ವಿದ್ಯಾರ್ಥಿನಿಯರು ಕಿರುಕುಳವನ್ನು ವೈಜ್ಞಾನಿಕವಾಗಿ ಎದುರಿಸುವುದು ಅಗತ್ಯ: ಶೋಭಲತಾ

Update: 2022-01-17 12:36 GMT

ಉಡುಪಿ, ಜ.17: ವಿದ್ಯಾರ್ಥಿನಿಯರು ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಒಳಗಾದಾಗ, ಧೈರ್ಯಗೆಡದೆ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ಅದನ್ನು ಸಾಮಾನ್ಯ ರೀತಿಯಲ್ಲಿ ಎದುರಿಸದೆ ಚಾಕಚಕ್ಯತೆಯಿಂದ ವೈಜ್ಞಾನಿಕವಾಗಿ ಎದುರಿಸಿದಾಗ ಹೆಣ್ಣು ತಾನು ಯಾವುದೇ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ಸಾಧ್ಯವಾಗುತ್ತದೆ ಎಂದು ಸ್ವರಕ್ಷಾ ಫಾರ್ ವುಮೆನ್ ಉಪಾಧ್ಯಕ್ಷೆ ಶೋಭಲತಾ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಮತ್ತು ರೇಂಜರ್ಸ್‌ ಘಟಕ ಹಾಗೂ ಪರ್ಕಳ ಲಯನ್ಸ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನದ ಪ್ರಯುಕ್ತ ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾದ ಹೆಣ್ಣುಮಕ್ಕಳ ಸ್ವರಕ್ಷಣೆಯ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ಮಾತನಾಡಿ, ಯುವಜನತೆಯು ವಿವೇಕಾನಂದರ ಸ್ಫೂರ್ತಿವಾಣಿಯನ್ನು ಮನನ ಮಾಡಿಕೊಳ್ಳುವುದರ ಮುಖಾಂತರ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ., ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ ಕುಂದರ್, ಖಜಾಂಚಿ ಜಯರಾಮ್ ಜಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಇಂಚರಾ ಸ್ವಾಗತಿಸಿದರು. ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಆಶಾ ವಂದಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿ ಕಾರಿ ಡಾ.ರಾಜೇಂದ್ರ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಕಾರ್ತಿಕ್ ಎಸ್.ಕಟೀಲ್ ಪ್ರಾತ್ಯಕ್ಷಿಕೆಯ ಮುಖಾಂತರ ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News