ಪ್ರತಿಭಟನಾಕಾರರ ಮೇಲೆ ಮಾತ್ರಪ್ರಕರಣ ದಾಖಲು ಖಂಡನೀಯ: ಕಾಂಗ್ರೆಸ್

Update: 2022-01-15 16:31 GMT

ಉಡುಪಿ, ಜ.15: ಕೋಟತಟ್ಟು ಗ್ರಾ.ಪಂ.ನ ಚಿಟ್ಟಿಬೆಟ್ಟುನಲ್ಲಿ ನಡೆದ ಕೊರಗ ಸಮುದಾಯದವರ ಮೇಲಿನ ಪೋಲಿಸ್ ದೌರ್ಜನ್ಯ ಪ್ರಕರಣದ ತನಿಖೆಯನ್ನು ನ್ಯಾಯಮೂರ್ತಿಗಳಿಗೆ ಒಪ್ಪಿಸಿ ತಪ್ಪಿತಸ್ಥರಿಗೆ ಶಿಕ್ಷೆ ಹಾಗೂ ನೊಂದ ಕೊರಗರಿಗೆ ನ್ಯಾಯ ಒದಗಿಸಬೇಕೆಂಬ ಆಗ್ರಹದೊಂದಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕೋವಿಡ್ ನಿಯಮಾವಳಿ ಪಾಲಿಸಿಕೊಂಡು ಜ.12ರಂದು ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಮಣಿಪಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಬಿಜೆಪಿಯು ಪ್ರತಿಭಟನೆ, ಸಾವರ್ಕರ್ ಬಗ್ಗೆ ಸಾರ್ವಜನಿಕ ಸಭೆ, ಮೆರವಣಿಗೆ ಹಾಗೂ ಇನ್ನಿತರ ಸಭೆ ಸಮಾರಂಭಗಳನ್ನು ಸಂಘಟಿಸುತ್ತಿದೆ. ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಿಜೆಪಿಯು ಸಂಘಟಿಸುವ ಈ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ನೋಡಿಯೂ ತಮ್ಮ ಗಮನಕ್ಕೆ ಬಂದಿಲ್ಲ ವೆಂಬಂತೆ ನಟಿಸುತ್ತಿರುವುದು ಜಿಲ್ಲಾಡಳಿತದ ದ್ವಂದ್ವ ನಿಲುವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದೆ.

ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಬಿಜೆಪಿ ಪಕ್ಷದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ಕೋಟದ ಸಂತ್ರಸ್ತ ಕೊರಗರಿಗೆ ನೈತಿಕ ಸ್ಥೈರ್ಯ ತುಂಬಲು ಕಾಂಗ್ರೆಸ್ ಕೋವಿಡ್ ನಿಯಮಾವಳಿಗಳನ್ನು ಅಳವಡಿಸಿಕೊಂಡು ಸೀಮಿತ ಕಾರ್ಯಕರ್ತರನ್ನೊಳಗೊಂಡ ಮನವಿ ಸಮರ್ಪಣಾ ಮೆರವಣಿಗೆಯನ್ನೇ ನೆಪವಾಗಿಟ್ಟುಕೊಂಡು ಜಿಲ್ಲಾಡಳಿತವು ಪ್ರಕರಣವನ್ನು ದಾಖಲಿಸಿರುವುದು ಖಂಡನೀಯ ಎಂದು ಅವರು ಹೇಳಿದೆ.

ಆಡಳಿತದ ತಾರತಮ್ಯವನ್ನು ಮುಂದಿನ ದಿನಗಳಲ್ಲಿ ಸರಿ ಮಾಡದಿದ್ದರೆ ಜಿಲ್ಲಾ ಕಾಂಗ್ರೆಸ್ ಇದರ ವಿರುದ್ಧ ಜನಾಭಿಪ್ರಾಯ ಕ್ರೋಡಿಕರಿಸುವುದಕ್ಕಾಗಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಹುಮ್ಮಿಕೊಳ್ಳುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News