ಎಲ್ ಸಲ್ವದೋರ್: ಪೆಗಾಸಸ್ ಸ್ಪೈವೇರ್ ಬಳಸಿ ಪತ್ರಕರ್ತರು, ಹೋರಾಟಗಾರರ ಮೊಬೈಲ್ ಹ್ಯಾಕ್; ವರದಿ

Update: 2022-01-13 17:36 GMT
ಸಾಂದರ್ಭಿಕ ಚಿತ್ರ

ಟೊರಂಟೊ, ಜ.13: ಎಲ್ ಸಲ್ವದೋರ್ ದೇಶದ ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರ ಮೊಬೈಲ್ ಫೋನ್‌ಗಳನ್ನು 2020ರ ಆರಂಭದಿಂದ ಹ್ಯಾಕ್ ಮಾಡಿ ಅದರೊಳಗೆ ಇಸ್ರೇಲ್ ನಿರ್ಮಿತ ಪೆಗಾಸಸ್ ಸ್ಪೈವೇರ್‌ಗಳನ್ನು ಸೇರಿಸಲಾಗಿದೆ ಎಂದು ಮಾನವ ಹಕ್ಕು ನಿಗಾ ಸಂಸ್ಥೆಯ ವರದಿ ಹೇಳಿದೆ.

ಪತ್ರಕರ್ತರು ಮತ್ತು ಕಾರ್ಯಕರ್ತರು, ಹೋರಾಟಗಾರರನ್ನು ಗುರಿಯಾಗಿಸಿಕೊಂಡು (ಇವರಲ್ಲಿ ಹೆಚ್ಚಿನವರು ಸರಕಾರದ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದರು) ಎಲ್‌ಸಾಲ್ವದೋರ್‌ನಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಆಪರೇಟರ್ ಅನ್ನು ಗುರುತಿಸಿರುವುದಾಗಿ ಟೊರಂಟೊ ವಿವಿ ಸಿಟಿಝನ್ ಲ್ಯಾಬ್ ಸಂಸ್ಥೆ ವರದಿ ಮಾಡಿದೆ.

ಈ ವರದಿಯನ್ನು ಎಲ್‌ಸಾಲ್ವದೋರ್‌ ಅಧ್ಯಕ್ಷ ನಯೀಬ್ ಬುಕೆಲೆ ನೇತೃತ್ವದ ಸರಕಾರ ನಿರಾಕರಿಸಿದ್ದು ಇಸ್ರೇಲ್ನ ಎನ್ಎಸ್ಒ ಸಂಸ್ಥೆಯೊಂದಿಗೆ ಸರಕಾರ ಯಾವುದೇ ವ್ಯವಹಾರ ಸಂಬಂಧ ಹೊಂದಿಲ್ಲ ಎಂದಿದೆ. ಫೋನ್ ಹ್ಯಾಕ್ ಆಗಿರುವ ವರದಿಯ ಬಗ್ಗೆ ಸರಕಾರ ತನಿಖೆ ನಡೆಸಲಿದೆ. ತಾನು ಮತ್ತು ಕನಿಷ್ಟ ಇಬ್ಬರು ಅಧಿಕಾರಿಗಳ ಫೋನ್ ಹ್ಯಾಕ್ ಆಗಿರುವ ಸಾಧ್ಯತೆಯಿದೆ ಎಂದು ಇತ್ತೀಚೆಗೆ ಮೊಬೈಲ್ ಫೋನ್ ಸಂಸ್ಥೆಯಿಂದ ತನಗೆ ಎಚ್ಚರಿಕೆ ಸಂದೇಶ ಬಂದಿತ್ತು ಎಂದು ಅಧ್ಯಕ್ಷರ ವಕ್ತಾರೆ ಸೋಫಿಯಾ ಮೆದೀನಾ ಹೇಳಿದ್ದಾರೆ.
 
ಪೆಗಾಸಸ್ ತಂತ್ರಜ್ಞಾನದ ಸ್ಪೈವೇರ್ ಅಳವಡಿಸಿದ ಫೋನ್ನಿಂದ ಗೂಢಲಿಪಿ ಸಂದೇಶ, ಫೋಟೋ, ಸಂಪರ್ಕ, ದಾಖಲೆ ಹಾಗೂ ಇತರ ಸೂಕ್ಷ್ಮ ಮಾಹಿತಿಗಳನ್ನು ಬಳಕೆದಾರರ ಅರಿವಿಗೆ ಬಾರದಂತೆ ಕದಿಯಬಹುದಾಗಿದೆ. ಅಲ್ಲದೆ ಮೊಬೈಲ್ ಪೋನ್ ಗಳ ಕ್ಯಾಮೆರಾ ಮತ್ತು ಮೈಕ್ರೋಫೋನ್ಗಳನ್ನು ಆ್ಯಕ್ಟಿವೇಟ್ ಮಾಡಿ ಕದ್ದಾಲಿಕೆ ಸಾಧನವಾಗಿ ಪರಿವರ್ತಿಸಬಹುದು. ಪೆಗಾಸಸ್ ಸ್ಪೈವೇರ್ ಅನ್ನು ಕಾನೂನುಬದ್ಧ ಸರಕಾರಿ ಕಾನೂನು ಸಂಸ್ಥೆ ಮತ್ತು ಗುಪ್ತಚರ ಸಂಸ್ಥೆಗೆ ಮಾತ್ರ ಒದಗಿಸಲಾಗುತ್ತದೆ ಎಂದು ಎನ್ಎಸ್ಒ ಸಮೂಹ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News