ಕೇಂದ್ರಕ್ಕೆ ಬೇಡವಾದ ಗುರು!

Update: 2022-01-15 04:20 GMT

ಈ ದೇಶದ ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ದಿನ ಗಣರಾಜ್ಯೋತ್ಸವ. ಹಲವು ಭಾಷೆ, ಸಂಸ್ಕೃತಿಗಳು, ಜೀವನ ಪದ್ಧತಿಗಳು ಭಾರತೀಯ ಅಸ್ಮಿತೆಯೊಳಗೆ ಗುರುತಿಸಲ್ಪಟ್ಟ ದಿನವೂ ಹೌದು. ಗಣರಾಜ್ಯೋತ್ಸವದ ದಿನ ನಡೆಯಲಿರುವ ಪರೇಡ್‌ಗಳಲ್ಲಿ ವಿವಿಧ ರಾಜ್ಯಗಳ ಹೆಗ್ಗಳಿಕೆಗಳನ್ನು ಎತ್ತಿ ಹಿಡಿಯುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಅದು ಆಯಾ ರಾಜ್ಯಗಳ ಬಹುತ್ವ ಪರಂಪರೆಗೆ ಹಿಡಿದ ಕನ್ನಡಿಯೂ ಹೌದು. ಈ ನಿಟ್ಟಿನಲ್ಲಿ, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳು ತಮ್ಮ ತಮ್ಮ ಸಂಸ್ಕೃತಿ, ಇತಿಹಾಸವನ್ನು ಎತ್ತಿ ಹಿಡಿಯುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸುತ್ತಾ ಬರುತ್ತಿವೆ. ದಕ್ಷಿಣ ಭಾರತದ ಸ್ತಬ್ಧ ಚಿತ್ರಗಳು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿವೆ. ಈ ಬಾರಿ ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಲ್ಪಡುವ ಕೇರಳದ ಸ್ತಬ್ಧಚಿತ್ರ ಕೆಲವು ಕಾರಣಗಳಿಂದ ವಿವಾದಕ್ಕೊಳಗಾಗಿದೆ. ಕೇರಳ ಸರಕಾರವು ಈ ಬಾರಿ ಜಟಾಯುಪಾರದ ಹಿನ್ನೆಲೆಯುಳ್ಳ ಮಹಿಳಾ ಸಬಲೀಕರಣವನ್ನು ಮತ್ತು ಪ್ರವಾಸೋದ್ಯಮವನ್ನು ಬಿಂಬಿಸುವ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಲು ಉದ್ದೇಶಿಸಿತ್ತು. ಇದರೊಂದಿಗೆ ಅದರ ಮುಂಭಾಗದಲ್ಲಿ ಮಹಾನ್ ಧಾರ್ಮಿಕ ಸುಧಾರಕರಾದ ನಾರಾಯಣ ಗುರುಗಳ ಪ್ರತಿಮೆಯನ್ನು ಇರಿಸುವುದಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿತ್ತು. ರಕ್ಷಣಾ ಸಚಿವಾಲಯ ನೇಮಿಸಿದ ತೀರ್ಪುಗಾರರು ಎಲ್ಲಾ ಐದು ಸುತ್ತಿನ ಚರ್ಚೆಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನೂ ನೀಡಿದ್ದರು. ಡಿಸೆಂಬರ್ 18ರಂದು ನಡೆದ ಅಂತಿಮ ಸುತ್ತಿನಲ್ಲಿ ತೀರ್ಪುಗಾರರು ಈ ನಕಲನ್ನು ಅನುಮೋದಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅನುಮೋದನೆಗೊಂಡ 12 ರಾಜ್ಯಗಳ ಪಟ್ಟಿಯಲ್ಲಿ ಕೇರಳದ ಹೆಸರಿರಲಿಲ್ಲ. ಕೇಂದ್ರ ಸರಕಾರಕ್ಕೆ ಸ್ತಬ್ಧ ಚಿತ್ರದಲ್ಲಿದ್ದ ನಾರಾಯಣ ಗುರುಗಳು ಅಪಥ್ಯವಾಗಿದ್ದರು. ಅವರ ಜಾಗದಲ್ಲಿ ಶಂಕರಾಚಾರ್ಯರನ್ನು ಕುಳ್ಳಿರಿಸಬೇಕು ಎಂದು ಕೇಂದ್ರ ಸರಕಾರ ಸೂಚನೆ ನೀಡಿತ್ತು.

ಕೇರಳಕ್ಕೆ ಭೇಟಿ ನೀಡಿದ್ದ ಸ್ವಾಮಿ ವಿವೇಕಾನಂದರು, ಇಲ್ಲಿನ ಜಾತಿ, ಅಸ್ಪಶ್ಯತೆಯನ್ನು ಕಂಡು ‘ಇದೊಂದು ಹುಚ್ಚಾಸ್ಪತ್ರೆ’ ಎಂದು ಕರೆದಿದ್ದರು. ಇಂತಹ ಹುಚ್ಚಾಸ್ಪತ್ರೆಗೆ ವಿವೇಕದ ಮದ್ದು ಅರೆದು ಅವರ ಹುಚ್ಚು ಬಿಡಿಸಿ, ಕೇರಳವನ್ನು ಪ್ರಜ್ಞಾವಂತರ ನಾಡಾಗಿ ಪರಿವರ್ತಿಸುವಲ್ಲಿ ನಾರಾಯಣಗುರುಗಳ ಪಾತ್ರ ಬಹುದೊಡ್ಡದು. ನಾರಾಯಣಗುರುಗಳನ್ನು ಹೊರಗಿಟ್ಟು, ಕೇರಳದ ಸಾಮಾಜಿಕ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾರಾಯಣ ಗುರುಗಳು ಕೇವಲ ಕೇರಳಕ್ಕೆ ಮಾತ್ರವಲ್ಲ, ಇಡೀ ದಕ್ಷಿಣ ಭಾರತಕ್ಕೆ ಪ್ರಭಾವವನ್ನು ಬೀರಿದ್ದಾರೆ. ಜಾತಿಗಳನ್ನು ಮೀರಿ ಅವರು ಆವರಿಸಿಕೊಂಡಿದ್ದಾರೆ. ಇಂತಹ ನಾರಾಯಣ ಗುರುಗಳನ್ನು ಪಕ್ಕಕ್ಕೆ ಸರಿಸಿ, ಆ ಸ್ಥಾನದಲ್ಲಿ ಶಂಕರಾಚಾರ್ಯರನ್ನು ಕುಳ್ಳಿರಿಸುವ ಕೇಂದ್ರ ಸರಕಾರದ ಹುನ್ನಾರದ ಹಿಂದೆ, ಸಂಘಪರಿವಾರದ ಹಿಂದುತ್ವ ರಾಜಕಾರಣಗಳಿವೆ.

 ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದವರು. ಅವರಿಗೆ ಅವರದೇ ಆದ ಹಿಂಬಾಲಕರಿದ್ದಾರೆ. ಮಾಧ್ವರು ಶಂಕರಾಚಾರ್ಯರನ್ನು ಎಷ್ಟು ವಿರೋಧಿಸುತ್ತಾರೆಯೋ ಅಷ್ಟೇ ತೀವ್ರವಾಗಿ ಶಂಕರ ಪಂಥದವರೂ ಮಾಧ್ವರನ್ನು ವಿರೋಧಿಸುತ್ತಾರೆ. ಶಂಕರಾಚಾರ್ಯರನ್ನು ಜಾತ್ಯತೀತರನ್ನಾಗಿಸುವ ಪ್ರಯತ್ನವನ್ನು ಕೆಲವರು ಮಾಡಿದ್ದಾರಾದರೂ, ಇತಿಹಾಸ ಶಂಕರಾಚಾರ್ಯರ ಮೇಲೆ ಹತ್ತು ಹಲವು ಆರೋಪಗಳನ್ನು ಹೊರಿಸುತ್ತದೆ. ಅವರು ತಮ್ಮದೇ ಆದ ಇನ್ನೊಂದು ಬ್ರಾಹ್ಮಣ ಪಂಥವನ್ನು ಆರಂಭಿಸಿದರೇ ಹೊರತು, ಜಾತೀಯತೆಯನ್ನು ತೊಡೆದು ಹಾಕಲು ಯಾವ ಕೊಡುಗೆಯನ್ನೂ ನೀಡಿದವರಲ್ಲ. ಲೌಕಿಕವಾಗಿ ಅವರು ಯಾವ ಸಾಮಾಜಿಕ ಸುಧಾರಣೆಗಳನ್ನೂ ಮಾಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬೌದ್ಧ ಧರ್ಮವನ್ನು ಈ ನೆಲದಿಂದ ಓಡಿಸುವುದಕ್ಕೆ ಸರ್ವ ಪ್ರಯತ್ನವನ್ನು ನಡೆಸಿದರು. ಬೌದ್ಧರ ನರಮೇಧಗಳನ್ನು ನಡೆಸಿದ ಆರೋಪ ಅವರ ಮೇಲಿದೆ. ಒಂದು ನಿರ್ದಿಷ್ಟ ಪಂಥಕ್ಕಷ್ಟೇ ಸೀಮಿತವಾಗಿರುವ, ಎಲ್ಲ ಬ್ರಾಹ್ಮಣರೇ ಸಂಪೂರ್ಣವಾಗಿ ಒಪ್ಪದ ಶಂಕರಾಚಾರ್ಯರನ್ನು ಆಧುನಿಕ ದಿನಗಳಲ್ಲಿ ಕೇರಳದ ಮೇಲೆ ಹೇರುವ ಕೇಂದ್ರ ಸರಕಾರದ ಪ್ರಯತ್ನ ಆಕಸ್ಮಿಕ ಅಲ್ಲ. ಈ ನಿಟ್ಟಿನಲ್ಲಿ ನಾರಾಯಣ ಗುರುಗಳ ಚಿಂತನೆಗಳನ್ನು ಅಳಿಸಿ, ಆ ಸ್ಥಾನದಲ್ಲಿ ಶಂಕರಾಚಾರ್ಯರನ್ನು ಸ್ಥಾಪಿಸುವ ಪ್ರಯತ್ನವನ್ನು ಪ್ರಜ್ಞಾವಂತರೆಲ್ಲ ಒಂದಾಗಿ ವಿರೋಧಿಸಬೇಕಾಗಿದೆ.

ಹೇಗೆ ಕರ್ನಾಟಕಕ್ಕೆ ಬಸವಣ್ಣ ಮುಖ್ಯವೋ, ಹಾಗೆಯೇ ಕೇರಳಕ್ಕೆ ನಾರಾಯಣಗುರುಗಳು ಮುಖ್ಯ. ನಾರಾಯಣ ಗುರುಗಳು ಆಗಿ ಹೋಗದೇ ಇದ್ದಿದ್ದರೆ, ಇಂದು ಕೇರಳ ಜಾತೀಯತೆಯ ಹುತ್ತದಿಂದ ಹೊರಬರುತ್ತಿರಲಿಲ್ಲ ಅಥವಾ ಜಾತಿ ದೌರ್ಜನ್ಯಗಳಿಂದ ಸಂತ್ರಸ್ತರಾದ ಕೆಳಜಾತಿಯ ಜನರಿಗೆ ಮತಾಂತರ ಅನಿವಾರ್ಯವಾಗಿರುತ್ತಿತ್ತು. ದೊಡ್ಡ ಮಟ್ಟದಲ್ಲಿ ಮತಾಂತರವನ್ನು ತಡೆಯುವಲ್ಲೂ ನಾರಾಯಣಗುರುಗಳು ಕೆಲಸ ಮಾಡಿದರು. ತಮ್ಮದೇ ದೇವಸ್ಥಾನವನ್ನು ಕಟ್ಟಿದರು. ಜನಿವಾರವೇ ಇಲ್ಲದ ಅರ್ಚಕರನ್ನು ಸೃಷ್ಟಿಸಿದರು. ದಲಿತರನ್ನು ಸಮಾನರಾಗಿ ಕಂಡರು. ಮುಸ್ಲಿಂ ಸೂಫಿ ಸಂತ ಮಾಲಿಕುದ್ದೀನಾರ್, ನಾರಾಯಣ ಗುರುಗಳ ವಿಚಾರಗಳು ಮತ್ತು ಕಮ್ಯುನಿಸಂ ಕೇರಳವನ್ನು ಕತ್ತಲೆಯಿಂದ ಬೆಳಗಿಗೆ ತಂದವು. ಪರೇಡ್‌ನ ಸ್ತಬ್ಧ ಚಿತ್ರದಿಂದ ನಾರಾಯಣ ಗುರುಗಳನ್ನು ಹೊರ ಹಾಕುವುದೆಂದರೆ, ಕೇರಳವನ್ನು ಮತ್ತೆ ಜಾತಿಯ ಕೂಪದ ಕಡೆಗೆ ತಳ್ಳುವುದು ಎಂದೇ ಅರ್ಥ.

ಈ ಹಿಂದೆ, ‘ಓಣಂ’ನ್ನು ‘ವಾಮನ ಜಯಂತಿ’ಯನ್ನಾಗಿಸಲು ಕೇಂದ್ರ ಸರಕಾರ ಪ್ರಯತ್ನಿಸಿತ್ತು. ಓಣಂ ಶುಭಾಶಯ ಹೇಳುವ ಬದಲು ಅಮಿತ್ ಶಾ ಅವರು ತಮ್ಮ ಜಾಹೀರಾತಿನಲ್ಲಿ ‘ವಾಮನ ಜಯಂತಿ’ಯ ಶುಭಾಶಯವನ್ನು ಕೋರಿದರು. ಇದು ಇಡೀ ಕೇರಳವನ್ನು ಸಿಟ್ಟಿಗೆಬ್ಬಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ‘ಪೋಮೋನೆ ಶಾ’ ಎನ್ನುವ ಆಂದೋಲನ ಆರಂಭವಾಯಿತು. ಕೇರಳದಲ್ಲಿ ಮಹಾಬಲಿ ಚಕ್ರವರ್ತಿ ಮತ್ತೆ ತನ್ನ ನಾಡಿಗೆ ಮರಳಿ, ಅಲ್ಲಿನ ಕಷ್ಟ ಸುಖಗಳನ್ನು ವೀಕ್ಷಿಸುವ ದಿನ ಓಣಂ. ಆ ದಿನವನ್ನು ವಾಮನನ ಹುಟ್ಟು ದಿನವಾಗಿಸಲು ನಡೆಸಿದ ಯತ್ನ, ಕೇರಳದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚಾರ ವಿಚಾರಗಳ ಮೇಲೆ ನಡೆಸಿದ ದಾಳಿಯಾಗಿತ್ತು. ಕೇರಳಿಗರು ತೀವ್ರ ಪ್ರತಿಭಟಿಸಿದ ಬಳಿಕ ಅಮಿತ್ ಶಾ ಅವರು ತಮ್ಮನ್ನು ತಿದ್ದಿಕೊಂಡರು. ಇದೀಗ ನಾರಾಯಣಗುರುಗಳ ಸ್ತಬ್ಧ ಚಿತ್ರವನ್ನು ಪರೇಡ್‌ನಲ್ಲಿ ಪ್ರದರ್ಶಿಸುವುದಕ್ಕೂ ದಕ್ಷಿಣ ಭಾರತೀಯರು ಕೇಂದ್ರಕ್ಕೆ ಒತ್ತಡ ಹೇರಬೇಕಾಗಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣಗುರುಗಳಿಗೆ ಸ್ಥಾನ ಸಿಗಲೇಬೇಕು. ಯಾವ ಕಾರಣಕ್ಕೂ ಗುರುಗಳ ಸ್ಥಾನವನ್ನು ಶಂಕರಾಚಾರ್ಯರು ಆಕ್ರಮಿಸುವಂತಾಗಬಾರದು. ಈ ನಿಟ್ಟಿನಲ್ಲಿ, ಕೇರಳ ಸರಕಾರ ತನ್ನ ಪ್ರತಿಭಟನೆಯನ್ನು ಕೇಂದ್ರಕ್ಕೆ ವ್ಯಕ್ತಪಡಿಸಬೇಕು. ಗುರು ಮತ್ತು ಗುರಿ ಎರಡೂ ಇಲ್ಲದ ಕೇಂದ್ರ ಸರಕಾರಕ್ಕೆ ನಾರಾಯಣ ಗುರುಗಳ ಚಿಂತನೆ ಗುರು ಮತ್ತು ಗುರಿಯೆರಡನ್ನೂ ನೀಡುವಂತಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News