ಜರ್ಮನಿ: ಸಿರಿಯಾ ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆ

Update: 2022-01-13 17:52 GMT
ಸಾಂದರ್ಭಿಕ ಚಿತ್ರ

ಬರ್ಲಿನ್, ಜ.13: ದಶಕದ ಹಿಂದೆ ದಮಾಸ್ಕಸ್ ಬಳಿಯ ಜೈಲಿನಲ್ಲಿ ಮಾನವೀಯತೆಯ ವಿರುದ್ಧ ಅಪರಾಧ ಎಸಗಿದ ಅಪರಾಧಕ್ಕೆ ಸಿರಿಯಾದ ಮಾಜಿ ಸೇನಾಧಿಕಾರಿ ಅನ್ವರ್ ರಸ್ಲಾನ್ ಗೆ ಜರ್ಮನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಕೊಲೆ, ಚಿತ್ರಹಿಂಸೆ, ಸ್ವಾತಂತ್ರ್ಯದಿಂದ ವಂಚಿತರನ್ನಾಗಿಸಿದ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧ ಸಾಬೀತಾಗಿರುವುದರಿಂದ ಕೈದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಕೊಬ್ಲೆಂರ್ ರಾಜ್ಯದ ನ್ಯಾಯಾಲಯ ತೀರ್ಪು ನೀಡಿದೆ. ದೀರ್ಘಾವಧಿಯ ಅಂರ್ತಯುದ್ಧದ ಸಂದರ್ಭ ಅಧ್ಯಕ್ಷ ಬಷರ್ ಅಲ್ ಅಸಾದ್ ಅವರ ಸರಕಾರದಡಿ ದೌರ್ಜನ್ಯಕ್ಕೆ ಒಳಗಾದ ಅಸಂಖ್ಯಾತ ಸಿರಿಯನ್ನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿನ ಮೊದಲ ಹೆಜ್ಜೆ ಇದಾಗಿದೆ ಎಂದು ಮಾಧ್ಯಮಗಳು ವ್ಯಾಖ್ಯಾನಿಸಿವೆ. ಇದು ಸಿರಿಯಾದಲ್ಲಿ ಸರಕಾರದ ನೇತೃತ್ವದಲ್ಲಿ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ದಾಖಲಾಗಿದ್ದ ವಿಶ್ವದ ಪ್ರಥಮ ಕ್ರಿಮಿನಲ್ ಪ್ರಕರಣವಾಗಿದೆ ಮತ್ತು ಅಲ್ಲಿ ನಡೆಸಿದ ದೌರ್ಜನ್ಯಕ್ಕಾಗಿ ವಿದೇಶದಲ್ಲಿ ಶಿಕ್ಷೆಗೆ ಒಳಗಾದ ಅತ್ಯುನ್ನತ ಶ್ರೇಣಿಯ ಮಾಜಿ ಸರಕಾರಿ ಅಧಿಕಾರಿಯಾಗಿದ್ದಾರೆ.

ಅನ್ವರ್ ರಸ್ಲಾನ್ ಅವರು ಸಿರಿಯಾದ ರಾಜಧಾನಿಯ ಅಲ್-ಖತೀಬ್ ಜೈಲಿನಲ್ಲಿ 2011ರ ಎಪ್ರಿಲ್‌ನಿಂದ 2012ರ ಸೆಪ್ಟಂಬರ್ ಅವಧಿಯಲ್ಲಿ ನಡೆದಿದ್ದ 4000ಕ್ಕೂ ಅಧಿಕ ವ್ಯವಸ್ಥಿತ ಮತ್ತು ಕ್ರೂರ ಚಿತ್ರಹಿಂಸೆ ಪ್ರಕರಣದ(ಇದರಲ್ಲಿ ಕನಿಷ್ಟ 58 ಮಂದಿ ಮೃತರಾಗಿದ್ದಾರೆ) ಮೇಲುಸ್ತುವಾರಿ ವಹಿಸಿದ್ದರು. ಜೈಲಿನಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ, ಇಲೆಕ್ಟ್ರಿಕ್ ಶಾಕ್ ನೀಡುವುದು, ಮುಷ್ಟಿ, ವಯರ್ ಮತ್ತು ಚಾಟಿಯಿಂದ ಹೊಡೆಯುವುದು ಮುಂತಾದ ಕೃತ್ಯಗಳು ಇವರ ಮೇಲುಸ್ತುವಾರಿಯಲ್ಲಿ ನಡೆದಿದೆ ಎಂದು ಫಿರ್ಯಾದಿದಾರರು ವಾದಿಸಿದ್ದರು. ಅಲ್ ಅಸಾದ್ ಸರಕಾರದ ಆಡಳಿತವಿದ್ದಾಗ ಅನ್ವರ್ ರಸ್ಲಾನ್ ಸಿರಿಯಾದ ಗುಪ್ತಚರ ಇಲಾಖೆಯಲ್ಲಿ 18 ವರ್ಷ ಕಾರ್ಯನಿರ್ವಹಿಸಿದ್ದು ಭಡ್ತಿ ಪಡೆದು ಆಂತರಿಕ ಗುಪ್ತಚರ ತನಿಖಾ ಸಮಿತಿಯ ಮುಖ್ಯಸ್ಥರಾಗಿ ನಿಯುಕ್ತಿಗೊಂಡಿದ್ದರು.

2012ರಲ್ಲಿ ಹುದ್ದೆಯಿಂದ ವಜಾಗೊಂಡಿದ್ದ ರಸ್ಲಾನ್ 2014ರಲ್ಲಿ ಜರ್ಮನ್ ಗೆ ಪಲಾಯನ ಮಾಡಿ ಅಲ್ಲಿ ಆಶ್ರಯ ಕೋರಿದ್ದರು. ಅವರನ್ನು 2019ರಲ್ಲಿ ಬಂಧಿಸಿ ಕಾನೂನು ಕ್ರಮ ಜರಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News