ಉಡುಪಿ: ವಾರಾಂತ್ಯ ಕರ್ಪ್ಯೂ ವಿರೋಧಿಸಿ ಸವಿತಾ ಸಮಾಜದಿಂದ ಡಿಸಿಗೆ ಮನವಿ

Update: 2022-01-14 17:59 GMT

ಉಡುಪಿ: ಅವೈಜ್ಞಾನಿಕ ವಾರಾಂತ್ಯ ಕರ್ಫ್ಯೂ ವಿರೋಧಿಸಿ ಹಾಗೂ ವಾರಾಂತ್ಯದಲ್ಲಿ ಸೆಲೂನ್ ಪಾರ್ಲರ್‌ಗಳಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಸವಿತಾ ಸಮಾಜದ ನಿಯೋಗವು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ಮನವಿ ಸಲ್ಲಿಸಿತು.

ಈ ಹಿಂದಿನ ಎರಡು ವರ್ಷಗಳಲ್ಲಿ ಎರೆಡರಡು ತಿಂಗಳ ಲಾಕ್‌ಡೌನ್ ಹಾಗೂ ವಾರಾಂತ್ಯ ಲಾಕ್‌ಡೌನ್‌ನಿಂದ ದಿನಗೂಲಿ ನೌಕರರಂತೆ ದುಡಿಯುವ ಕ್ಷೌರಿಕರು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಕೆಲಸ ಜಾಸ್ತಿ ಇರುವ ಶನಿವಾರ ಮತ್ತು ರವಿವಾರವೇ ಕರ್ಫ್ಯೂ ಜಾರಿ ಮಾಡಿರುವುದರಿಂದ ಸೆಲೂನ್ ಬಂದ್ ಮಾಡಿ ಮನೆಯಲ್ಲಿಯೇ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ನಿಯೋಗ ಮನವಿಯಲ್ಲಿ ದೂರಿದೆ.

ಜನಸಂದಣಿ ಹೆಚ್ಚಿರುವ ರೈಲು, ಬಸ್ ಸೇರಿದಂತೆ ಸಾರಿಗೆ ವ್ಯವಸ್ಥೆ, ದಿನಸಿ, ತರಕಾರಿ, ಮಾಂಸದಂಗಡಿಗಳಿಗೆ ಸಮಯವನ್ನು ನಿಗದಿಪಡಿಸದೇ ಬೇಕಾದಷ್ಟು ವ್ಯವಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಜನಸಂದಣಿಯೇ ಆಗದ ಸೆಲೂನ್‌ಗಳನ್ನು ಬಂದ್ ಮಾಡಿ ದುಡಿದು ತಿನ್ನುವ ನಮ್ಮ ಕ್ಷೌರಿಕರಿಗೆ ಅನ್ಯಾಯ ಮಾಡಿರುವ ಸರಕಾರದ ಕ್ರಮವನ್ನು ವಿರೋಧಿಸುತ್ತೇವೆ ಎಂದು ನಿಯೋಗ ಮನವಿಯಲ್ಲಿ ಟೀಕಿಸಿದೆ.

ರಾಜಕೀಯ ಮೆರವಣಿಗೆ, ರ್ಯಾಲಿ, ಧಾರ್ಮಿಕ ಮೆರವಣಿಗೆಗಳಿಗೆ ಕಡಿವಾಣ ಹಾಕದೆ ಪ್ರಾಮಾಣಿಕವಾಗಿ ದುಡಿಯುವ ವರ್ಗಕ್ಕೆ ನಿಯಂತ್ರಣ ಹೇರುವ ಕ್ರಮ ಖಂಡನೀಯ. ಕ್ಷೌರಿಕ ವೃತ್ತಿಯನ್ನು ಅಗತ್ಯ ಸೇವೆ ಎಂಬುದು ಪರಿಗಣಿಸಿ ವಾರಾಂತ್ಯ ಲೌಕ್‌ಡೌನ್ ಹಾಗೂ ಸಂಪೂರ್ಣ ಲಾಕ್‌ಡೌನ್‌ನಿಂದ ಮುಕ್ತಗೊಳಿಸ ಬೇಕು. ಇದಕ್ಕೆ ನ್ಯಾಯ ಸಿಗದಿದ್ದಲ್ಲಿ ಕ್ಷೌರಿಕರ ಕಷ್ಟನಷ್ಟಗಳಿಗೆ ಸರಕಾರವೇ ಹೊಣೆ ಆಗಲಿದೆ ಎಂದು ನಿಯೋಗ ಎಚ್ಚರಿಕೆ ನೀಡಿದೆ.

ನಿಯೋಗದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರು, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ್ ಸಾಲಿಯಾನ್ ಆದಿಉಡುಪಿ, ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮೂಲ್ಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News