ಮಣಿಪಾಲ: ನಾಲ್ವರು ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ

Update: 2022-01-15 16:21 GMT

ಮಣಿಪಾಲ: ಕರಾವಳಿ ಮೂಲದ ನಾಲ್ವರು ಸಾಧಕರಾದ ಟಾಟಾ ಸನ್ಸ್ ಪ್ರೈ.ಲಿನ ನಿರ್ದೇಶಕ ಭಾಸ್ಕರ ಭಟ್, ಮುಂಬಯಿ ಸಂಜೀವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುರೇಶ್ ರಾವ್, ಮಾಹೆ ಬೆಂಗಳೂರು ಕ್ಯಾಂಪಸ್‌ನ ಸಹಕುಲಪತಿ ಡಾ.ಪ್ರಜ್ಞಾ ರಾವ್ ಹಾಗೂ ಯಕ್ಷಗಾನ ಕಲಾವಿದ ತೀರ್ಥಹಲ್ಳಿ ಗೋಪಾಲ ಆಚಾರ್ಯ ಇವರಿಗೆ 2022ನೇ ಸಾಲಿನ ಹೊಸ ವರ್ಷ ಪ್ರಶಸ್ತಿಯನ್ನು ಶುಕ್ರವಾರ ಸಂಜೆ ಮಣಿಪಾಲದಲ್ಲಿ ಪ್ರದಾನ ಮಾಡಲಾಯಿತು.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್, ಮಾಹೆ ವಿವಿ, ಮಣಿಪಾಲ ಎಜುಕೇಷನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಹಾಗೂ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಇವುಗಳ ಸಹಯೋಗ ದೊಂದಿಗೆ ಈ ಕಾರ್ಯಕ್ರಮವನ್ನು ಮಣಿಪಾಲದ ಹೊಟೇಲ್ ವ್ಯಾಲಿವ್ಯೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಕ್ಷಗಾನ ಕಲಾವಿದ ಕುಂದಾಪುರ ತಾಲೂಕು ಕೆರ್ಗಾಲ್ ನಿವಾಸಿ ತೀರ್ಥಹಳ್ಳಿ ಗೋಪಾಲ ಆಚಾರ್ಯ, ಕರಾವಳಿಯ ಗಂಡುಕಲೆಯಾದ ಯಕ್ಷಗಾನವನ್ನು ಉಳಿಸಿ, ಬೆಳೆಸುವಲ್ಲಿ ಯುವ ಪೀಳಿಗೆಗೆ ಹೊಣೆಗಾರಿಕೆ ಇದೆ. ಕ್ಷೇತ್ರದಲ್ಲಿ ಸದ್ಯ ಸಾಕಷ್ಟು ಮಂದಿ ಪ್ರತಿಭಾನ್ವಿತ ಯುವ ಕಲಾವಿದರಿದ್ದು ಇವರು ಹೊಣೆ ಹೊರುತ್ತಾರೆಂಬ ಭರವಸೆ ಇದೆ ಎಂದರು.

ಪ್ರಶಸ್ತಿ ವಿಜೇತರನ್ನು ಎಂಇಎಂಜಿ ಗ್ರೂಪ್‌ನ ಅಧ್ಯಕ್ಷ ಹಾಗೂ ಅಕಾಡೆಮಿ ಆಪ್ ಜನರಲ್ ಎಜುಕೇಷನ್‌ನಮ ರಿಜಿಸ್ಟ್ರಾರ್ ಡಾ.ರಂಜನ್ ಪೈ ಅವರು, ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್,ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್.ಪೈ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಆಡಳಿತ ನಿರ್ದೇಶಕ ಟಿ.ಸತೀಶ್ ಯು.ಪೈ, ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಸನ್ಮಾನಿಸಿದರು.

ಡಾ.ಎಚ್.ಎಸ್.ಬಲ್ಲಾಳ್ ಅತಿಥಿಗಳನ್ನು ಸ್ವಾಗತಸಿದರೆ, ಭಂಡಾರ್‌ಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ನಾರಾಯಣ ಶೆಟ್ಟಿ ವಂದಿಸಿದರು. ಎಂಸಿಎಚ್‌ಪಿನ ಪ್ರಾಧ್ಯಾಪಕಿ ಡಾ.ನಿವೇದಿತಾ ಎಸ್.ಪ್ರಭು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News