ಬೆಂಗಳೂರು: ರಕ್ತಚಂದನ ಅಕ್ರಮ ಸಾಗಾಟ ಪ್ರಕರಣ; ಇಬ್ಬರು ಪೊಲೀಸರು ಅಮಾನತು

Update: 2022-01-12 16:09 GMT

ಬೆಂಗಳೂರು, ಜ.12: ರಕ್ತಚಂದನ ಅಕ್ರಮ ಸಾಗಾಟ ಆರೋಪ ಪ್ರಕರಣ ಸಂಬಂಧ ಇಬ್ಬರು ಹೆಡ್ ಕಾನ್‍ ಸ್ಟೇಬಲ್‍ಗಳನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. 

ಗಿರಿನಗರ ಠಾಣೆಯ ಹೆಡ್ ಕಾನ್‍ಸ್ಟೇಬಲ್ ಮೋಹನ್ ಹಾಗೂ ಮಹದೇವಪುರ ಹೆಡ್ ಕಾನ್‍ಸ್ಟೇಬಲ್ ಮಮ್ತೇಶ್ ಗೌಡ ಅಮಾನತಾದ ಸಿಬ್ಬಂದಿ ಎಂದು ತಿಳಿದುಬಂದಿದೆ.

ಈ ಇಬ್ಬರೂ ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಸಿಸಿಬಿಯಿಂದ ಗಿರಿನಗರ ಹಾಗೂ ಮಹಾದೇವಪುರ ಠಾಣೆಗೆ ವರ್ಗಾವಣೆಯಾಗಿದ್ದರು. ಸಿಸಿಬಿಯಲ್ಲಿದ್ದ ವೇಳೆ ರಕ್ತಚಂದನ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದ ಸಿಸಿಬಿ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು. 

ಹೀಗಾಗಿ, ರಕ್ತಚಂದನ ಅಕ್ರಮಗಳ ಸಾಗಾಟ ಮತ್ತು ಆರೋಪಿಗಳ ಸಂಪರ್ಕ ಹೊಂದಿದ್ದರು. ಡಿ.15ರಂದು ಕಾರಿನಲ್ಲಿ ಬಂದು ಹೊಸಕೋಟೆ ಸಂತೆ ಸರ್ಕಲ್ ಬಳಿ ದಾಳಿ ನಡೆಸಿ,  ವಾಹನದಲ್ಲಿ ಸಾಗಿಸುತ್ತಿದ್ದ ರಕ್ತಚಂದನವನ್ನು ಜಪ್ತಿ ಮಾಡಿದ್ದರು. ಬಳಿಕ ಚಾಲಕನ ಮೇಲೆ ಹಲ್ಲೆ ನಡೆಸಿ ರಕ್ತಚಂದನದ ಸಮೇತ ಪರಾರಿಯಾಗಿದ್ದರು. 

ಆದರೆ, ಜಪ್ತಿ ಮಾಡಿದ ರಕ್ತಚಂದನದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಐದು ದಿನಗಳ ನಂತರ ಸ್ಥಳೀಯರು ಹೊಸಕೋಟೆ ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ. ಅಸಲಿಗೆ ಹೊಸಕೋಟೆ ಪೊಲೀಸರು ಯಾವುದೇ ದಾಳಿ ಹಾಗೂ ವಾಹನ ಜಪ್ತಿ ಮಾಡಿರಲಿಲ್ಲ. 

ಹೀಗಾಗಿ, ಸಾರ್ವಜನಿಕರು ಕೊಟ್ಟ ಮಾಹಿತಿ ಅನ್ವಯ ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News