ಟೆಕ್ಸಾಸ್: ಹಲವರನ್ನು ಒತ್ತೆ ಸೆರೆಯಲ್ಲಿಟ್ಟಿದ್ದ ದುಷ್ಕರ್ಮಿಯ ಹತ್ಯೆ; ಎಲ್ಲ ಒತ್ತೆಯಾಳುಗಳ ಬಿಡುಗಡೆ

Update: 2022-01-16 05:45 GMT
photo: ndtv.com

ಕಾಲಿವಿಲ್ಲೆ: ಟೆಕ್ಸಾಸ್ ನಲ್ಲಿರುವ  ಸಿನಗಾಗ್‌ನಲ್ಲಿ ಗಂಟೆಗಳ ಕಾಲ ಒತ್ತೆ ಸೆರೆಯಲ್ಲಿದ್ದ ಎಲ್ಲಾ ಒತ್ತೆಯಾಳುಗಳನ್ನು ಶನಿವಾರ ತಡರಾತ್ರಿ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ. ಶಿಕ್ಷೆಗೊಳಗಾದ ಪಾಕಿಸ್ತಾನದ ಭಯೋತ್ಪಾದಕಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ದುಷ್ಕರ್ಮಿಯೊಬ್ಬ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದ ಎಂದು ರಾಜ್ಯ ಗವರ್ನರ್ ಹೇಳಿದ್ದಾರೆ.

ಸುಮಾರು 10 ಗಂಟೆಗಳ ಬಿಕ್ಕಟ್ಟಿನ ಬಳಿಕ  ರಾತ್ರಿ 9:30 ಕ್ಕೆ "ಎಲ್ಲಾ ಒತ್ತೆಯಾಳುಗಳು ಜೀವಂತವಾಗಿ ಮತ್ತು ಸುರಕ್ಷಿತವಾಗಿದ್ದಾರೆ" ಎಂದು ಗವರ್ನರ್ ಗ್ರೆಗ್ ಅಬಾಟ್ ಟ್ವೀಟ್ ಮಾಡಿದ್ದಾರೆ.

ಸಿನಗಾಗ್‌ನಲ್ಲಿ ಒತ್ತೆಯಾಳುಗಳನ್ನು ತನ್ನ ವಶಕ್ಕೆ ಪಡೆದಿದ್ದ  ಒಬ್ಬ ಶಸ್ತ್ರಸಜ್ಜಿತ ವ್ಯಕ್ತಿ ಮೃತನಾಗಿದ್ದಾನೆ ಎಂದು ಬಂಧಿತರನ್ನು ರಕ್ಷಿಸಿದ ನಂತರ ಪೊಲೀಸ್ ಮುಖ್ಯಸ್ಥರು ಹೇಳಿದರು.

ಅಬಾಟ್ ಘೋಷಣೆ ಮಾಡುವ ಮುನ್ನವೇ ಸಿನಗಾಗ್‌ನಲ್ಲಿ ಭಾರೀ ಸ್ಫೋಟ ಹಾಗೂ  ಗುಂಡಿನ ದಾಳಿಯ ದೃಶ್ಯವನ್ನು  ಪತ್ರಕರ್ತರು  ವರದಿ ಮಾಡಿದ್ದರು. ಕೆಲವು ಗಂಟೆಗಳ ಮೊದಲು  ಒಬ್ಬ ಒತ್ತೆಯಾಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು. ಒಟ್ಟಾರೆಯಾಗಿ ಎಷ್ಟು ಮಂದಿಯನ್ನು ಒತ್ತೆಯಾಳಾಗಿ ತೆಗೆದುಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾಧಿಕಾರಿಯ ಕೊಲೆಗೆ ಯತ್ನಿಸಿದ ಪಾಕ್ ನ ಮಾಜಿ ವಿಜ್ಞಾನಿ ಆಫಿಯಾ ಸಿದ್ದಿಕಿಗೆ 2010ರಲ್ಲಿ ನ್ಯೂಯಾರ್ಕ್ ನ್ಯಾಯಾಲಯ 86 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆಕೆಯನ್ನು ಪ್ರಸ್ತುತ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಫೆಡರಲ್ ಮೆಡಿಕಲ್ ಸೆಂಟರ್ (ಎಫ್‌ಎಂಸಿ) ಜೈಲಿನಲ್ಲಿ ಇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News