ಧರ್ಮಸಂಸದ್ ದ್ವೇಷಭಾಷಣ: ಸಿಟ್ ತನಿಖೆ ಆಗ್ರಹಿಸಿ ಸುಪ್ರೀಂ ಮೆಟ್ಟಲೇರಿದ ಮೂವರು ನಿವೃತ್ತ ಸೇನಾಧಿಕಾರಿಗಳು

Update: 2022-01-15 18:03 GMT

ಹೊಸದಿಲ್ಲಿ,ಜ.15: ಹರಿದ್ವಾರ ಹಾಗೂ ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಧರ್ಮಸಂಸದ್ ಸಮಾವೇಶಗಳಲ್ಲಿ ಮಾಡಲಾದ ಮುಸ್ಲಿಂ ವಿರೋಧಿ ದ್ವೇಷ ಭಾಷಣದ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡದ ನೇಮಕವಾಗಬೇಕೆಂದು ಕೋರಿ ಭಾರತೀಯ ಸಶಸ್ತ್ರಪಡೆಗಳ ಮೂವರು ನಿವೃತ್ತ ಸೇನಾಧಿಕಾರಿಗಳು ಶನಿವಾರ ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಮೇಜರ್ ಜನರಲ್ ಎಸ್.ಜಿ.ವೊಂಬಟ್ಕೆರೆ,ಕರ್ನಲ್ ಪಿ.ಕೆ.ನಾಯರ್ ಹಾಗೂ ಮೇಜರ್ ಪ್ರಿಯದರ್ಶಿ ಚೌಧುರಿ ಸುಪ್ರೀಂಕೋರ್ಟ್ ಮೆಟ್ಟಲೇರಿದ ನಿವೃತ್ತ ಸೇನಾಧಿಕಾರಿಗಳಾಗಿದ್ದಾರೆ.

‘‘ಧರ್ಮಸಂಸದ್ನಲ್ಲಿ ಮಾಡಲಾದ ದೇಶವಿರೋಧಿ ಹಾಗೂ ವಿಭಜನವಾದಿ ಭಾಷಣಗಳು ನೆಲದ ಕ್ರಿಮಿನಲ್ ಕಾನೂನನ್ನು ಉಲ್ಲಂಘಿಸುತ್ತವೆ ಮಾತ್ರವಲ್ಲದೆ ಭಾರತದ ಸಂವಿಧಾನದ 19ನೇ ವಿಧಿಯನ್ನು ನಿಷೇಧಿಸುತ್ತವೆ. ಈ ಭಾಷಣಗಳು ಭಾರತದ ಜಾತ್ಯತೀತ ಸಂರಚನೆಯನ್ನು ಕಳಂಕಿತಗೊಳಿಸಿವೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಗಂಭೀರ ಸಾಧ್ಯತೆಗಳು ಕೂಡಾ ಇವೆ ಎಂದು ಅರ್ಜಿದಾರರು ಹೇಳಿದ್ದಾರೆ.

ಇಂತಹ ಘಟನೆಗಳಿಗೆ ಕಡಿವಾಣ ಹಾಕದೆ ಇದ್ದಲ್ಲಿ ವೈವಿಧ್ಯಮಯ ಸಮುದಾಯಗಳು ಹಾಗೂ ಧರ್ಮಗಳಿಗೆ ಸೇರಿದವರಾದ ಸಶಸ್ತ್ರ ಪಡೆಗಳ ಸೈನಿಕರ ನೈತಿಕತೆ ಹಾಗೂ ಪ್ರಾಮಾಣಿಕತೆಯ ಮೇಲೆ ಗಂಭೀರ ಪ್ರಭಾವ ಬೀರಲಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. 

ಇಂತಹ ದ್ವೇಷಭಾಷಣಗಳು ನಮ್ಮ ಸಶಸ್ತ್ರಪಡೆಗಳ ಸಮರ ಕೌಶಲ್ಯದ ಮೇಲೂ ಪರಿಣಾಮ ಬೀರಲಿದೆ ಮತ್ತು ಇದರಿಂದಾಗಿ ರಾಷ್ಟ್ರೀಯ ಭದ್ರತೆಯ ಜೊತೆ ರಾಜಿ ಮಾಡಿಕೊಂಡಂತಾಗುತ್ತದೆ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಹರಿದ್ವಾರ ಹಾಗೂ ದಿಲ್ಲಿಯಲ್ಲಿ ನಡೆದ ಧರ್ಮಸಂಸತ್ ಸಮಾವೇಶಗಳಲ್ಲಿ ಭಾಷಣಕಾರರು ಮುಸ್ಲಿಮರ ವಿರುದ್ಧ ದ್ವೇಷ ಕಾರಿದ್ದರು ಹಾಗೂ ಅವರ ಹತ್ಯೆಗೆ ಕರೆ ನೀಡಿದ್ದಾರೆಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲು ಭಾಷಣಗಳ ಸಾಲುಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಧರ್ಮಸಂಸತ್ ಸಭೆಯಲ್ಲಿ ಭಾಷಣಕಾರರೊಬ್ಬರು ‘‘ ಮುಸ್ಲಿಂ ಜನಸಂಖ್ಯೆಯನ್ನು ಮುಗಿಸಿಬಿಡಬೇಕೆಂದು ನೀವಂದುಕೊಂಡಿದ್ದರೆ, ನಾವು ಅವರ ಹತ್ಯೆಗೆ ನಾವು ಸಿದ್ಧರಿದ್ದೇವೆ. ನಮ್ಮಲ್ಲಿ 100 ಮಂದಿ ಸೈನಿಕರಾಗಲು ಸಿದ್ಧವಿದ್ದಲ್ಲಿ, ನಾವು ಅವರಲ್ಲಿ 20 ಲಕ್ಷ ಮಂದಿಯನ್ನು ಹತ್ಯೆಗೈಯಬಹುದು. ಆನಂತರ ನಾವು ಜಯಶಾಲಿಗಳಾಗಲಿದ್ದೇವೆ’ ಎಂದು ಹೇಳಿರುವ ಭಾಷಣದ ಸಾಲುಗಳನ್ನು ಅರ್ಜಿದಾರರು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.  

ಇನ್ನೋರ್ವ ಭಾಷಣಕಾರ ‘‘ ಒಂದೋ ನೀವು ಸಾಯಲು ಸಿದ್ಧರಾಗಿರಿ ಅಥವಾ ಕೊಲ್ಲಲು ಸಿದ್ಧರಾಗಿರಿ. ಮ್ಯಾನ್ಮಾರ್ನಂತೆ, ನಮ್ಮ ಪೊಲೀಸರು ನಮ್ಮ ರಾಜಕಾರಣಿಗಳು, ನಮ್ಮ ಸೇನೆ ಹಾಗೂ ಪ್ರತಿಯೊಬ್ಬ ಹಿಂದೂ ಶಸ್ತ್ರಾಸ್ತ್ರಗಳನ್ನು ಎತ್ತಿಕೊಳ್ಳಬೇಕು ಹಾಗೂ ಜನಾಂಗೀಯ ಪರಿಶುದ್ಧಿಯನ್ನು ಸಂಘಟಿಸಬೇಕು ಎಂದು ಹೇಳಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.  

ಈ ದ್ವೇಷಭಾಷಣಗಳು ಘನಘೋರವಾದ ಸಾಂವಿಧಾನಿಕ ಉಲ್ಲಂಘನೆಯಾಗಿದೆ ಹಾಗೂ ಪ್ರಾಯಶಃ ಸ್ವಾತಂತ್ರಾನಂತರ ಭಾರತದಲ್ಲಿ ಹಿಂದೆಂದೂ ಬಹಿರಂಗವಾಗಿ ಇಂತಹ ಕೀಳು ಮಟ್ಟದ ಭಾಷಣವನ್ನು ಮಾಡಿರಲಿಕ್ಕಿಲ್ಲವೆಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ದ್ವೇಷಭಾಷಣದ ಪ್ರಕರಣಗಳಿಗೆ ಸಂಬಂಧಿಸಿ ಕನಿಷ್ಠ ಎರಡು ಎಫ್ಐಆರ್ಗಳು ದಾಖಲಾಗಿದ್ದರೂ ಈತನಕ ಯಾರನ್ನೂ ಬಂಧಿಸಲಾಗಿಲ್ಲವೆಂದು ಅರ್ಜಿದಾರರು ನ್ಯಾಯಾಲಯದ ಗಮನಸೆಳೆದಿದ್ದಾರೆ. ಇದಕ್ಕೂ ಮೊದಲು ಜನವರಿ ಹತ್ತರಂದು ಹರಿದ್ವಾರದ ದ್ವೇಷಭಾಷಣದ ಪ್ರಕರಣಕ್ಕೆ ಸಂಬಂಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ವರದಿಯ ಆಲಿಕೆ ನಡೆಸಲು ಕೂಡಾ ಸುಪ್ರೀಂಕೋರ್ಟ್ ಒಪ್ಪಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News