ಉಪ್ಪಿನಂಗಡಿ : ಕಾರ್ಮಿಕರನ್ನು ಬೆದರಿಸಿ ಹಣ ದೋಚಿದ ದುಷ್ಕರ್ಮಿಗಳು

Update: 2022-01-17 05:58 GMT

ಉಪ್ಪಿನಂಗಡಿ, ಜ.16: ನೆಲ್ಯಾಡಿ ಸಮೀಪದ ಆರ್ಲ ಎಂಬಲ್ಲಿ ವಾಸ್ತವ್ಯವಿರುವ ಆಂಧ್ರ ಮೂಲದ ಕಾರ್ಮಿಕರನ್ನು ಬೆದರಿಸಿ ನಗದು ಹಾಗೂ ಮೊಬೈಲ್ ಫೋನನ್ನು ದೋಚಿದ ಘಟನೆ ಶುಕ್ರವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಇದೇ ವೇಳೆ ಗಾಂಧಿ ಪಾರ್ಕ್ ಬಳಿ ನಿಲ್ಲಿಸಿದ್ದ ಬೈಕೊಂದನ್ನೂ ಕದ್ದೊಯ್ದಿದ್ದು, ಆ ಬೈಕ್ ಶಿರಾಡಿಯಲ್ಲಿ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ಪ್ರಕರಣಗಳ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ ವಿವರ: ಆಂಧ್ರ ಪ್ರದೇಶದ ಕೋಮ್ಮವರಂ ಗ್ರಾಮದ ಬತ್ತಲು ವೆಂಕಟೇಶ್ವರಲು(30) ಎಂಬವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ತಾನು ಹೆದ್ದಾರಿ ಅಗಲೀಕರಣದ ಸಂಬಂಧ ಒಳಚರಂಡಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜ.13ರ ರಾತ್ರಿ ತಾನು ವಾಸ್ತವ್ಯ ವಿದ್ದ ಬಾಡಿಗೆ ಮನೆಯ ಬಳಿಗೆ ಬಂದ ಮೂವರು ದರೋಡೆ ಕೋರರ ಪೈಕಿ ಒಬ್ಬಾತ ನನ್ನ ಬೈಕ್ ಬಳಿ ನಿಂತು ಬೈಕ್ ಕೀ ಕೊಡುವಂತೆ ಬೆದರಿಸಿದ್ದಾನೆ. ಇನ್ನೋರ್ವ ಸುತ್ತಿಗೆಯಂತಹ ಆಯುಧ ತೋರಿಸಿ ತಾನು ಧರಿಸಿದ್ದ ಅಂಗಿಯ ಕಿಸೆಯಲ್ಲಿದ್ದ 200 ರೂ. ಕಿತ್ತುಕೊಂಡಿದ್ದಲ್ಲದೆ, ನಮ್ಮ ರೂಮ್‌ಗೆ ನುಗ್ಗಿ ಒಂದು ಮೊಬೈಲ್ ಫೋನ್ ಮತ್ತು ನನ್ನ ಜೊತೆಗೆ ಕೆಲಸ ಮಾಡುವವರ ಬ್ಯಾಗ್‌ಗಳಲಿದ್ದ ನಗದು ದೋಚಿದ್ದಾನೆ. ದುಷ್ಕರ್ಮಿಗಳು ಈ ರೀತಿ ಸುಮಾರು 1.30 ಲಕ್ಷ ರೂ. ಮೌಲ್ಯದ ನಗದು ಮತ್ತು ಸೊತ್ತು ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ನಿವಾಸಿ ಮುಹಮ್ಮದ್ ಎಂಬವರ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ನಿಲ್ಲಿಸಿದ್ದ ಬೈಕೊಂದು ಕಳವಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಾಡಿ ಬಳಿ ರಸ್ತೆ ಅಪಘಾತ: ದರೋಡೆಕೋರ ಗಂಭೀರ

ಈ ನಡುವೆ ಜ.13ರ ತಡರಾತ್ರಿ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಬೈಕೊಂದು ಪತ್ತೆಯಾಗಿದೆ. ಬೈಕಿಗೆ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದನು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಅಪಘಾತ ಕ್ಕೀಡಾದ ಬೈಕ್ ಸಂಖ್ಯೆಯ ಆಧಾರದಲ್ಲಿ ಅದರ ಮಾಲಕನನ್ನು ಪೊಲೀಸರು ಪತ್ತೆಹಚ್ಚಿ ಕರೆ ಮಾಡಿದಾಗ ಅದು ಅಡೆಕ್ಕಲ್ ನಿವಾಸಿ ಮುಹಮ್ಮದ್ ಎಂಬವರದ್ದೆಂದು ತಿಳಿದುಬಂತು. ತಾನು ಬೈಕನ್ನು ಉಪ್ಪಿನಂಗಡಿಯಲ್ಲಿ ನಿಲ್ಲಿಸಿ ಕಾರ್ಯ ನಿಮಿತ್ತ ಹೊರ ಜಿಲ್ಲೆಯಲ್ಲಿರುವುದಾಗಿ ಮುಹಮ್ಮದ್ ತಿಳಿಸಿದಾಗಲೇ ಅವರ ಬೈಕ್ ಕಳವಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News