ಮಾಲಿ: ವಿಶೇಷ ಕಾರ್ಯಪಡೆಯಿಂದ ಸೈನಿಕರನ್ನು ಹಿಂಪಡೆಯಲು ಸ್ವೀಡನ್ ನಿರ್ಧಾರ

Update: 2022-01-14 18:07 GMT

ಸ್ಟಾಕ್ಹೋಂ, ಜ.14: ಮಾಲಿ ದೇಶದಲ್ಲಿ ನಿಯೋಜನೆಗೊಂಡಿರುವ ಫ್ರಾನ್ಸ್ ನೇತೃತ್ವದ ಯುರೋಪಿಯನ್ ವಿಶೇಷ ಕಾರ್ಯಪಡೆಯಲ್ಲಿರುವ ತನ್ನ ಸೈನಿಕರನ್ನು ಈ ವರ್ಷ ಹಿಂದಕ್ಕೆ ಕರೆಸಿಕೊಳ್ಳಲು ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸ್ವೀಡನ್ ಸೈನಿಕರ ಉಪಸ್ಥಿತಿಯ ಬಗ್ಗೆ ಪುನರ್ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ವೀಡನ್ ಹೇಳಿದೆ.

ಮಾಲಿಯಲ್ಲಿ ರಶ್ಯಾದ ಖಾಸಗಿ ಮಿಲಿಟರಿ ಗುತ್ತಿಗೆದಾರರ ಆಗಮನದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ವೀಡನ್ನ ವಿದೇಶ ವ್ಯವಹಾರ ಇಲಾಖೆ ಹೇಳಿದೆ. ಪಶ್ಚಿಮ ಫ್ರಾನ್ಸ್ನಲ್ಲಿ ಶುಕ್ರವಾರ ನಡೆದ ಯುರೋಪಿಯನ್ ಯೂನಿಯನ್ ವಿದೇಶ ವ್ಯವಹಾರ ಸಚಿವರ ಸಭೆಯ ನೇಪಥ್ಯದಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಸ್ವೀಡನ್ನ ವಿದೇಶ ವ್ಯವಹಾರ ಸಚಿವೆ ಆ್ಯನ್ ಲಿಂಡೆ, ಈ ವರ್ಷ ವಿಶೇಷ ಕಾರ್ಯಪಡೆಯಿಂದ ನಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಈಗಾಗಲೇ ನಿರ್ಧರಿಸಿದ್ದೇವೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ವಿಷಯದಲ್ಲಿ ನಾವೇನು ಮಾಡಬೇಕು ಎಂಬುದು ಇಲ್ಲಿರುವ ಪ್ರಶ್ನೆಯಾಗಿದೆ . ರಶ್ಯಾದ ಖಾಸಗಿ ಸಂಸ್ಥೆ ವ್ಯಾಗ್ನರ್ ಗ್ರೂಪ್ ಮಾಲಿಗೆ ಆಗಮಿಸುವುದು ಖಚಿತವಾಗಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ ಮತ್ತು ಮಾಲಿಯ ಸೇನಾಡಳಿತ ಅಧಿಕಾರದಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಿದ್ದು ಇದಕ್ಕೆ ನಮ್ಮ ಸಹಮತವಿಲ್ಲ. ಆದ್ದರಿಂದ ಮಾಲಿ ವಿಷಯವನ್ನು ಮುಂದಿನ ವಾರ ಸ್ವೀಡನ್ ಸಂಸತ್ತು ಚರ್ಚಿಸಲಿದೆ ಎಂದು ಹೇಳಿದರು.
    
ಮಾಲಿ ದೇಶದಲ್ಲಿ ತಕುಬಾ ಕಾರ್ಯಪಡೆಗೆ 150 ಸೈನಿಕರು ಹಾಗೂ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 250 ಯೋಧರನ್ನು ಸೇರ್ಪಡೆಗೊಳಿಸಲು 2020ರಲ್ಲಿ ಸ್ವೀಡನ್ ಸಂಸತ್ತು ಅನುಮೋದನೆ ನೀಡಿತ್ತು. ತಕುಬಾ ಕಾರ್ಯಪಡೆಯಲ್ಲಿ ಯುರೋಪಿಯನ್ ಯೂನಿಯನ್ನ 14 ದೇಶಗಳ ಸೈನಿಕರಿದ್ದು ಇಸ್ಲಾಮಿಕ್ ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ದೇಶದ ಭದ್ರತಾ ಪಡೆಗೆ ಕಾರ್ಯತಂತ್ರ ಮತ್ತು ವ್ಯವಸ್ಥಾಪನಾ ನೆರವು ಒದಗಿಸುತ್ತದೆ.
 
ಈ ಮಧ್ಯೆ, ರಶ್ಯಾದ ಖಾಸಗಿ ಮಿಲಿಟರಿ ಗುತ್ತಿಗೆದಾರ ಸಂಸ್ಥೆ ವಾಗ್ನರ್ ಗ್ರೂಫ್(ಇದರಲ್ಲಿನ ಬಹುತೇಕ ಸದಸ್ಯರು ಗುಪ್ತಚರ ವಿಭಾಗದ ಮಾಜಿ ಸಿಬಂದಿಗಳು) ಮಾಲಿಗೆ ಆಗಮಿಸಿರುವುದನ್ನು ಯುರೋಪಿಯನ್ ಯೂನಿಯನ್ನ ಸದಸ್ಯ ದೇಶಗಳು ಆಕ್ಷೇಪಿಸಿವೆ.
 
ಈ ಮಧ್ಯೆ, ಮಾಲಿಯ ಆಡಳಿತವನ್ನು ನಿಯಂತ್ರಿಸುತ್ತಿರುವ ಸೇನೆಯು ಸಾರ್ವತ್ರಿಕ ಚುನಾವಣೆ ನಡೆಸಲು ವಿಳಂಬಿಸುತ್ತಿರುವುದರಿಂದ ಆ ದೇಶದ ವಿರುದ್ಧ ಯುರೋಪಿಯನ್ ಯೂನಿಯನ್ ದೇಶಗಳು ನಿರ್ಬಂಧ ಜಾರಿಗೊಳಿಸಲಿವೆ ಎಂದು ಯುರೋಪಿಯನ್ ಯೂನಿಯನ್ನ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News