ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿ: ಭಾರತ ತಂಡಕ್ಕೆ ಜಯಂತ್, ಸೈನಿ ಸೇರ್ಪಡೆ, ಸುಂದರ್‌ಗೆ ಸ್ಥಾನವಿಲ್ಲ

Update: 2022-01-12 15:30 GMT
ಜಯಂತ್ ಯಾದವ್‌, Photo: AFP

ಮುಂಬೈ, ಜ.12: ಕೋವಿಡ್-19 ಸೋಂಕಿಗೆ ಒಳಗಾಗಿರುವ ಭಾರತದ ಆಫ್-ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ 3 ಪಂದ್ಯಗಳ ಏಕದಿನ ಸರಣಿಯಿಂದ ಬುಧವಾರ ಹೊರಗುಳಿದಿದ್ದಾರೆ. ಜನವರಿ 19ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಸುಂದರ್‌ರಿಂದ ತೆರವಾದ ಸ್ಥಾನಕ್ಕೆ ಜಯಂತ್ ಯಾದವ್‌ರನ್ನು ಆಯ್ಕೆ ಮಾಡಲಾಗಿದೆ.

ವೇಗದ ಬೌಲರ್ ಮುಹಮ್ಮದ್ ಸಿರಾಜ್ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೀಸಲು ಆಟಗಾರನಾಗಿ ವೇಗದ ಬೌಲರ್ ನವದೀಪ್ ಸೈನಿ ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಶಿಬಿರದ ವೇಳೆ ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ಟೀಮ್ ಇಂಡಿಯಾದ ಆಫ್-ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಸುಂದರ್ ಅವರು ಏಕದಿನ ಕ್ರಿಕೆಟ್ ತಂಡದ ಸದಸ್ಯರೊಂದಿಗೆ ಬುಧವಾರ ಕೇಪ್‌ಟೌನ್‌ಗೆ ಪ್ರಯಾಣಿಸಬೇಕಾಗಿತ್ತು. ಜನವರಿ 19ರಂದು ಆರಂಭವಾಗಲಿರುವ ಏಕದಿನ ಸರಣಿಗೆ ಮೊದಲು ತಂಡದ ಉಳಿದ ಸದಸ್ಯರನ್ನು ಸೇರಿಕೊಳ್ಳಬೇಕಾಗಿತ್ತು ಎಂದು ಬಿಸಿಸಿಐ ತಿಳಿಸಿದೆ.

ಭಾರತದ ಮಾಜಿ ವೇಗದ ಬೌಲರ್ ಚೇತನ್ ಶರ್ಮಾ ನೇತೃತ್ವದ ಐವರು ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿಯು ಸುಂದರ್‌ರಿಂದ ತೆರವಾದ ಸ್ಥಾನಕ್ಕೆ ಜಯಂತ್‌ರನ್ನು ಆಯ್ಕೆ ಮಾಡಿದೆ. ಸಿರಾಜ್ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಕಾಣಿಸಿಕೊಂಡಿರುವ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯು ಜನವರಿ 19ರಂದು ಪಾರ್ಲ್‌ನಲ್ಲಿ ಆರಂಭವಾಗಲಿದೆ. ಎರಡನೇ ಏಕದಿನವು ಜನವರಿ 21 ಹಾಗೂ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಜನವರಿ 23ರಂದು ನಡೆಯಲಿದೆ.
ಭಾರತದ ಏಕದಿನ ಕ್ರಿಕೆಟ್ ತಂಡ: ಕೆ.ಎಲ್.ರಾಹುಲ್(ನಾಯಕ), ಜಸ್‌ಪ್ರೀತ್ ಬುಮ್ರಾ(ಉಪ-ನಾಯಕ),ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್(ವಿಕೆಟ್‌ಕೀಪರ್),ಇಶಾನ್ ಕಿಶನ್(ವಿಕೆಟ್‌ಕೀಪರ್),ಯಜುವೇಂದ್ರ ಚಹಾಲ್, ಆರ್.ಅಶ್ವಿನ್,ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮುಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News