ಅಶಿಕ್ಷಿತ ಮತ್ತು ಸುಶಿಕ್ಷಿತರ ಬಿಕ್ಕಟ್ಟುಗಳು

Update: 2022-01-16 06:42 GMT

ಲಂಡನ್‌ನಲ್ಲಿರುವ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಪ್ರಕಟಿಸಿರುವ ಸಂಶೋಧನೆಯಲ್ಲಿ ಕಡಿಮೆ ಬುದ್ಧಿಮತ್ತೆಯುಳ್ಳವರು ದುರಹಂಕಾರಿಗಳೂ ಮತ್ತು ಹಿಂಸಾತ್ಮಕ ಪ್ರವೃತ್ತಿಯಲ್ಲಿ ತೊಡಗುವರು ಎಂದು ತಿಳಿಸಿದೆ. ತಾವು ಕೈಗೊಂಡ ಐದು ವರ್ಷಗಳ ಸಂಶೋಧನಾ ಅವಧಿಯಲ್ಲಿ ನ್ಯಾಷನಲ್ ಅಡಲ್ಟ್ ರೀಡಿಂಗ್ ಟೆಸ್ಟ್ ಮಾಡಿ ಪ್ರಕಟಿಸಿರುವ ಈ ನಿಯತಕಾಲಿಕದಲ್ಲಿ ವಯಸ್ಕರು ಏಕೆ ಹಿಂಸಾತ್ಮಕವಾಗಿರುತ್ತಾರೆ, ತಮ್ಮ ಕುಟುಂಬ ಮತ್ತು ಸಾಮಾಜಿಕ ಪರಿಸರದಲ್ಲಿ ಹೇಗೆ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಾರೆ ಎಂಬುದನ್ನು ಬಗೆಬಗೆಯಾಗಿ ವರ್ಣಿಸಿದ್ದಾರೆ.

ಹೌದು, ಅದರಲ್ಲಿ ಏನೂ ಆಶ್ಚರ್ಯವಿಲ್ಲ. ಮಕ್ಕಳೂ ಕೂಡಾ ತಮಗೆ ಸಮರ್ಪಕ ಪದಗಳಿಂದ ತಮ್ಮ ಭಾವನೆಗಳನ್ನು ಮತ್ತು ಅನಿಸಿಕೆಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯವಿರದ ಕಾರಣದಿಂದ ಕೂಗುತ್ತಾರೆ, ಅಳುತ್ತಾರೆ, ಕಿರುಚುತ್ತಾರೆ; ಹೀಗೆ ತಮ್ಮ ಧ್ವನಿ ಮತ್ತು ದೇಹವನ್ನು ಉಪಯೋಗಿಸಿಕೊಂಡು ತಮ್ಮ ಬೇಸರವನ್ನೋ, ಅಸಮ್ಮತಿಯನ್ನೋ ವ್ಯಕ್ತಪಡಿಸುತ್ತಾರೆ. ಅದಕ್ಕಾಗಿ ಶಿಶುವೈದ್ಯರು ಅಥವಾ ಮನೋವೈದ್ಯರು ಸಲಹೆ ನೀಡುವುದೇನೆಂದರೆ, ಮಗುವು ಉಗ್ರವಾಗಿಯೋ, ವ್ಯಗ್ರವಾಗಿಯೋ ವರ್ತಿಸುವಾಗ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವ ಬದಲು ಅದು ಏನನ್ನು ಹೇಳಲು ಪ್ರಯತ್ನಿಸುತ್ತಿದೆ ಎಂಬುದನ್ನು ಗುರುತಿಸಿ, ಅದರ ಆ ವರ್ತನೆಗೆ ಕಾರಣವೇನೆಂದು ತಿಳಿಯಿರಿ. ಅದರ ವರ್ತನೆಗೆ ಅಥವಾ ಕ್ರಿಯೆಗೆ ಪ್ರತಿಕ್ರಿಯೆ ನೀಡುವ ಬದಲು ಅದರ ಸಮಸ್ಯೆ ಅಥವಾ ಅದಕ್ಕೆ ಬಾಧಿಸುತ್ತಿರುವ ವಿಷಯದ ಬಗ್ಗೆ ಮಾತಾಡಿ, ಸಮಾಧಾನಗೊಳಿಸಿ; ಎಂದು ಹೇಳುತ್ತಾರೆ. ಕ್ಷೋಭೆಗೊಂಡಿರುವ ಅದರ ಕ್ರಿಯೆಗೆ ಪ್ರತಿಕ್ರಿಯೆಯು ಅಷ್ಟೇ ಕ್ಷೋಭೆಯಿಂದ ಕೂಡಿರುತ್ತದೆ. ಅದರ ಬದಲಾಗಿ ಸ್ಪಂದಿಸಿ ಎಂದು ಸಲಹೆ ನೀಡುವರು.

ಪದ ಸಂಪತ್ತಿನ ಕೊರತೆ, ವಾಕ್ಯ ರಚನೆಗಳಲ್ಲಿ ತೊಡಕು, ಪೂರ್ವಧ್ಯಯನ, ಪೂರಕ ಆಕರಗಳ ಕೊರತೆ; ಇವುಗಳೆಲ್ಲದರ ಜೊತೆಗೆ ಬಾಲ್ಯದಿಂದ ಕಡೆಗಣಿಸಲ್ಪಟ್ಟಿರುವ ಮನಸ್ಥಿತಿಗಳು, ಮಾನಸಿಕ ಸಮಸ್ಯೆಗಳು, ಸಹವಾಸದ ಸೆಳೆತ, ಸಂಘ ದೋಷಗಳೆಲ್ಲವೂ ಸೇರಿ ಹಟಮಾರಿ ಮಕ್ಕಳಂತೆಯೋ, ಚಂಡಿ ಹಿಡಿವ ಹದಿಹರೆಯವರಂತೆಯೋ, ಅಳತೆ ಮೀರಿದ ಮಾನಸಿಕ ಅಸ್ವಸ್ಥರಂತೆಯೋ; ಒಟ್ಟಾರೆ ಅನಿಯಂತ್ರಿತವಾಗಿ ವರ್ತಿಸುವ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರ ಸಾಮಾಜಿಕ ವಲಯಗಳಲ್ಲಿ ಕಾಣುತ್ತಿರುತ್ತೇವೆ. ಅವರಿಗೆ ಪ್ರತಿಕ್ರಿಯೆ ನೀಡುವಾಗ ಶಿಶುವೈದ್ಯರ ಸಲಹೆಯನ್ನು ನೆನಪಿಸಿಕೊಳ್ಳಬೇಕಾಗಿರುವುದು ಅಗತ್ಯ.

ಅತ್ಯಂತ ಕಡಿಮೆ ಬುದ್ಧಿಮತ್ತೆಯುಳ್ಳವರಾಗಿದ್ದು, ಸುಶಿಕ್ಷಿತರಲ್ಲದವರು, ಕೊರತೆ ಮತ್ತು ದಾರಿದ್ರ್ಯಗಳಿಂದ ಬಳಲುತ್ತಿರುವವರು ತಮ್ಮ ಅಭಿವ್ಯಕ್ತಗೊಳಿಸುವ ಭಾವನೆಯಲ್ಲಿಯೋ, ವಿಚಾರಗಳಲ್ಲಿಯೋ, ಪದಗಳಲ್ಲಿಯೋ, ಕಾರ್ಯಗಳಲ್ಲಿಯೋ ಅವರು ಹಿಂಸಾತ್ಮಕವಾಗಿ ಅಥವಾ ಅತಾರ್ಕಿಕವಾಗಿ ತಮ್ಮನ್ನು ಅಭಿವ್ಯಕ್ತಗೊಳಿಸಿಕೊಳ್ಳುವಾಗ ಕಲಿತವರು, ಅರಿವುಳ್ಳವರು ಪ್ರತಿಕ್ರಿಯಿಸುವಾಗ ಹೆಚ್ಚು ಪ್ರಜ್ಞೆಯಿಂದಲೂ, ಸಹಾನುಭೂತಿಯಿಂದಲೂ ಮತ್ತು ಅವರಿಗೆ ಅಹುದಹುದೆನಿಸುವಂತೆ ಬಹಳ ತಾಳ್ಮೆಯಿಂದ ಸ್ಪಂದಿಸಬೇಕು. ರೋಗಿಗೆ ಶಶ್ರೂಷೆ ಮಾಡುವ ದಾದಿಯಂತೆ, ಮನೋರೋಗಿಯನ್ನು ಉಪಚರಿಸುವ ವೈದ್ಯನಂತೆ, ಹಟಮಾರಿ ಮಗುವನ್ನು ಅರಿಯಲು ಯತ್ನಿಸುವ ತಾಯಿಯಂತೆ.

ಹೀಗೆಂದಾಗ, ‘‘ಹೋಗಿ ಸಾರ್, ದೊಡ್ಡ ದೊಡ್ಡ ಸುಶಿಕ್ಷಿತರು, ಲೇಖಕರು, ಪತ್ರಕರ್ತರು, ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಬಹಳಷ್ಟು ಸಾಧನೆ ಮಾಡಿದವರೆಲ್ಲಾ ಹಿಂಸೆಯನ್ನು ಪ್ರಚೋದಿಸುವುದು, ಅಂತಹವನ್ನು ಸಮರ್ಥಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು, ಭಾಷಣಗಳನ್ನು ಮಾಡುವುದು; ಎಲ್ಲಾ ಮಾಡುತ್ತಾರೆ. ಇವರು ಸುಶಿಕ್ಷಿತರಲ್ಲವೇ? ಅವರಿಗೆ ಪದಸಂಪತ್ತಿಲ್ಲವೇ? ಅವರಿಗೆ ವಾಕ್ಯರಚನೆ ಮಾಡಲು ಬರುವುದಿಲ್ಲವೇ?’’ ಎಂದು ನೀವು ಕಾಣುತ್ತಿರುವುದನ್ನು ಕೇಳಿ, ಪರವಾಗಿಲ್ಲ. ಇವರಿಗೆ ಬಾಲ್ಯದಿಂದಲೇ ತಮ್ಮ ಕಲಿಕೆಯ ಉದ್ದೇಶ ತಾವು ಸುಖವಾಗಿರಲು ಅನ್ನುವ ಬಾಲಪಾಠ ಅವರ ಕುಟುಂಬದವರು, ಶಿಕ್ಷಕರು ಮತ್ತಿತರ ಹಿರಿಯರಿಂದ ಆಗಿರುತ್ತದೆ. ತಾವು ಸುಖವಾಗಿರಲು ಮಾತ್ರ ತಮ್ಮ ಎಲ್ಲಾ ವಿದ್ಯೆಯನ್ನೂ ಬಳಸಿಕೊಳ್ಳುತ್ತಾರೆ. ಹಾಗಾಗಿ ಯಾವ ವ್ಯಕ್ತಿಯಿಂದ, ಯಾವ ಸಿದ್ಧಾಂತದಿಂದ, ಯಾವ ಪಕ್ಷದಿಂದ ತನಗೆ ಅನುಕೂಲವಾಗುತ್ತದೆ ಎಂದು ಅರಿವಿರುತ್ತದೆಯೋ ಅದಕ್ಕೆ ತಮಗೇ ತಿಳಿಯದಂತೆ ಬದ್ಧವಾಗಿರುತ್ತಾರೆ. ಅವರ ಕುಟುಂಬದವರು, ಕಲಿಸಿದ ಗುರುಗಳು, ಅವರ ಒಟ್ಟಾರೆ ಪರಿಸರದ ಹಿರಿಯರೆಲ್ಲಾ ಮಾಡಿರುವ ಎಡವಟ್ಟಿನ ಕೆಲಸವೇ ಇವರು ತಂದೊಡ್ಡುವ ಬಿಕ್ಕಟ್ಟು. ಇದನ್ನೇ ಇವರು ಶ್ರೇಷ್ಠ ಮತ್ತು ಸರಿ ಎಂದು ತಿಳಿದುಕೊಂಡಿರುವ ಕಾರಣದಿಂದ ತಮ್ಮ ಮನೆ ಮಕ್ಕಳಿಗೂ, ತಮ್ಮ ಸಹವಾಸದ ಕಿರಿಯರಿಗೂ ಅಂತೆಯೇ ಮಾಡುತ್ತಾರೆ. ಈ ಡ್ಯಾಮೇಜ್ ಕಂಟ್ರೋಲ್ ಮಾಡುವ ದಿಸೆಯಲ್ಲಿ ನಾವಾದರೂ ನಮ್ಮಿಂದ ಅದಾಗದಿರುವಂತೆ ಎಚ್ಚರಗೊಳ್ಳುವುದೇ ಸಾಮಾಜಿಕ ಮನೋವಿಕಾಸ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News

ಜಗದಗಲ
ಜಗ ದಗಲ