ದಿಲ್ಲಿ: ಹೂವಿನ ಮಾರುಕಟ್ಟೆಯಲ್ಲಿ ಬ್ಯಾಗ್‌ನೊಳಗೆ ಬಾಂಬ್ ಪತ್ತೆ

Update: 2022-01-14 18:03 GMT
photo:twitter/@ANI

ಹೊಸದಿಲ್ಲಿ,ಜ.14: ಪೂರ್ವ ದಿಲ್ಲಿಯ ಗಾಝಿಪುರದ ಜನನಿಬಿಡ ಹೂವಿನ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಿಗ್ಗೆ ಪರಿತ್ಯಕ್ತ ಬ್ಯಾಗೊಂದರಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಪೊಲೀಸರು ಅದರ ನಿಯಂತ್ರಿತ ಸ್ಫೋಟವನ್ನು ನಡೆಸಿ ಸಂಭಾವ್ಯ ಭಾರೀ ದುರಂತವನ್ನು ತಪ್ಪಿಸಿದ್ದಾರೆ.

ದಿಲ್ಲಿ-ಉತ್ತರ ಪ್ರದೇಶ ನಡುವಿನ ಗಡಿಗೆ ಸಮೀಪದಲ್ಲಿರುವ ಈ ಹೂವಿನ ಮಾರುಕಟ್ಟೆಯಲ್ಲಿ ನಿಯಂತ್ರಿತ ಸ್ಫೋಟವನ್ನು ನಡೆಸಲು ಪೊಲೀಸರು ಎಂಟು ಅಡಿ ಆಳದ ಹೊಂಡವನ್ನು ಅಗೆದಿದ್ದರು.

ಗರಿಷ್ಠ ಹಾನಿಯನ್ನುಂಟು ಮಾಡಲು ಈ ಬಾಂಬ್ ಅನ್ನು ಇರಿಸಲಾಗಿತ್ತು ಎಂದು ದಿಲ್ಲಿ ಪೊಲೀಸರು ತಿಳಿಸಿದರು.

1.5 ಕೆ.ಜಿ.ಸ್ಫೋಟಕ ಪತ್ತೆಯಾಗಿದ್ದು,ಅದು ನೈಟ್ರೇಟ್ ಮಿಶ್ರಣವಾಗಿತ್ತು ಎನ್ನುವುದನ್ನು ಆರಂಭಿಕ ಪರೀಕ್ಷೆಗಳು ತೋರಿಸಿವೆ. ಗಡಿಯಾರ ಅಥವಾ ಮೊಬೈಲ್ ಫೋನ್‌ನಿಂದ ಈ ಸಾಧನವನ್ನು ಸ್ಫೋಟಿಸಬಹುದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದರೆ,ಬಾಂಬ್ ಸುಮಾರು ಮೂರು ಕೆ.ಜಿ.ತೂಕವಿತ್ತು ಎಂದು ಸ್ಥಳದಲ್ಲಿದ್ದ ಎನ್ಎಸ್ಐ ಅಧಿಕಾರಿಗಳು ತಿಳಿಸಿದರು.

ಗ್ರಾಹಕನೋರ್ವ ಬಿಟ್ಟು ಹೋಗಿದ್ದ ಬ್ಯಾಗಿನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಥವಾ ಕಚ್ಚಾಬಾಂಬ್ ಅನ್ನು ಇರಿಸಲಾಗಿತ್ತು ಎಂದು ದಿಲ್ಲಿ ಪೊಲೀಸ್ ಆಯುಕ್ತ ರಾಕೇಶ ಅಸ್ತಾನಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಬ್ಯಾಗನ್ನು ಅಲ್ಲಿ ಬಿಟ್ಟಿದ್ದ ವ್ಯಕ್ತಿ ಬೆಳಿಗ್ಗೆ 9:30ರ ಸುಮಾರಿಗೆ ಸ್ಕೂಟಿಯಲ್ಲಿ ಮಾರುಕಟ್ಟೆಗೆ ಆಗಮಿಸಿದ್ದು.ಹೂವುಗಳ ಖರೀದಿಗಾಗಿ ಬಂದಿದ್ದ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.

ಕೆಲ ಸಮಯದ ಬಳಿಕ ಬ್ಯಾಗ್ ಅನ್ನು ಗಮನಿಸಿದ ಹೂವಿನ ವ್ಯಾಪಾರಿಯು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಧಾವಿಸಿದ ದಿಲ್ಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಮಾರುಕಟ್ಟೆಗೆ ಪ್ರವೇಶವನ್ನು ನಿರ್ಬಂಧಿಸಿ ಬಾಂಬ್ ನಿಷ್ಕ್ರಿಯ ದಳದ ನೆರವಿನಿಂದ ನಿಯಂತ್ರಿತ ಸ್ಫೋಟ ಕಾರ್ಯಾಚರಣೆಯನ್ನು ನಡೆಸಿದರು.
ಫೆಬ್ರವರಿ-ಮಾರ್ಚ್ ನಲ್ಲಿ ನೆರೆಯ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಬಾಂಬ್ ಗೂ ನಂಟಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News