ಉಪ್ಪಿನಂಗಡಿ; ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಸೆರೆ

Update: 2022-01-13 17:46 GMT

ಉಪ್ಪಿನಂಗಡಿ: ಕಳೆದ ಮಾರ್ಚ್‍ನಲ್ಲಿ ಇಳಂತಿಲ ಗ್ರಾಮದ ನೇಜಿಗಾರ್ ಎಂಬಲ್ಲಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದು, ಇಳಂತಿಲದ ಅಂಡೆತ್ತಡ್ಕದಲ್ಲಿ ತಲವಾರು ದಾಳಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಜಯರಾಮ ಗೌಡ (21) ಎಂಬಾತನೇ ಈ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಅಂಡೆತ್ತಡ್ಕದಲ್ಲಿ ಯುವಕರ ಮೇಲೆ ನಡೆದ ತಲವಾರು ದಾಳಿಗೆ ಸಂಬಂಧಿಸಿ ಪ್ರಮುಖ ಆರೋಪಿಯಾಗಿ ಜಯರಾಮ ಗೌಡನನ್ನು ಬಂಧಿಸಲಾಗಿತ್ತು. ಈತನನ್ನು ಹೆಚ್ಚಿನ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ಜ.11ರಂದು ವಿಚಾರಣೆ ಕಸ್ಟಡಿಗೆ ತೆಗೆದುಕೊಂಡಿದ್ದು, ಈ ಸಂದರ್ಭ ಈತ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣವನ್ನು ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಳಂತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನೆಂಗಳ ಪ್ರಯಾಣಿಕರ ತಂಗುದಾಣಕ್ಕೆ ಹೊಂದಿಕೊಂಡಿರುವ ಗ್ರಾ.ಪಂ. ಅಧೀನದ ಇರ್ಷಾದ್ ಎಂಬವರಿಗೆ ಸೇರಿದ ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟದ ಅಂಗಡಿಗೆ 2021ರ ಮಾ.5ರಂದು ತಡರಾತ್ರಿ ಬೆಂಕಿ ಹಚ್ಚಲಾಗಿತ್ತು. ಇದರಿಂದ ಅಂಗಡಿ ಸಂಪೂರ್ಣ ಸುಟ್ಟು ಹೋಗಿದ್ದು, ಅವರಿಗೆ ಸುಮಾರು 50 ಸಾವಿರ ರೂ. ಅಧಿಕ ನಷ್ಟವುಂಟಾಗಿತ್ತು. ಅದೇ ದಿನ ಪೆದಮಲೆ ಚಡವು ಎಂಬಲ್ಲಿ ರಸ್ತೆ ಬದಿ ಕಾರ್ಯನಿರ್ವಹಿಸುತ್ತಿದ್ದ ಹನೀಫ್ ಎಂಬವರಿಗೆ ಸೇರಿದ ಹಣ್ಣಿನ ಅಂಗಡಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಬಗ್ಗೆ ಇರ್ಷಾದ್ ಅವರು ಪೊಲೀಸ್ ದೂರು ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಇದೀಗ ಈ ಪ್ರಕರಣದಲ್ಲಿ ಜಯರಾಮ ಗೌಡ ಸೇರಿದಂತೆ ಇನ್ನೋರ್ವ ಆರೋಪಿಯಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಜಯರಾಮ ಗೌಡನನ್ನು ಗುರುವಾರ ಅಂಗಡಿಯ ಬಳಿ ಕರೆ ತಂದ ಪೊಲೀಸರು ಸ್ಥಳ ಮಹಜರು ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News