ಚುನಾವಣಾ ಆಯೋಗದ ಹೇಳಿಕೆಯನ್ನು ಸಂಭ್ರಮಿಸಬಹುದೇ?

Update: 2022-01-14 05:31 GMT

ಭಾಗ-1

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸ್ಪರ್ಧಿಸುವ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸುವ ವೇಳೆ ಈ ಮೊಕದ್ದಮೆಗಳ ಮಾಹಿತಿಯನ್ನು ನೀಡುವುದನ್ನೂ ಕಡ್ಡಾಯಗೊಳಿಸುವಂತೆ ಕೋರಿ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸಂಘಟನೆಯೊಂದು ಅಂದು ದಿಲ್ಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದನ್ನು ಸಲ್ಲಿಸಿತ್ತು. ಈ ಬಗ್ಗೆ 2000 ನವೆಂಬರ್ 2ರಂದು ತೀರ್ಪು ನೀಡಿದ ಹೈಕೋರ್ಟ್, ಈ ಮನವಿಯನ್ನು ಸ್ವೀಕರಿಸಿತು. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳು ತಾವು ಹೊಂದಿರುವ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಅಫಿಡವಿಟ್ ಒಂದನ್ನು ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತು.


ಎಲ್ಲರ ನಿರೀಕ್ಷೆಯಂತೆಯೇ, ಐದು ರಾಜ್ಯಗಳ ವಿಧಾನ ಸಭೆಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಆದರೆ ಕೆಲವು ವೀಕ್ಷಕರ ಗಮನ ಸೆಳೆದ ಅಂಶವೆಂದರೆ, ಅಭ್ಯರ್ಥಿಗಳ ಕ್ರಿಮಿನಲ್ ಇತಿಹಾಸವನ್ನು ಅಭ್ಯರ್ಥಿಗಳು ಮತ್ತು ಅವರನ್ನು ಕಣಕ್ಕಿಳಿಸುವ ರಾಜಕೀಯ ಪಕ್ಷಗಳು ಘೋಷಿಸಬೇಕು ಎನ್ನುವುದನ್ನು ಚುನಾವಣಾ ಆಯೋಗ ಕಡ್ಡಾಯಗೊಳಿಸಿರುವುದು. ಈ ಬಗ್ಗೆ ಒಬ್ಬರು ಮಾಡಿರುವ ಟ್ವೀಟ್ ಗಮನ ಸೆಳೆಯುತ್ತದೆ. ''ಕ್ರಿಮಿನಲ್ ಇತಿಹಾಸವಿರುವ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ದಾಖಲೆಗಳನ್ನು ಚುನಾವಣೆಗೆ ಮುಂಚಿತವಾಗಿ ಪತ್ರಿಕೆಗಳಲ್ಲಿ ಮೂರು ಬಾರಿ ಪ್ರಕಟಿಸಬೇಕು: ಮುಖ್ಯ ಚುನಾವಣಾ ಕಮಿಶನರ್.

ಜೊತೆಗೆ, ರಾಜಕೀಯ ಪಕ್ಷಗಳು ಕ್ರಿಮಿನಲ್ ಇತಿಹಾಸವುಳ್ಳ ಅಭ್ಯರ್ಥಿಗಳ ಪಟ್ಟಿಯನ್ನು ತಮ್ಮ ವೆಬ್‌ಸೈಟ್‌ಗಳ ಹೋಮ್‌ಪೇಜ್‌ಗಳಲ್ಲಿ ಪ್ರಕಟಿಸಬೇಕು. ಅವರ ಆಯ್ಕೆಗೆ ಕಾರಣಗಳನ್ನೂ ನೀಡಬೇಕು.''
ಇದು ಚುನಾವಣಾ ಆಯೋಗ ಹೊರಡಿಸಿದ 92 ಪುಟಗಳ ಪತ್ರಿಕಾ ಹೇಳಿಕೆಯ 21ರಿಂದ 24 ಪುಟಗಳಲ್ಲಿ ಬರುತ್ತದೆ. ಇದಕ್ಕೆ 21 ಮತ್ತು 22 ಎಂಬ ಕ್ರಮಾಂಕಗಳನ್ನು ನೀಡಲಾಗಿದೆ. ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ಇದು 2018 ಫೆಬ್ರವರಿ 16, 2018 ಸೆಪ್ಟಂಬರ್ 25 ಮತ್ತು 2021 ಆಗಸ್ಟ್ 10ರಂದು ಸುಪ್ರೀಂ ಕೋರ್ಟ್ ನೀಡಿರುವ ಮೂರು ತೀರ್ಪುಗಳ ಫಲಶ್ರುತಿಯಾಗಿದೆ.

ಸಮಸ್ಯೆಯ ಮೂಲ
ಇದಕ್ಕೊಂದು ಸುದೀರ್ಘ ಇತಿಹಾಸವಿದೆ. ಇದು ಆರಂಭಗೊಳ್ಳುವುದು 1999ರಲ್ಲಿ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸ್ಪರ್ಧಿಸುವ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸುವ ವೇಳೆ ಈ ಮೊಕದ್ದಮೆಗಳ ಮಾಹಿತಿಯನ್ನು ನೀಡುವುದನ್ನೂ ಕಡ್ಡಾಯಗೊಳಿಸುವಂತೆ ಕೋರಿ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸಂಘಟನೆಯೊಂದು ಅಂದು ದಿಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದನ್ನು ಸಲ್ಲಿಸಿತ್ತು. ಈ ಬಗ್ಗೆ 2000 ನವೆಂಬರ್ 2ರಂದು ತೀರ್ಪು ನೀಡಿದ ಹೈಕೋರ್ಟ್, ಈ ಮನವಿಯನ್ನು ಸ್ವೀಕರಿಸಿತು. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳು ತಾವು ಹೊಂದಿರುವ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಅಫಿಡವಿಟ್ ಒಂದನ್ನು ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತು.

ಅಂದು ಅಧಿಕಾರದಲ್ಲಿದ್ದ ಸರಕಾರಕ್ಕೆ ಹೈಕೋರ್ಟ್ ತೀರ್ಪು ಸ್ವೀಕಾರಾರ್ಹವಾಗಲಿಲ್ಲ ಎಂದು ಕಾಣುತ್ತದೆ. ಹಾಗಾಗಿ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅಂದಿನ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿಯೊಂದನ್ನು ಸಲ್ಲಿಸಿತ್ತು. ಈ ಮೊಕದ್ದಮೆಯಲ್ಲಿ ಹಲವು ರಾಜಕೀಯ ಪಕ್ಷಗಳೂ ಕೈಜೋಡಿಸಿ ಸರಕಾರಕ್ಕೆ ಬೆಂಬಲ ಸೂಚಿಸಿದವು. ಇದು ಶಾಸಕಾಂಗದ ವಿಷಯವಾಗಿದ್ದು, ಈ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ನ್ಯಾಯಾಂಗಕ್ಕೆ ಅಧಿಕಾರ ವ್ಯಾಪ್ತಿಯಿಲ್ಲ ಎಂದು ಅವುಗಳು ವಾದಿಸಿದವು.

2002 ಮೇ 2ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯಿತು. ''ಈ ನ್ಯಾಯಾಲಯವು ಹಿಂದೆ ನೀಡಿರುವ ಹಲವು ತೀರ್ಪುಗಳ ಆಧಾರದಲ್ಲಿ ಹೇಳುವುದಾದರೆ, ಶಾಸಕಾಂಗ ಮತ್ತು ಕಾರ್ಯಾಂಗಗಳು ತಮ್ಮ ವ್ಯಾಪ್ತಿಗೆ ಒಳಪಟ್ಟ ಕ್ಷೇತ್ರಗಳಲ್ಲಿ ಮಾಡಬೇಕಾದ ಕೆಲಸಗಳನ್ನು ಮಾಡದಿದ್ದರೆ ಹಾಗೂ ಈ ನಿಷ್ಕ್ರಿಯತೆಯು ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾಗಿದ್ದರೆ, ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಂತೆ ಕಾರ್ಯಾಂಗಕ್ಕೆ ನಿರ್ದೇಶನ ನೀಡಲು ಸಂವಿಧಾನದ 141 ಮತ್ತು 142ನೇ ವಿಧಿಗಳ ಜೊತೆಗೆ ಪರಿಗಣಿಸುವ 32ನೇ ವಿಧಿಯನ್ವಯ ಈ ನ್ಯಾಯಾಲಯಕ್ಕೆ ಸಾಕಷ್ಟು ಅಧಿಕಾರ ವ್ಯಾಪ್ತಿಯಿದೆ'' ಎಂದು ನ್ಯಾಯಾಲಯ ಹೇಳಿತು.

ಇದು ಕೂಡ ರಾಜಕೀಯ ವ್ಯವಸ್ಥೆಗೆ ಪಥ್ಯವಾಗಲಿಲ್ಲ. ಈ ಬಗ್ಗೆ ಚರ್ಚಿಸಲು ಕೇಂದ್ರ ಸರಕಾರವು ಸರ್ವಪಕ್ಷ ಸಭೆಯೊಂದನ್ನು ಏರ್ಪಡಿಸಿತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸರ್ವಪಕ್ಷ ಸಭೆ ತೀರ್ಮಾನಿಸಿತು ಹಾಗೂ ಈ ಉದ್ದೇಶಕ್ಕಾಗಿ ಅದೇ ಲೋಕಸಭಾ ಅಧಿವೇಶನದಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ (ಆರ್‌ಪಿ ಕಾಯ್ದೆ)ಗೆ ತಿದ್ದುಪಡಿ ತರಲು ನಿರ್ಧರಿಸಿತು.

ಇದಕ್ಕಾಗಿ ಕರಡು ಮಸೂದೆಯೊಂದನ್ನು ಸಿದ್ಧಗೊಳಿಸಲಾಯಿತು. ಆದರೆ ಪೆಟ್ರೋಲ್ ಪಂಪ್ ಹಗರಣಕ್ಕೆ ಸಂಬಂಧಿಸಿ ಸದನದಲ್ಲಿ ಕಲಾಪಗಳಿಗೆ ಅಡ್ಡಿಯುಂಟಾಗಿ ಅಧಿವೇಶನ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಮಸೂದೆಯನ್ನು ಮಂಡಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಈ ಉದ್ದೇಶವನ್ನು ಸಾಧಿಸುವುದಕ್ಕಾಗಿ ಸುಗ್ರೀವಾಜ್ಞೆಯೊಂದನ್ನು ತರಲು ಸಚಿವ ಸಂಪುಟವು ತೀರ್ಮಾನಿಸಿತು. ಸುಗ್ರೀವಾಜ್ಞೆಯನ್ನು ರಾಷ್ಟ್ರಪತಿಯವರ ಅಂಗೀಕಾರಕ್ಕಾಗಿ ಕಳುಹಿಸಲಾಯಿತು. ಆದರೆ, ರಾಷ್ಟ್ರಪತಿಯವರು ಅದಕ್ಕೆ ಸಹಿ ಹಾಕದೆ ಹಿಂದಿರುಗಿಸಿದರು. ಬಳಿಕ, ಸಚಿವ ಸಂಪುಟವು ಸುಗ್ರೀವಾಜ್ಞೆಯನ್ನು ಅದೇ ರೂಪದಲ್ಲಿ ಮತ್ತೊಮ್ಮೆ ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕಳುಹಿಸಿತು. ಹಾಗಾಗಿ, ಸಂಪ್ರದಾಯದಂತೆ ರಾಷ್ಟ್ರಪತಿಯವರು ಅದಕ್ಕೆ ಸಹಿ ಹಾಕಲೇ ಬೇಕಾಯಿತು. ಆ ಮೂಲಕ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿಯಾಯಿತು ಹಾಗೂ ಸುಪ್ರೀಂ ಕೋರ್ಟ್ ತೀರ್ಪು ಅಪ್ರಸ್ತುತವಾಯಿತು.

ಜನತಾ ಪ್ರಾತಿನಿಧ್ಯ ಕಾಯ್ದೆಗೆ ತರಲಾದ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. 2003 ಮಾರ್ಚ್ 13ರಂದು ಮಹತ್ವದ ತೀರ್ಪೊಂದನ್ನು ನೀಡಿದ ಸುಪ್ರೀಂ ಕೋರ್ಟ್, ''ಜನತಾ ಪ್ರಾತಿನಿಧ್ಯ ಕಾಯ್ದೆಗೆ ತರಲಾದ ತಿದ್ದುಪಡಿಯು ಸಾಂವಿಧಾನಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ ಹಾಗೂ ಸಂವಿಧಾನದ 19(1)(ಎ) ವಿಧಿಯಡಿಯಲ್ಲಿ ನೀಡಲಾದ ಹಕ್ಕಿನ ಉಲ್ಲಂಘನೆಯಾಗುತ್ತದೆ'' ಎಂದು ಘೋಷಿಸಿತ್ತು. ಸಂವಿಧಾನದ 19(1)(ಎ) ವಿಧಿಯಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ.

ಮುಂದೆ ಏನಾಯಿತು?
ಈ ಕತೆಯ ಮುಂದಿನ ಅಧ್ಯಾಯ 2011ರಲ್ಲಿ ಆರಂಭವಾಯಿತು. ರಾಜಕೀಯವನ್ನು ಅಪರಾಧಮುಕ್ತಗೊಳಿಸಬೇಕು ಎಂದು ಕೋರಿ 'ಪಬ್ಲಿಕ್ ಇಂಟರೆಸ್ಟ್ ಫೌಂಡೇಶನ್' ಎಂಬ ನಾಗರಿಕ ಸಮಾಜ ಸಂಘಟನೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ಇನ್ನೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ವಿವಿಧ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುವವರು ಚುನಾವಣೆಯನ್ನು ಎದುರಿಸಿ ರಾಜಕೀಯ ರಂಗವನ್ನು ಪ್ರವೇಶಿಸಲು ಸಾಧ್ಯವಾಗದಂತೆ ಸೂಕ್ತ ಮಾರ್ಗದರ್ಶಿ ಸೂತ್ರಗಳು/ಚೌಕಟ್ಟುಗಳನ್ನು ರೂಪಿಸಬೇಕು ಮತ್ತು ಇಂತಹ ವ್ಯಕ್ತಿಗಳ ವಿಚಾರಣೆಗೆ ಆರು ತಿಂಗಳ ಕಾಲಾವಧಿಯನ್ನು ನಿಗದಿಪಡಿಸಿ ಈ ಅವಧಿಯಲ್ಲಿ ಅವರ ವಿರುದ್ಧದ ವಿಚಾರಣೆಗಳು ಮುಕ್ತಾಯಗೊಳ್ಳುವಂತೆ ನೋಡಿಕೊಳ್ಳಬೇಕು ಎಂಬುದಾಗಿ ಅರ್ಜಿಯಲ್ಲಿ ಸುಪ್ರೀಂ ಕೋರ್ಟನ್ನು ಕೋರಲಾಗಿತ್ತು.

2014 ಮಾರ್ಚ್ 10ರಂದು ಸುಪ್ರೀಂ ಕೋರ್ಟ್ ಆದೇಶವೊಂದನ್ನು ನೀಡಿ, ''ಸಂಸದರು ಮತ್ತು ಶಾಸಕರ ವಿರುದ್ಧದ ಮೊಕದ್ದಮೆಗಳ ವಿಚಾರಣೆಯನ್ನು ಎಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ನಡೆಸಬೇಕು ಹಾಗೂ ಯಾವುದೇ ಸಂದರ್ಭದಲ್ಲಿ ವಿಚಾರಣೆಯು ಆರೋಪ ಹೇರಿಕೆಯಾದ ದಿನಾಂಕದಿಂದ ಒಂದು ವರ್ಷವನ್ನು ಮೀರಬಾರದು'' ಎಂದು ಹೇಳಿತು.

ಈ ನಡುವೆ, 2005ರಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ತೀರ್ಪು 2014 ಆಗಸ್ಟ್ 27ರಂದು ಹೊರಬಿತ್ತು. ಅದು ಮನೋಜ್ ನರುಲ ಮತ್ತು ಕೇಂದ್ರ ಸರಕಾರದ ನಡುವಿನ ವ್ಯಾಜ್ಯವಾಗಿತ್ತು. ಕೆಲವರು ಗಂಭೀರ ಹಾಗೂ ಹೀನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ ಅವರನ್ನು ಭಾರತ ಸರಕಾರದ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ಪ್ರಶ್ನಿಸಿ ಆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಮೊದಲು ಆ ಅರ್ಜಿಯ ವಿಚಾರಣೆಯನ್ನು ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ನಡೆಸಿತ್ತು. ಈ ವಿಷಯದ ವ್ಯಾಪ್ತಿ, ಮಹತ್ವ ಮತ್ತು ಗಂಭೀರತೆಯನ್ನು ಪರಿಗಣಿಸಿ, ಐವರು ನ್ಯಾಯಾಧೀಶರ ನ್ಯಾಯಪೀಠವು ಇದರ ವಿಚಾರಣೆಯನ್ನು ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು 2006 ಮಾರ್ಚ್ 24ರಂದು ಆ ನ್ಯಾಯಪೀಠವು ತೀರ್ಪು ನೀಡಿತು.

ಹಾಗಾಗಿ, ಈ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು 2014 ಆಗಸ್ಟ್‌ನಲ್ಲಿ ಐವರು ನ್ಯಾಯಾಧೀಶರ ನ್ಯಾಯಪೀಠವೊಂದು ನೀಡಿತು. ಬಹುಮತದ ತೀರ್ಪಿನಲ್ಲಿ ಮೂವರು ನ್ಯಾಯಾಧೀಶರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು 'ಪ್ರಧಾನಿಯ ವಿವೇಚನೆಗೆ' ಬಿಟ್ಟರು. ''ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುವ ವ್ಯಕ್ತಿಯೊಬ್ಬನನ್ನು ಪ್ರಧಾನಿಯವರು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವುದಿಲ್ಲ ಎನ್ನುವುದನ್ನು ನಿರೀಕ್ಷಿಸಬಹುದಾಗಿದೆ'' ಎಂಬುದಾಗಿ ಈ ಮೂವರು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ''ಇದು ಪ್ರಧಾನಿಯಿಂದ ಸಾಂವಿಧಾನಿಕ ನಿರೀಕ್ಷೆಯಾಗಿದೆ'' ಎಂದರು.

ಅಲ್ಲಿ ಇನ್ನೆರಡು ಅಭಿಪ್ರಾಯಗಳಿದ್ದವು. ಒಬ್ಬ ನ್ಯಾಯಾಧೀಶರು, ಸಂವಿಧಾನವನ್ನು ಅನುಷ್ಠಾನಗೊಳಿಸುವಲ್ಲಿನ ತಮ್ಮ ಪಾತ್ರವನ್ನು ಆಡಳಿತಗಾರರಿಗೆ ನೆನಪಿಸುವುದು ಈ ನ್ಯಾಯಾಲಯದ ಕರ್ತವ್ಯವಾಗಿದೆ ಎಂಬುದಾಗಿ ತನ್ನ ತೀರ್ಪಿನಲ್ಲಿ ಹೇಳಿದರು. ''ಕ್ರಿಮಿನಲ್ ಮೊಕದ್ದಮೆಗಳು, ಅದರಲ್ಲೂ ಮುಖ್ಯವಾಗಿ 1951ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಮೂರನೇ ಅಧ್ಯಾಯದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾದ ಅಪರಾಧಗಳಿಗಾಗಿ ಕ್ರಿಮಿನಲ್ ನ್ಯಾಯಾಲಯವೊಂದರಿಂದ ದೋಷಾರೋಪಣೆಗೆ ಒಳಗಾಗಿರುವ ಯಾವುದೇ ವ್ಯಕ್ತಿಯನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವುದನ್ನು ತಡೆಯುವ ನಿಟ್ಟಿನಲ್ಲಿ ಪರಿಶೀಲನೆ ನಡೆಸುವಂತೆ ಪ್ರಧಾನಿ ಮತ್ತು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಲಹೆ ನೀಡಲಾಗಿದೆ'' ಎಂಬುದಾಗಿ ಅವರು ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.

ಪ್ರಸಕ್ತ ಸ್ಥಿತಿಗತಿ ಹೇಗಿದೆ?
ಬಳಿಕ, 2018 ಸೆಪ್ಟಂಬರ್ 25ರಂದು ಸುಪ್ರೀಂ ಕೋರ್ಟ್‌ನಿಂದ ಇನ್ನೊಂದು ಮಹತ್ವದ ತೀರ್ಪು ಹೊರಬಿತ್ತು. ಅದು ಕೂಡ ಪಬ್ಲಿಕ್ ಇಂಟರೆಸ್ಟ್ ಫೌಂಡೇಶನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಧಾರದಲ್ಲಿ. ಈ ತೀರ್ಪಿನಲ್ಲಿ ಎರಡು ಪ್ರಮುಖ ಅಂಶಗಳಿವೆ. ಮೊದಲನೆಯದು, ಪ್ರಬಲ ಪುರಾವೆಗಳ ಹೊರತಾಗಿಯೂ, ಕೆಲವು ನಿರ್ದಿಷ್ಟ ಹೀನ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ನಿಷೇಧಿಸಬೇಕು ಎಂದು ಸ್ಪಷ್ಟವಾಗಿ ಹೇಳುವುದರಿಂದ ನ್ಯಾಯಾಲಯ ಹಿಂಜರಿಯಿತು. ಎರಡನೆಯದಾಗಿ, ಅಭ್ಯರ್ಥಿಗಳು ಎದುರಿಸುತ್ತಿರುವ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಅಭ್ಯರ್ಥಿಗಳು ಮತ್ತು ಅವರನ್ನು ಚುನಾವಣೆಗೆ ನಿಲ್ಲಿಸುವ ರಾಜಕೀಯ ಪಕ್ಷಗಳು ಜಾಹೀರಾತು ನೀಡಬೇಕು ಎಂಬುದಾಗಿ ಈ ತೀರ್ಪು ಹೇಳಿತು.
ಆದರೆ, ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಅಭ್ಯರ್ಥಿಗಳು ಮತ್ತು ಅವರನ್ನು ಪ್ರಾಯೋಜಿಸುವ ರಾಜಕೀಯ ಪಕ್ಷಗಳು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಬೇಕು ಎನ್ನುವ ಸುಪ್ರೀಂ ಕೋರ್ಟ್‌ನ ನಿರ್ದೇಶನದಿಂದ ಹೆಚ್ಚಿನ ಪ್ರಯೋಜನ ವಾಗುವ ಸಾಧ್ಯತೆಯಿಲ್ಲ. ಕ್ರಿಮಿನಲ್‌ಗಳು ಶಾಸನ ಸಭೆಗಳಿಗೆ ಕಾಲಿಡುವುದನ್ನು ನಿರ್ಮೂಲಗೊಳಿಸಲು ಆಗದಿದ್ದರೂ, ಕಡಿಮೆ ಮಾಡುವ ಒಂದೇ ಒಂದು ವಿಧಾನವೆಂದರೆ, ಅಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನೇ ನಿಷೇಧಿಸುವುದು. ಆದರೆ, ಇಂತಹ ನಿರ್ದೇಶನ ನೀಡಲು ತನಗೆ ಅಧಿಕಾರ ವ್ಯಾಪ್ತಿಯಿಲ್ಲ ಎಂದು ಹೇಳಿತು. ಈ ಮೂಲಕ ಅದು 2002ರಲ್ಲಿ ತಾನೇ ನೀಡಿದ ತೀರ್ಪನ್ನು ಉಪೇಕ್ಷಿಸಿತು.

2002ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೀಗೆ ಹೇಳಿತ್ತು: ''ಈ ನ್ಯಾಯಾಲಯವು ಹಿಂದೆ ನೀಡಿರುವ ಹಲವು ತೀರ್ಪುಗಳ ಆಧಾರದಲ್ಲಿ ಹೇಳುವುದಾದರೆ, ಶಾಸಕಾಂಗ ಮತ್ತು ಕಾರ್ಯಾಂಗಗಳು ತಮ್ಮ ವ್ಯಾಪ್ತಿಗೆ ಒಳಪಟ್ಟ ಕ್ಷೇತ್ರಗಳಲ್ಲಿ ಮಾಡಬೇಕಾದ ಕೆಲಸಗಳನ್ನು ಮಾಡದಿದ್ದರೆ ಹಾಗೂ ಈ ನಿಷ್ಕ್ರಿಯತೆಯು ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾಗಿದ್ದರೆ, ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಂತೆ ಕಾರ್ಯಾಂಗಕ್ಕೆ ನಿರ್ದೇಶನ ನೀಡಲು ಸಂವಿಧಾನದ 141 ಮತ್ತು 142ನೇ ವಿಧಿಗಳ ಜೊತೆಗೆ ಪರಿಗಣಿಸುವ 32ನೇ ವಿಧಿಯನ್ವಯ ಈ ನ್ಯಾಯಾಲಯಕ್ಕೆ ಸಾಕಷ್ಟು ಅಧಿಕಾರ ವ್ಯಾಪ್ತಿಯಿದೆ''.
ನ್ಯಾಯಾಲಯದ ತೀರ್ಪು ಅಗತ್ಯವಾಗಿ ಏನು ಆಗಬೇಕಿತ್ತೋ ಅದನ್ನು ಮಾಡಿಲ್ಲ. ಆದರೆ, ಆ ತೀರ್ಪು ತನ್ನ ಆಶಯಗಳು ಮತ್ತು ಇಚ್ಛೆಗಳ ಮೇಲೆ ಭಾರೀ ನಂಬಿಕೆಯನ್ನು ಇಟ್ಟಿದೆ.
ಅದರ ನಿರೀಕ್ಷೆಗಳ ಎರಡು ಉದಾಹರಣೆಗಳು ಇಲ್ಲಿವೆ: ''117. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ನಿರ್ದೇಶನಗಳನ್ನು ಅದರ ನಿಜವಾದ ಆಶಯ ಮತ್ತು ಪ್ರಾಮಾಣಿಕ ಕಾಳಜಿಯೊಂದಿಗೆ ಅನುಷ್ಠಾನಗೊಳಿಸಬೇಕಾಗಿದೆ. ಕಾನೂನಿನಲ್ಲಿ ಕೆಲವೊಂದು ಲೋಪಗಳು ಇರಬಹುದು. ಆದರೆ ಸರಿಯಾಗಿ ಯೋಚಿಸುವ ವ್ಯಕ್ತಿಗಳ ನೈಜ ಕಾಳಜಿ ಮತ್ತು ದೃಢ ನಿರ್ಧಾರದ ಬೆಂಬಲವಿದ್ದರೆ ಈ ಲೋಪಗಳನ್ನು ಶಾಸಕಾಂಗವು ಖಂಡಿತವಾಗಿಯೂ ಹೋಗಲಾಡಿಸಬಹುದಾಗಿದೆ. ಕಾನೂನನ್ನು ಸಂಬಂಧಿತ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸದಿದ್ದರೆ ಕಾನೂನೇ ಸರಿಯಿಲ್ಲ ಎಂದು ಹೇಳುವಂತಿಲ್ಲ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ, ಪ್ರಜಾಪ್ರಭುತ್ವ ಮತ್ತು ರಾಜಕೀಯದಲ್ಲಿ ಪರಿಶುದ್ಧತೆಯ ಸಂಸ್ಕೃತಿಯನ್ನು ಹುಟ್ಟುಹಾಕುವುದಕ್ಕಾಗಿ ಮತ್ತು ತಿಳುವಳಿಕೆಯುಳ್ಳ ನಾಗರಿಕರನ್ನು ಬೆಳೆಸುವುದಕ್ಕಾಗಿ, ಕಾನೂನನ್ನು ಮತ್ತು ಈ ನ್ಯಾಯಾಲಯವು ಆಗಾಗ ನೀಡುವ ನಿರ್ದೇಶನಗಳನ್ನು ಜಾರಿಗೊಳಿಸುವುದು ಸಂಬಂಧಿತ ಎಲ್ಲರ ಆದ್ಯ ಜವಾಬ್ದಾರಿಯಾಗಿದೆ. ಯಾಕೆಂದರೆ, ದೇಶವೊಂದರಲ್ಲಿ ರಾಜಕೀಯದ ದಿಕ್ಕು ಮತ್ತು ಭವಿಷ್ಯವನ್ನು ನಿರ್ಧರಿಸುವುದು ನಾಗರಿಕರೇ ಆಗಿದ್ದಾರೆ. 'ನಮಗೆ ಎಷ್ಟು ಅರ್ಹತೆಯಿದೆಯೋ ಅದಕ್ಕಿಂತ ಹೆಚ್ಚಿನ ಸಹಕಾರ ನಮಗೆ ಸಿಗುವುದಿಲ್ಲ' ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಹಾಗಾಗಿ, ಅಭ್ಯರ್ಥಿಗಳ ಕ್ರಿಮಿನಲ್‌ಗಳ ಇತಿಹಾಸದ ಬಗ್ಗೆ ಸಂಪೂರ್ಣ ಮಾಹಿತಿಯಿದ್ದರೆ ನಾಗರಿಕರು ಉತ್ತಮ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಪರಿಶುದ್ಧ ಮತ್ತು ಬಲಿಷ್ಠ ಪ್ರಜಾಪ್ರಭುತ್ವದ ಅಡಿಗಲ್ಲಿರುವುದು ತಿಳುವಳಿಕೆಯಿಂದ ಕೂಡಿದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ.''

''118. ಈ ಮೇಲಿನ ನಿರ್ದೇಶನಗಳನ್ನು ನಾವು ತುಂಬಾ ದುಃಖದಿಂದ ನೀಡಿದ್ದೇವೆ. ಯಾಕೆಂದರೆ, ಪಕ್ಷವೊಂದರ ಚಿಹ್ನೆಯಡಿ ಸ್ಪರ್ಧಿಸುವ ಹಕ್ಕನ್ನು ಚುನಾವಣಾ ಆಯೋಗವು ಯಾವುದೇ ವ್ಯಕ್ತಿಗೆ ನಿರಾಕರಿಸುವಂತಿಲ್ಲ. ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ರಾಜಕೀಯ ಹರಿವಿಗೆ ಬರದಂತೆ ನೋಡಿಕೊಳ್ಳುವ ಕಾನೂನನ್ನು ಸಂಸತ್ತು ರೂಪಿಸುವ ಸಮಯ ಈಗ ಬಂದಿದೆ. ಆರೋಪಿಗಳು ಅಮಾಯಕರು ಎಂದು ಹೇಳಿ ತಿಪ್ಪೆಸಾರಿಸುವುದು ಸುಲಭ. ಆದರೆ, ಸಾರ್ವಜನಿಕ ಜೀವನವನ್ನು ಪ್ರವೇಶಿಸುವ ಹಾಗೂ ಕಾನೂನು ನಿರ್ಮಾಣದಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು ಗಂಭೀರ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಿರುವುದು ಅಗತ್ಯವಾಗಿದೆ. ಸಂಭಾವ್ಯ ಅಭ್ಯರ್ಥಿಗಳ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗುತ್ತದೆ ಎನ್ನುವುದೂ ಸತ್ಯ. ಆದರೆ ಅದನ್ನು ಸೂಕ್ತ ಶಾಸನದ ಮೂಲಕ ಸಂಸತ್ತು ನಿಭಾಯಿಸಬೇಕು. ಇಂತಹ ಕಾನೂನಿಗಾಗಿ ದೇಶ ಕಾತರತೆಯಿಂದ ಎದುರು ನೋಡುತ್ತಿದೆ. ಯಾಕೆಂದರೆ ತಮ್ಮನ್ನು ಸರಿಯಾದ ಸಾಂವಿಧಾನಿಕ ಸರಕಾರವೊಂದು ಆಳಬೇಕು ಎನ್ನುವ ನ್ಯಾಯಸಮ್ಮತ ನಿರೀಕ್ಷೆಯನ್ನು ನಾಗರಿಕರು ಹೊಂದಿದ್ದಾರೆ. ಸಂವಿಧಾನವು ವ್ಯವಸ್ಥಿತವಾಗಿ ಚಾಲ್ತಿಯಲ್ಲಿರಬೇಕು ಎಂಬುದಾಗಿ ಮತದಾರರು ಬಯಸುತ್ತಾರೆ. ಹಣ ಬಲ ಮತ್ತು ತೋಳ್ಬಲವೇ ಪ್ರಧಾನವಾದಾಗ ದೇಶ ದುಃಖಿಸುತ್ತದೆ. ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಜನರನ್ನು ನಿಷೇಧಿಸುವ ಮೂಲಕ ಮಲಿನಗೊಂಡಿರುವ ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ಕ್ರಮಗಳು ಎಷ್ಟು ಪರಿಣಾಮಕಾರಿಯಾಗಬೇಕೆಂದರೆ, ರಾಜಕೀಯವನ್ನು ಪ್ರವೇಶಿಸುವ ಕಲ್ಪನೆಯನ್ನೂ ಇಂತಹ ವ್ಯಕ್ತಿಗಳು ಹೊಂದಬಾರದು. ಅವರನ್ನು ದೂರದಲ್ಲೇ ಇಡಬೇಕು''.

ಕೃಪೆ: thewire.in

Writer - ಜಗದೀಪ್ ಎಸ್. ಛೋಕರ್

contributor

Editor - ಜಗದೀಪ್ ಎಸ್. ಛೋಕರ್

contributor

Similar News