ಕೇಂದ್ರ ಸರಕಾರದ ಮನುವಾದಿ ಬಣ್ಣ ಬಯಲು: ಅಶೋಕ್ ಕುಮಾರ್

Update: 2022-01-17 12:33 GMT

ಉಡುಪಿ, ಜ.17: ಗಣರಾಜ್ಯೋತ್ಸವ ಪರೇಡಿನಲ್ಲಿ ವಿಶ್ವಮಾನವತೆಯ ಪ್ರತಿಪಾದಕ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ವನ್ನು ತಿರಸ್ಕರಿಸುವ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಮನುವಾದಿ ಬಣ್ಣ ಬಯಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಟೀಕಿಸಿದ್ದಾರೆ.

ನಾರಾಯಣ ಗುರುಗಳು ಪ್ರತಿಪಾದಿಸಿಕೊಂಡು ಬಂದಿದ್ದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವಕುಟುಂಬ ಚಿಂತನೆಯ ಸಿದ್ಧಾಂತ ವರ್ತಮಾನದ ಆದ್ಯತೆಯಾಗಿದೆ. ಆದರೆ ಆಳುವ ಸರಕಾರ ಅವರ ಸ್ತಬ್ದಚಿತ್ರವನ್ನು ತಿರಸ್ಕರಿಸುವ ಮೂಲಕ ತಾನು ಈ ಸಿದ್ಧಾಂತದ ವಿರೋಧವಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಿದೆ. ಅಲ್ಲದೆ ಜನರ ನಂಬಿಕೆಗೆ ದ್ರೋಹ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ದೇಶಾದ್ಯಂತ ನಡೆದ ದಲಿತರು, ಹಿಂದುಳಿದ ವರು, ಮುಗ್ಧ ಮಹಿಳೆಯರು, ಬುದ್ದಿ ಜೀವಿಗಳು ಹಾಗೂ ಸಾಹಿತಿಗಳ ಮೇಲೆ ನಡೆದ ದಾಳಿಗಳು, ಅವರ ಮೇಲೆ ಹೊರೆಸಿದ ದೇಶದ್ರೋಹದ ಪ್ರಕರಣಗಳು ಈ ಸರಕಾರದ ಮೂಲಭೂತವಾದಿ ಸಿದ್ಧಾಂತಕ್ಕೆ ಕನ್ನಡಿ ಹಿಡಿದಿವೆ. ಅಂತವರಿಗೆ ಸಹಜವಾಗಿಯೇ ನಾರಾಯಣಗುರುಗಳ ತತ್ವ ಸಿದ್ದಾಂತ ಕಹಿಯಾಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಆ ನೆಲೆಯಲ್ಲಿ ಪ್ರಜಾಪ್ರಭುತ್ವದ ಮೇರುರಥ ದಿಂದ ನಾರಾಯಣ ಗುರುಗಳನ್ನು ಹೊರಹಾಕಲಾಗಿದೆ ಎಂದು ಅವರು ಪ್ರಕಟಣೆ ಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News