ಚೀನಾದೊಂದಿಗಿನ 25 ವರ್ಷಾವಧಿಯ ಒಪ್ಪಂದ ಅನುಷ್ಠಾನ ಹಂತದಲ್ಲಿದೆ: ಇರಾನ್

Update: 2022-01-15 17:53 GMT

ಬೀಜಿಂಗ್, ಜ.15: ಕಳೆದ ವರ್ಷ ಇರಾನ್ ಮತ್ತು ಚೀನಾ ನಡುವೆ ಸಹಿ ಹಾಕಲಾದ 25 ವರ್ಷಾವಧಿಯ ಸಮಗ್ರ ಸಹಕಾರ ಒಪ್ಪಂದ ಈಗ ಅನುಷ್ಟಾನ ಹಂತದಲ್ಲಿದೆ ಎಂದು ಇರಾನ್ನ ವಿದೇಶ ವ್ಯವಹಾರ ಸಚಿವ ಹುಸೈನ್ ಅಮೀರಬ್ದುಲ್ಲಾಹಿಯಾನ್ ಹೇಳಿದ್ದಾರೆ.

ವಿದೇಶ ವ್ಯವಹಾರ ಸಚಿವರಾಗಿ ಚೀನಾಕ್ಕೆ ನೀಡಿರುವ ಪ್ರಥಮ ಭೇಟಿಯಲ್ಲಿ ಶುಕ್ರವಾರ ಚೀನಾದ ವಿದೇಶ ವ್ಯವಹಾರ ಸಚಿವ ವಾಂಗ್ ಯಿ ಜತೆ ನಡೆಸಿದ ಮಾತುಕತೆಯ ಬಳಿಕ ಹುಸೈನ್ ಈ ಘೋಷಣೆ ಮಾಡಿದ್ದಾರೆ. ಚೀನಾ ಭೇಟಿಗೆ ಸಿದ್ಧತೆ ನಡೆಸುತ್ತಿರುವಾಗ, ಉಭಯ ದೇಶಗಳ ನಡುವಿನ ಸಮಗ್ರ ಒಪ್ಪಂದವನ್ನು ಅನುಷ್ಟಾನಗೊಳಿಸುವ ಆರಂಭದ ದಿನವಾಗಿ ಈ ದಿನವನ್ನು ಗುರುತಿಸುವ ನಿಟ್ಟಿನಲ್ಲಿಯೂ ಸಿದ್ಧತೆ ನಡೆಸಿದ್ದೇವೆ ಎಂದವರು ಹೇಳಿದ್ದಾರೆ.

ಚೀನಾದ ವಿದೇಶ ಸಚಿವರೊಂದಿಗಿನ ಭೇಟಿ ಸಂದರ್ಭ ಹುಸೈನ್ ಅಮೀರಬ್ದುಲ್ಲಾಹಿಯಾನ್ ಇರಾನ್ನ ಅಧ್ಯಕ್ಷ ಇಬ್ರಾಹಿಂ ರೈಸಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ಗೆ ಬರೆದ ಪತ್ರವನ್ನು ಹಸ್ತಾಂತರಿಸಿದ್ದು ಇದರಲ್ಲಿ ರೈಸಿಯ ಆಡಳಿತಕ್ಕೆ ಸಂಬಂಧಿಸಿದ ಪ್ರಮುಖ ಸಂದೇಶವಿದೆ ಎಂದವರು ಹೇಳಿದ್ದಾರೆ. ಚೀನಾವನ್ನು ಪ್ರಮುಖವಾಗಿ ಪರಿಗಣಿಸಿದ ಏಶ್ಯಾ ಕೇಂದ್ರಿತ ವಿದೇಶಿ ಕಾರ್ಯನೀತಿಯನ್ನು ಹಲವು ಬಾರಿ ರೈಸಿಯ ಆಡಳಿತ ಉಲ್ಲೇಖಿಸಿದೆ. ಉಭಯ ದೇಶಗಳೂ ವಿಶ್ವಸಂಸ್ಥೆಯ ವಿವಿಧ ಹಂತದ ನಿರ್ಬಂಧಕ್ಕೆ ಒಳಗಾಗಿದ್ದರೂ, 2021ರ ಮಾರ್ಚ್ನಲ್ಲಿ ಇರಾನ್ನ ಮಾಜಿ ಪ್ರಧಾನಿ ಹಸನ್ ರೌಹಾನಿ ಅಧಿಕಾರಾವಧಿಯಲ್ಲಿ ಸಹಿ ಹಾಕಲಾದ ಕಾರ್ಯತಂತ್ರದ ಒಪ್ಪಂದವು ಆರ್ಥಿಕ, ಸೈನಿಕ ಮತ್ತು ಭದ್ರತೆಯ ಕ್ಷೇತ್ರದಲ್ಲಿ ಸಹಕಾರ ಸಂಬಂಧವನ್ನು ಒಳಗೊಂಡಿದೆ. ಜತೆಗೆ, ಇರಾನ್ನ ತೈಲವನ್ನು ಚೀನಾ ರಿಯಾಯಿತಿ ದರದಲ್ಲಿ ಖರೀದಿಸುವ ಒಪ್ಪಂದವೂ ಇದರಲ್ಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News