×
Ad

ಶ್ರೀಲಂಕಾ: 2019ರ ಈಸ್ಟರ್ ಬಾಂಬ್ ದಾಳಿ ರಾಜಕೀಯ ಸಂಚಾಗಿತ್ತು: ಕೊಲಂಬೊದ ಆರ್ಚ್‌ಬಿಷಪ್ ಆರೋಪ; ಪೊಲೀಸರ ನಿರಾಕರಣೆ

Update: 2022-01-12 23:34 IST
2019ರ ಈಸ್ಟರ್ ಬಾಂಬ್ ದಾಳಿ(photo:PTI)

ಕೊಲಂಬೊ,ಜ.11: 2019ರಲ್ಲಿ ಶ್ರೀಲಂಕಾದಲ್ಲಿ ಈಸ್ಟರ್ ಆಚರಣೆ ಸಂದರ್ಭ ನಡೆದ ಸರಣಿ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 42 ಮಂದಿಯ ವಿರುದ್ಧ ದೋಷಾರೋಪ ಹೊರಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆಗ ವಿರೋಧಪಕ್ಷದಲ್ಲಿದ್ದ ಹಾಲಿ ಆಡಳಿತ ಪಕ್ಷದ ಪ್ರಭಾವಿ ರಾಜಪಕ್ಸೆ ಕುಟುಂಬಿಕರು ಅಧಿಕಾರಕ್ಕೇರುವ ಉದ್ದೇಶದಿಂದ ಈ ವಿಧ್ವಂಸಕ ದಾಳಿಯನ್ನು ನಡೆಸಿದ್ದರೆಂಬ ಕೊಲಂಬೊದ ಆರ್ಚ್‌ಬಿಶಪ್ ಮಾಲ್ಕಮ್ ಕಾರ್ಡಿನಲ್ ರಂಜಿತ್ ಅವರ ಆರೋಪಗಳನ್ನು ಶ್ರೀಲಂಕಾ ಪೊಲೀಸರು ತಳ್ಳಿಹಾಕಿದ್ದಾರೆ.

‘ಈಸ್ಟರ್ ಸಂದರ್ಭ ಬಾಂಬ್ ದಾಳಿಗಳು ನಡೆಯುವ ಬಗ್ಗೆ ಪೂರ್ವಭಾವಿ ಮಾಹಿತಿಯಿದ್ದರೂ, ಮತಗಳನ್ನು ಬಾಚಿಕೊಳ್ಳುವ ಏಕಮಾತ್ರ ಉದ್ದೇಶದಿಂದ ಅವುಗಳು ನಡೆಯುವುದಕ್ಕೆ ಅವಕಾಶ ನೀಡಲಾಗಿತ್ತು’’ ಎಂದು ಕಾರ್ಡಿನಲ್ ರಂಜಿತ್ ರವಿವಾರ ಆಪಾದಿಸಿದ್ದರು.

ಈ ಬಾಂಬ್ ದಾಳಿಗಳು ಹಾಲಿ ಸರಕಾರ (ಆಗಿನ ವಿರೋಧಪಕ್ಷ)ದ ಸಂಚಾಗಿತ್ತು ಹಾಗೂ ಈ ದಾಳಿಗಳ ತನಿಖೆಯ ಕುರಿತ ವಿವುರಗಳನ್ನು ಬಹಿರಂಗಪಡಿಸಲು ತನಿಖಾಧಿಕಾರಿಳು ಆಸಕ್ತಿಯನ್ನು ಹೊಂದಿಲ್ಲವೆಂದು ಅವರು ಹೇಳಿದ್ದರು.

ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಶ್ರೀಲಂಕಾ ಪೊಲೀಸರು 2019ರಲ್ಲಿ ನಡೆದ ಶ್ರೀಲಂಕಾದ ಈಸ್ಟರ್ ಬಾಂಬ್ ಸ್ಪೋಟಗಳಿಗೆ ಸಂಬಂಧಿಸಿ ಈವರೆಗೆ 12 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 42 ಮಂದಿಯನ್ನು ದೋಷಿಗಳನ್ನಾಗಿ ಮಾಡಲಾಗಿದೆ ಎಂದವರು ತಿಳಿಸಿದ್ದರು.

ಆರ್ಚ್‌ಬಿಶಪ್ ರಂಜಿತ್ ಅವರ ಈ ಆರೋಪವು ಶ್ರೀಲಂಕಾದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆಗಿನ ರಾಷ್ಟ್ರಾಧ್ಯಕ್ಷ ಸಿರಿಸೇನಾ ಹಾಗೂ ಪ್ರಧಾನಿ ರಾನಿಲ್ ವಿಕ್ರಮಸಿಂಘ ನೇತೃತ್ವದ ಸರಕಾರವು ಪೂರ್ವಬಾವಿ ಗುಪ್ತಚರ ಮಾಹಿತಿ ಲಭ್ಯವಾಗಿರುವ ಹೊರತಾಗಿಯೂ ದಾಳಿಗಳನ್ನು ತಡೆಗಟ್ಟಲುಅಸಮರ್ಥವಾಗಿದ್ದರೆಂದು ಆಗ ವಿರೋಧಪಕ್ಷಗಳು ವಾಗ್ದಾಳಿ ನಡೆಸಿದ್ದವು. ಈ ಭಯೋತ್ಪಾದಕ ದಾಳಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆಗಿನ ಅಧ್ಯಕ್ಷ ಸಿರಿಸೇನಾ ಅವರು ತನ್ನ ಅಧಿಕಾರಾವಧಿಯಲ್ಲಿ ಅಧ್ಯಕ್ಷೀಯ ಸಮಿತಿಯೊಂದನ್ನು ರಚಿಸಿದ್ದರು.

ತನಿಖೆ ನಡೆಸಿದ ಅಧ್ಯಕ್ಷೀಯ ಸಮಿತಿಯು , ಆಗಿನ ಅಧ್ಯಕ್ಷರಾದ ಸಿರಿಸೇನಾ ಹಾಗೂ ಫೆರ್ನಾಂಡೊ ಹಾಗೂ ಜಯಸುಂದರ ಸೇರಿದಂತೆ ಉನ್ನತ ರಕ್ಷಣಾ ಅಧಿಕಾರಿಗಳಿಗೆ ಬೇಹುಗಾರಿಕಾ ಮಾಹಿತಿಯಿದ್ದ ಹೊರತಾಗಿಯೂ ಅವುಗಳನ್ನು ನಿರ್ಲಕ್ಷಿಸಿದ್ದರೆಂದು ಆರೋಪಿಸಿತ್ತು ಹಾಗೂ ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು.

ಶ್ರೀಲಂಕಾದ ಈಸ್ಟರ್ ಬಾಂಬ್ ಪ್ರಕರಣದ ಪೊಲೀಸ್ ತನಿಖೆಯು ಅತ್ಯಂತ ಮಂದಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಆರ್ಚ್‌ಬಿಷಪ್ ರಂಜಿತ್ ಅವರು ನಿಯಮಿತವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದರು.

2019ರ ಎಪ್ರಿಲ್ 21ರಂದು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಮೂರು ಕ್ಯಾಥೋಲಿಕ್‌ಚರ್ಚ್‌ಗಳು ಹಾಗೂ ಹಲವು ವಿಲಾಸಿ ಹೊಟೇಲ್‌ಗಳ ಮೇಲೆ ನಡೆದ ಬಾಂಬ್ ದಾಳಿಗಳಲ್ಲಿ 11 ಮಂದಿ ಭಾರತೀಯರು ಸೇರಿದಂತೆ ಕನಿಷ್ಠ 270 ಮಂದಿ ಸಾವನ್ನಪ್ಪಿದ್ದರು ಹಾಗೂ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News