ಮಂಗಳೂರು: ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶಿಸಲು ಕಾಂಗ್ರೆಸ್ ಮನವಿ

Update: 2022-01-17 17:14 GMT

ಮಂಗಳೂರು, ಜ.17: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಮಾಜ ಸುಧಾರಕ, ನಾರಾಯಣ ಗುರು ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ಖಂಡನೀಯ. ಕೇಂದ್ರ ಸರಕಾರ ಸ್ತಬ್ಧಚಿತ್ರ ಪ್ರದರ್ಶಿಸಲು ಅವಕಾಶ ನೀಡಲು ಕ್ರಮ ಜರಗಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ದ.ಕ.ಜಿಲ್ಲಾಧಿಕಾರಿಯ ಮೂಲಕ ರಾಷ್ಟ್ರಪತಿಗೆ ಸೋಮವಾರ ಮನವಿ ಸಲ್ಲಿಸಿದೆ.

ನಾರಾಯಣ ಗುರು ಸ್ತಬ್ಧಚಿತ್ರಕ್ಕೆ ಸಂಬಂಧಿಸಿ ಕೇರಳ ಸರಕಾರ ಪ್ರಸ್ತಾವಿಸಿದ್ದನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ಸರಿಯಲ್ಲ. ನಾರಾಯಣ ಗುರು ಜಾತಿ ಧರ್ಮ ಮೀರಿದ ಸಮಾಜ ಸುಧಾರಕರು. ಕೇರಳ, ತಮಿಳುನಾಡು, ಕರ್ನಾಟಕ ರಾಜ್ಯವಲ್ಲದೆ ದೇಶದ ನಾನಾ ಕಡೆಗಳಲ್ಲಿ ನಾರಾಯಣ ಗುರು ಅವರನ್ನು ಪೂಜಿಸುವ ದೊಡ್ಡ ಜನಸಮೂಹವಿದೆ. ಕೇಂದ್ರ ಸರಕಾರ ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶಿಸಲು ಅವಕಾಶ ನಿರಾಕರಿಸುವ ಮೂಲಕ ಕೋಟ್ಯಂತರ ಭಕ್ತರಿಗೆ ನೋವನ್ನುಂಟು ಮಾಡಿದೆ.
ಅಸಮಾನತೆಯನ್ನು ಹೋಗಲಾಡಿಸಲು ತಮ್ಮದೇ ಆದ ವಿಶಿಷ್ಟ ಕ್ರಮಗಳ ಮೂಲಕ ಹೋರಾಟ ನಡೆಸಿ ಸಮಾಜದ ಎಲ್ಲ ಸ್ತರದ ಜನರಿಗೂ ಗೌರವ, ಘನತೆ ತಂದುಕೊಟ್ಟ ನಾರಾಯಣ ಗುರು ಅವರು ಹರಿದು ಹಂಚಿಹೋಗಬಹುದಾಗಿದ್ದ ಹಿಂದೂ ಧರ್ಮವನ್ನು ಸಂರಕ್ಷಿಸಿದ್ದರು. ಹಾಗಾಗಿ ಕೇಂದ್ರ ಸರಕಾರವು ತನ್ನ ಕ್ರಮವನ್ನು ಮರುಪರಿಶೀಲಿಸಿ ನಾರಾಯಣ ಗುರು ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಪರೇಡಿನಲ್ಲಿ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ವಿಧಾನ ಪರಿಷತ್ ಸದಸ್ಯ, ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗದಲ್ಲಿ ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್. ಲೋಬೊ, ಪಕ್ಷದ ಮುಖಂಡರಾದ ಮಿಥುನ್ ರೈ, ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್‌ದಾಸ್, ಪ್ರಕಾಶ್ ಸಾಲ್ಯಾನ್, ಡಾ.ರಾಜಾರಾಮ್, ಡಾ. ಶೇಖರ್ ಪೂಜಾರಿ, ಉಮ್ಮರ್ ಫಾರೂಕ್, ಪ್ರತಿಭಾ ಕುಳಾಯಿ, ಟಿ.ಕೆ.ಸುಧೀರ್, ನೀರಜ್ ಚಂದ್ರಪಾಲ್, ಸುರೇಶ್ ವಿ. ಪೂಜಾರಿ ಕುಳಾಯಿ, ರವಿರಾಜ್ ದಂಬೆಲ್, ರಮಾನಂದ ಪೂಜಾರಿ, ದೀಪಕ್ ಪಿಲಾರ್, ಶಾಂತಳಾ ಗಟ್ಟಿ, ಶೋಭಾ ಕೇಶವ್, ಅಲಿಸ್ಟರ್ ಡಿಕುನ್ಹಾ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News