​ಅಫ್ಘಾನಿಸ್ತಾನದಲ್ಲಿ ಭೂಕಂಪ: 26 ಮಂದಿ ಮೃತ್ಯು

Update: 2022-01-18 01:48 GMT
ಫೋಟೊ : twitter.com

ಹೆರಾತ್ (ಅಫ್ಘಾನಿಸ್ತಾನ): ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸೋಮವಾರ ನಡೆದ ಭೀಕರ ಭೂಕಂಪದಲ್ಲಿ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ.

ಪಶ್ಚಿಮ ಪ್ರಾಂತ್ಯ ಬದ್ಘೀಸ್‌ನ ಖದೀಸ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದ ವೇಳೆ ಮನೆಗಳ ಛಾವಣಿಗಳು ಕುಸಿದು ಬಿದ್ದು ಬಹುತೇಕ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬರ್ ಮೊಹ್ಮದ್ ಸರ್ವರಿ ಎಎಫ್‌ಪಿಗೆ ತಿಳಿಸಿದ್ದಾರೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3ರಷ್ಟಿತ್ತು ಎಂದು ಯುಎಸ್ ಜಿಯಲಾಜಿಕಲ್ ಸರ್ವೆ ಹೇಳಿದೆ. "ಭೂಕಂಪದಲ್ಲಿ ಐದು ಮಂದಿ ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 26 ಮಂದಿ ಮೃತಪಟ್ಟಿದ್ದಾರೆ. ಮತ್ತೆ ನಾಲ್ಕು ಮಂದಿ ಗಾಯಗೊಂಡಿದ್ದಾರೆ" ಎಂದು ಅವರು ವಿವರಿಸಿದ್ದಾರೆ.

ಮಖ್ರ್ ಜಿಲ್ಲೆಯಲ್ಲೂ ಭೂಕಂಪದಿಂದ ಹಾನಿ ಸಂಭವಿಸಿದ್ದು, ಸಾವು ನೋವಿನ ವಿವರಗಳು ಇನ್ನೂ ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2015ರಲ್ಲಿ ಪರ್ವತಶ್ರೇಣಿಯಲ್ಲಿ ಕೇಂದ್ರಿತವಾಗಿ ಸಂಭವಿಸಿದ್ದ 7.5 ತೀವ್ರತೆಯ ಭೂಕಂಪದಲ್ಲಿ 280 ಮಂದಿ ಜೀವ ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News