ಅಮೆರಿಕ: ಸಿಖ್ ಡ್ರೈವರ್ ಮೇಲೆ ದಾಳಿ ನಡೆಸಿದ ವ್ಯಕ್ತಿಯ ಬಂಧನ

Update: 2022-01-15 17:21 GMT

ನ್ಯೂಯಾರ್ಕ್, ಜ.15: ಅಮೆರಿಕದ ಜೆಎಫ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಮೂಲದ ಸಿಖ್ ಟ್ಯಾಕ್ಸಿ ಡ್ರೈವರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಅಧಿಕಾರಿಗಳು ದ್ವೇಷದ ಅಪರಾಧಕ್ಕಾಗಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಜನವರಿ 3ರಂದು ಸಿಖ್ ಡ್ರೈವರ್ನ ಮೇಲೆ ಹಲ್ಲೆನಡೆಸಿ ಆತನ ಟರ್ಬನ್(ಮುಂಡಾಸು) ಕಿತ್ತು ನೆಲಕ್ಕೆ ಎಸೆದಿದ್ದ ಆರೋಪಿ ಮುಹಮ್ಮದ್ ಹಸನೈನ್ , ಬಳಿಕ ‘ಟರ್ಬನ್ ಧರಿಸಿರುವ ವ್ಯಕ್ತಿಗಳು ನಿಮ್ಮ ದೇಶಕ್ಕೇ ಹೊರಟುಹೋಗಿ’ ಎಂದು ಕಿರುಚಿದ್ದ. ಈತನ ಬಂಧನವನ್ನು ನ್ಯೂಯಾರ್ಕ್ ವಿಮಾನನಿಲ್ದಾಣ ಪ್ರಾಧಿಕಾರ ಮತ್ತು ನ್ಯೂಜೆರ್ಸಿ ಪೊಲೀಸ್ ವಿಭಾಗ ದೃಢಪಡಿಸಿದೆ ಎಂದು ಸಿಖ್ ಒಕ್ಕೂಟದ ಹೇಳಿಕೆ ತಿಳಿಸಿದೆ.

ಡ್ರೈವರ್ನನ್ನು ಟರ್ಬನ್ ದಾರಿ ವ್ಯಕ್ತಿ ಎಂದು ಕರೆದಿರುವುದು ಹಾಗೂ ನಿಮ್ಮ ದೇಶಕ್ಕೆ ಹಿಂತಿರುಗಿ ಎಂದು ಕಿರುಚಿರುವುದು, ಜತೆಗೆ ಡ್ರೈವರ್ನ ಮೇಲೆ ನಿರಂತರ ಪ್ರಹಾರ ನಡೆಸಿರುವು ದನ್ನು ದ್ವೇಷ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸಿಖ್ ಡ್ರೈವರ್ ರ ಖಾಸಗಿತನಕ್ಕೆ ಗೌರವ ನೀಡಿ ಅವರನ್ನು ಮಿ.ಸಿಂಗ್ ಎಂದೇ ಹೆಸರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನ್ಯೂಯಾರ್ಕ್ ನಗರದ ನಿವಾಸಿ ಮಿ.ಸಿಂಗ್ ಜನವರಿ 3ರಂದು ಜೆಎಫ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 4ರ ಟ್ಯಾಕ್ಸಿ ನಿಲ್ದಾಣದಲ್ಲಿ ತನ್ನ ಕಾರನ್ನು ಪಾರ್ಕ್ ಮಾಡಿದ್ದರು. ಆಗ ಮತ್ತೊಬ್ಬ ಡ್ರೈವರ್ ಮುಹಮ್ಮದ್ ಹಸನೈನ್ ತನ್ನ ಕಾರನ್ನು ಸಿಂಗ್ ಅವರ ಕಾರಿಗೆ ಅಡ್ಡವಾಗಿ ನಿಲ್ಲಿಸಿದ್ದ. ಗ್ರಾಹಕರೊಬ್ಬರು ಹತ್ತಿದ ಬಳಿಕ ಸಿಂಗ್ ತಮ್ಮ ಕಾರನ್ನು ಅಲ್ಲಿಂದ ಹೊರತೆಗೆಯಲು ಮುಂದಾಗಿದ್ದು ಅಡ್ಡವಾಗಿ ನಿಲ್ಲಿಸಿದ್ದ ಕಾರನ್ನು ಮುಂದಕ್ಕೆ ಚಲಾಯಿಸುವಂತೆ ತಿಳಿಸಲು ಹೋದಾಗ ಹಸನೈನ್ ಮುಷ್ಟಿಯಿಂದ ತಲೆ, ಎದೆ ಮತ್ತು ಕೈಗಳ ಮೇಲೆ ಪ್ರಹಾರ ನಡೆಸಿದ್ದಲ್ಲದೆ ಸಿಂಗ್ರನ್ನು ಎಳೆದಾಡಿ ‘ನಿಮ್ಮ ದೇಶಕ್ಕೇ ಹಿಂತಿರುಗಿ’ ಎಂದು ಕಿರುಚಿದ್ದು ಸಿಂಗ್ ಅವರ ಟರ್ಬೈನ್ ನೆಲಕ್ಕುರುಳಿದೆ ಎಂದು ಸಿಖ್ ಒಕ್ಕೂಟದ ಹೇಳಿಕೆ ತಿಳಿಸಿದೆ.

ಈ ಪ್ರಕರಣದಲ್ಲಿ ತ್ವರಿತ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿರುವುದಕ್ಕೆ ಮತ್ತು ಇದು ಸಿಖ್ ವಿರೋಧಿ ಪ್ರಕರಣವೆಂದು ಪರಿಗಣಿಸಿರುವುದಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರದ ಪೊಲೀಸ್ ವಿಭಾಗಕ್ಕೆ ಆಭಾರಿಯಾಗಿರುತ್ತೇವೆ. ಇಂತಹ ದಾಳಿ, ನಿಂದನೆ ನಡೆದಾಗ ತಕ್ಷಣ ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ದ್ವೇಷ ಸಾಧಕರ ವಿರುದ್ಧ ಕ್ರಮ ಕೈಗೊಳ್ಳುವುದು ಮತಾಂಧತೆ ಮತ್ತು ಅದು ಉತ್ತೇಜಿಸುವ ಹಿಂಸಾಚಾರಕ್ಕೆ ನಮ್ಮ ಸಮುದಾಯದಲ್ಲಿ ಯಾವುದೇ ಜಾಗವಿಲ್ಲ ಎಂಬುದರ ಸೂಚಕವಾಗಿದೆ ಎಂದು ಸಿಖ್ ಒಕ್ಕೂಟದ ಕಾನೂನು ನಿರ್ದೇಶಕ ಅಮೃತ್ ಕೌರ್ ಆಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News