ತಪ್ಪು ತಿಳುವಳಿಕೆ: ತನ್ನದೇ ಯೋಧರನ್ನು ಗುಂಡಿಟ್ಟು ಹತ್ಯೆಗೈದ ಇಸ್ರೇಲ್ ಸೇನೆ

Update: 2022-01-13 17:18 GMT
ಸಾಂದರ್ಭಿಕ ಚಿತ್ರ(photo:twitter)

ಜೆರುಸಲೇಂ, ಜ.13: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಗಸ್ತು ತಿರುಗುತ್ತಿದ್ದ ಇಸ್ರೇಲ್ ನ ಇಬ್ಬರು ಸೇನಾಧಿಕಾರಿಗಳು ತಮ್ಮದೇ ಸೇನಾ ತುಕಡಿಯು ಪ್ರಮಾದದಿಂದ ಗುಂಡೇಟಿನಿಂದ ಮೃತಪಟ್ಟಿರುವುದಾಗಿ ಇಸ್ರೇಲ್ ನ ಸೇನೆ ಹೇಳಿದೆ.

ಮೇಜರ್ ಒಫೆಕ್ ಅಹರಾನ್ ಮತ್ತು ಮೇಜರ್ ಇತಮರ್ ಎಲ್ಹರಾರ್ ಗಸ್ತು ತಿರುಗುತ್ತಿದ್ದಾಗ ಅವರನ್ನು ತಪ್ಪಾಗಿ ಗುರುತಿಸಿದ ಐಡಿಎಫ್ ತುಕಡಿ ಪ್ರಮಾದದಿಂದ ಗುಂಡು ಹಾರಿಸಿದಾಗ ಅವರಿಬ್ಬರೂ ಮೃತರಾಗಿದ್ದಾರೆ. ಈ ಮಾಹಿತಿಯನ್ನು ಅಧಿಕಾರಿಗಳ ಕುಟುಂಬದವರಿಗೆ ರವಾನಿಸಲಾಗಿದೆ ಎಂದು ಇಸ್ರೇಲ್ ಸೇನೆ ಗುರುವಾರ ಹೇಳಿದೆ.

ಅವರಿಬ್ಬರು ಪೆಲೆಸ್ತೀನ್ ದಾಳಿಕೋರರೆಂದು ತಪ್ಪಾಗಿ ತಿಳಿದ ಯೋಧನೊಬ್ಬ ಅವರತ್ತ ಗುಂಡು ಹಾರಿಸಿದಾಗ ಇಬ್ಬರೂ ಮೃತರಾಗಿದ್ದಾರೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ. ನಬಿ ಮುಸಾ ಸೇನಾನೆಲೆಯ ಬಳಿ ಗಸ್ತು ತಿರುಗುತ್ತಿದ್ದ ಅಹರಾನ್ ಮತ್ತು ಎಲ್ಹರಾರ್ ದೂರದಲ್ಲಿ ಶಂಕಾಸ್ಪದ ಚಲನವಲನ ಗಮನಿಸಿ ಅತ್ತ ಸಾಗಿದಾಗ ಇನ್ನೊಂದು ಬದಿಯಲ್ಲಿದ್ದ ಇಸ್ರೇಲ್ ಯೋಧನೊಬ್ಬ ಇವರಿಬ್ಬರನ್ನು ತಪ್ಪಾಗಿ ತಿಳಿದು ಗುಂಡು ಹಾರಿಸಿದ್ದಾನೆ ಎಂದು ಜೆರುಸಲೇಂ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಇದು ಸೇನಾ ತುಕಡಿಯ ಕವಾಯತ್ತಿನ ಸಂದರ್ಭ ನಡೆದ ಘಟನೆಯಲ್ಲ. ಕವಾಯತ್ ಸಂದರ್ಭ ನಮ್ಮದೇ ತುಕಡಿ ನಮ್ಮ ಯೋಧರ ಮೇಲೆ ಗುಂಡು ಹಾರಿಸಿಲ್ಲ ಎಂದು 98ನೇ ಬಟಾಲಿಯನ್‌ನ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಒಫೆರ್ ವಿಂಟರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News