ಗಣರಾಜ್ಯೋತ್ಸವ ದಿನದ ಪರೇಡ್ : ಅತ್ಯಂತ ಭವ್ಯ ಫ್ಲೈಪಾಸ್‌ ನಲ್ಲಿ ರಫೇಲ್ ಸೇರಿದಂತೆ 75 ವಿಮಾನಗಳಿಂದ ಸಾಮರ್ಥ್ಯ ಪ್ರದರ್ಶನ

Update: 2022-01-17 17:09 GMT
Photo : PTI

ಹೊಸದಿಲ್ಲಿ,ಜ.16: ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮಾಚರಣೆಗಾಗಿ ರಾಜಪಥ್ ನ ಆಗಸದಲ್ಲಿ ಪ್ರದರ್ಶಿತಗೊಳ್ಳುವ ಈವರೆಗಿನ ಭವ್ಯ ಫ್ಲೈಪಾಸ್ಟ್‌ ನಲ್ಲಿ ರಫೇಲ್ ಸೇರಿದಂತೆ ವಾಯುಪಡೆ, ಸೇನೆ ಮತ್ತು ನೌಕಾಪಡೆಗಳ 75 ವಿಮಾನಗಳು ಪಾಲ್ಗೊಳ್ಳಲಿವೆ.

 ಫ್ಲೈಪಾಸ್ಟ್ ನ ಅಂತ್ಯದಲ್ಲಿ ‘ಅಮೃತ ವಿನ್ಯಾಸ’ ಪ್ರದರ್ಶನಗೊಳ್ಳಲಿದ್ದು,ಇದೇ ಮೊದಲ ಬಾರಿಗೆ 17 ಜಾಗ್ವಾರ್ ಯುದ್ಧವಿಮಾನಗಳು ಸ್ವಾತಂತ್ರದ 75ನೇ ವರ್ಷದ ಸಂಭ್ರಮದ ಅಂಗವಾಗಿ ‘75’ರ ಆಕಾರದಲ್ಲಿ ಹಾರಲಿವೆ ಎಂದು ಸೋಮವಾರ ಆನ್‌ಲೈನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತೀಯ ವಾಯುಪಡೆಯ ಪೂರ್ವ ಏರ್ ಕಮಾಂಡ್‌ನ ಪಿಆರ್‌ಒ ವಿಂಗ್ ಕಮಾಂಡರ್ ಇಂದ್ರನೀಲ್ ನಂದಿ ಅವರು ತಿಳಿಸಿದರು.

ಭಾರತೀಯ ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ರಫೇಲ್ ಯುದ್ಧವಿಮಾನಗಳು ವಿನಾಶ,ಬಾಜ್ ಮತ್ತು ವಿಜಯ ಹೀಗೆ ಮೂರು ಹಾರಾಟ ವಿನ್ಯಾಸಗಳನ್ನು ಪ್ರದರ್ಶಿಸಲಿವೆ. ಐದು ರಫೇಲ್ ವಿಮಾನಗಳು ರಾಜಪಥ್‌ನಲ್ಲಿ ವಿನಾಶ ವಿನ್ಯಾಸ ರಚನೆಗಾಗಿ ಅಂಬಾಲಾ ವಾಯು ನೆಲೆಯಿಂದ ಆಗಸಕ್ಕೇರಲಿದ್ದು, ಇತರ ಎರಡು ವಿನ್ಯಾಸ ರಚನೆಗಳಲ್ಲಿ ತಲಾ ಒಂದು ರಫೇಲ್ ಭಾಗಿಯಾಗಲಿವೆ.

ಭಾರತೀಯ ನೌಕಾಪಡೆಯ ವಿಮಾನ ವಾಹಕ ನೌಕೆ ಯುದ್ಧ ವಿಮಾನಗಳಾದ ಮಿಗ್-29ಕೆ ಮತ್ತು ಕಣ್ಗಾವಲು ವಿಮಾನ ಪಿ-81 ವರುಣಾ ರಚನೆಯಲ್ಲಿ ಭಾಗಿಯಾಗಲಿವೆ. ಮೂರು ಪಡೆಗಳ ಒಟ್ಟು 75 ವಿಮಾನಗಳಲ್ಲಿ 28 ಹೆಲಿಕಾಪ್ಟರ್ಗಳು ಇರಲಿವೆ. ಒಂದು ವಿಂಟೇಜ್ ವಿಮಾನ ಡಕೋಟಾ ಸೇರಿದಂತೆ ಸಾರಿಗೆ ವಿಭಾಗದ ಎಂಟು ವಿಮಾನಗಳೂ ಫ್ಲೈಪಾಸ್ಟ್‌ನಲ್ಲಿ  ಭಾಗಿಯಾಗಲಿವೆ. 19 ಜಾಗ್ವಾರ್,ಏಳು ರಫೇಲ್,ಏಳು ಸುಖೋಯಿ,ನಾಲ್ಕು ಮಿಗ್-29 ಮತ್ತು ಎರಡು ಮಿಗ್-29ಕೆ ಸೇರಿದಂತೆ ಒಟ್ಟು 39 ಯುದ್ಧವಿಮಾನಗಳು ಫ್ಲೈಪಾಸ್ಟ್‌ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.

ಪ್ರದರ್ಶನಗೊಳ್ಳಲಿರುವ ಹಲವಾರು ರಚನೆಗಳ ಪೈಕಿ ತಂಗೈಲ್ ಮತ್ತು ಮೇಘನಾ ರಚನೆಗಳು 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನ ಸ್ಮರಣಾರ್ಥವಾಗಿರಲಿವೆ.
ಮೇಘನಾ ವಿನ್ಯಾಸ ಒಂದು ಚಿನೂಕ್ ಮತ್ತು ನಾಲ್ಕು ಎಂಐ-4 ಹೆಲಿಕಾಪ್ಟರ್ಗಳನ್ನು ಮತ್ತು ತಂಗೈಲ್ ವಿನ್ಯಾಸವು ಒಂದು ಡಕೋಟಾ ಮತ್ತು ಎರಡು ಡಾರ್ನಿಯರ್ 228 ವಿಮಾನಗಳನ್ನು ಒಳಗೊಂಡಿರಲಿವೆ.

ಈ ರಚನೆಗಳು 1971,ಡಿ.11ರಂದು ಆಗಿನ ಪೂರ್ವ ಪಾಕಿಸ್ತಾನದ ತಂಗೈಲ್‌ನಲ್ಲಿ ಭಾರತಿಯ ಸೇನೆಯ ಸೆಕಂಡ್ ಪ್ಯಾರಾಚೂಟ್ ಬಟಾಲಿಯನ್‌ನ ಯಶಸ್ವಿ ಏರ್ಡ್ರಾಪ್ ಕಾರ್ಯಾಚರಣೆಗಳ ಸ್ಮರಣಾರ್ಥವಾಗಿರಲಿವೆ. ಪಾಕ್ ಪಡೆಗಳು ಢಾಕಾದತ್ತ ಪರಾರಿಯಾಗುವುದನ್ನು ತಡೆಯಲು ಈ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News