್ನು ವಿಮಾನ ನಿಲ್ದಾಣದೊಳಗೆ ಮಾಡಿಸಲು 3 ಸಾವಿರ ರೂ. ನೀಡಬೇಕಾಗುತ್ತದೆ. ಒಂದು ಕುಟುಂಬದ ನಾಲ್ಕೈದು ಮಂದಿ ಪ್ರಯಾಣಿಸುವುದಾದರೆ ತಲಾ 3 ಸಾವಿರ ರೂ. ನೀಡಿ ಕೋವಿಡ್ ಟೆಸ್ಟ್ ಮಾಡಿಸುವುದು ಅನಿವಾರ್ಯವಾಗಿದೆ. ಇದು ಯಾವ ನ್ಯಾಯ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

ಕೋವಿಡ್‌ನ ರೂಪಾಂತರಿ ಒಮೈಕ್ರಾನ್ ಸೋಂಕು ತಡೆಯುವ ನಿಟ್ಟಿನಲ್ಲಿ ಸರಕಾರ ವಿಮಾನ ನಿಲ್ದಾಣಗಳಲ್ಲಿ ಬಿಗಿ ತಪಾಸಣೆ ನಡೆಸುವುದು ಸಾಮಾನ್ಯವಾಗಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ತಕ್ಷಣ ಪ್ರಯಾಣಿಕರ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಈ ಸಂದರ್ಭ ಪ್ರವಾಸ ತೆರಳುವ ರಾಷ್ಟ್ರದ ಕ್ಯೂಆರ್ ಕೋಡ್ ಸ್ಕಾನ್ ಕೂಡ ಮಾಡಲಾಗುತ್ತದೆ. ಇದಕ್ಕೆ ಸಂಬಂಧಪಟ್ಟ ರಾಷ್ಟ್ರಗಳ ಅನುಮತಿ ಸಂದೇಶವೂ ಜೊತೆಗಿರಬೇಕು. ಈ ಮಧ್ಯೆ ಕೋವಿಡ್ ಟೆಸ್ಟ್‌ನ ವರದಿಗಾಗಿ ಕಾಯುವುದು, ಅದಕ್ಕಾಗಿ ಭಾರೀ ಖರ್ಚು ಭರಿಸುವುದು ಇತ್ಯಾದಿ ವಿದೇಶಕ್ಕೆ ತೆರಳುವ ಮಧ್ಯಮ ವರ್ಗದ ಪ್ರಯಾಣಿಕರಿಗೆ ಭಾರೀ ಹೊರೆಯಾಗಿ ಪರಿಣಮಿಸಿದೆ.

ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ವಿಮಾನ ಹೊರಡುವ 6 ಗಂಟೆ ಮೊದಲೇ ವಿಮಾನ ನಿಲ್ದಾಣ ತಲುಪಬೇಕು ಎಂದು ಹೇಳಲಾಗಿದೆ. ಅಂದರೆ ಮೂರುವರೆ ಗಂಟೆಯ ಪ್ರಯಾಣಕ್ಕೆ 6 ಗಂಟೆಯ ಪ್ರಕ್ರಿಯೆ ! ಬಳಿಕ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಅದರ ವರದಿ ಬರುವವರೆಗೆ ಕಾಯುವುದು ಅನಿವಾರ್ಯ.ಇನ್ನು ಕಾಸರಗೋಡು, ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದ ಪ್ರಯಾಣಿಕರು ಒಂದೆರಡು ಗಂಟೆಯ ಪ್ರಯಾಣ ಮಾಡಿ ವಿಮಾನ ನಿಲ್ದಾಣ ತಲುಪಬೇಕು. ಹಾಗಾಗಿ ಇವರಿಗೆ ಮೂರೂವರೆ ಗಂಟೆಗಳ ಪ್ರಯಾಣಕ್ಕೆ ಒಟ್ಟು ಎಂಟು ಗಂಟೆ ಪ್ರಯಾಣ ಹಾಗೂ ಕಾಯುವ ಕೆಲಸ. ಜೊತೆಗೆ ವಿಮಾನ ನಿಲ್ದಾಣದಲ್ಲಿ ಮತ್ತಷ್ಟು ಖರ್ಚು. ಕೆಲವು ಪ್ರಯಾಣಿಕರ ಜೊತೆ ಸಣ್ಣ ಮಕ್ಕಳು ಮತ್ತು ಹಿರಿಯ ನಾಗರಿಕರು ಕೂಡ ಇರುತ್ತಾರೆ. ಹೀಗಾಗಿ ಈ ಗಂಟೆಗಟ್ಟಲೆ ಕಾಯುವುದು ಮತ್ತು ಭಾರೀ ದುಡ್ಡು ಪಾವತಿಸುವುದು ನಮಗೆ ಶಿಕ್ಷೆಯಾಗಿದೆ ಎಂದು ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಪ್ರಯಾಣಿಕರನ್ನು ಬೀಳ್ಕೊಡಲು ಮನೆಮಂದಿಯೂ ಜೊತೆಗೂಡುವುದರಿಂದ ಮತ್ತಷ್ಟು ಸಮಸ್ಯೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಪ್ರತಿಕ್ರಿಯಿಸದ ಅಧಿಕಾರಿಗಳು

ಈ ಬಗ್ಗೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಹೊಣೆ ಹೊತ್ತ ಅದಾನಿ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳ ಪ್ರತಿಕ್ರಿಯೆಗಾಗಿ ‘ವಾರ್ತಾಭಾರತಿ’ ಸಂಪರ್ಕಿಸಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಪ್ರಯಾಣಿಕರ ಆಗ್ರಹ

ಮಂಗಳೂರು ವಿಮಾನ ನಿಲ್ದಾಣದಿಂದ ಪ್ರತೀ ದಿನ ದುಬೈಗೆ 2, ಅಬುಧಾಬಿ ಮತ್ತು ಶಾರ್ಜಾಕ್ಕೆ ತಲಾ ಒಂದೊಂದು ವಿಮಾನ ಹೊರಡುತ್ತದೆ. ಹೀಗೆ ದಿನನಿತ್ಯ 700ರಿಂದ 1,000 ಮಂದಿ ಯುಎಇ ರಾಷ್ಟ್ರಕ್ಕೆ ತೆರಳುತ್ತಾರೆ. ಕೋವಿಡ್ ಟೆಸ್ಟ್‌ಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಬೇಕು. ವಿಮಾನ ನಿಲ್ದಾಣದಲ್ಲಿ ಕೋವಿಡ್ ಟೆಸ್ಟ್ ಮಾಡಲೇಬೇಕು ಎಂದಾದರೆ ಹೊರಗೆ ಮಾಡಿಸುವ ಟೆಸ್ಟ್ ಅನ್ನು ರದ್ದುಪಡಿಸಬೇಕು. ವಿಮಾನ ನಿಲ್ದಾಣದಲ್ಲಿ ಕೋವಿಡ್ ಟೆಸ್ಟ್‌ಗೆ ಶುಲ್ಕ ಕಡಿಮೆ ಮಾಡಬೇಕು ಎಂಬುದು ಪ್ರಯಾಣಿಕರ ಆಗ್ರಹ.

ಪ್ರಯಾಣಿಕರ ಆಕ್ರೋಶ

ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ನಡೆಸುವುದಾದರೆ ಮತ್ತೆ ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಹೊರಗಡೆ ಯಾಕೆ ಪರೀಕ್ಷೆ ಮಾಡಿಸಬೇಕು? ಕೋವಿಡ್ ಪರೀಕ್ಷೆಯ ಹೆಸರಲ್ಲಿ ಪ್ರಯಾಣಿಕರನ್ನು ಆರೇಳು ಗಂಟೆಗಳ ಕಾಲ ಕಾಯಿಸಿ ಸತಾಯಿಸುವುದರಲ್ಲದೆ ಖಾಸಗಿ ಆಸ್ಪತ್ರೆಗಳಿಗಿಂತಲೂ ಅಧಿಕ ಶುಲ್ಕ ವಸೂಲಿ ಮಾಡುವುದು ಯಾತಕ್ಕೆ? ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇದು ಯಾವ ನ್ಯಾಯ?’

ಕೇರಳದ ಕಣ್ಣೂರು, ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ 2,400 ರೂ.ಪಾವತಿಸಿದರೆ ಸಾಕು. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರಂಭದಲ್ಲಿ 3,200 ರೂ. ವಸೂಲಿ ಮಾಡುತ್ತಿದ್ದರು. ಈಗ 3 ಸಾವಿರ ಶುಲ್ಕ ಪಡೆಯುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News