ನಿರಾಶ್ರಿತ ಮಹಿಳೆಯರಿಗೆ ನೆರವಾಗುತ್ತಿರುವ ಕಡಿಮೆ ವೆಚ್ಚದ ವಾಶಿಂಗ್ ಮಶಿನ್

Update: 2022-01-18 06:20 GMT

ಬ್ರಿಟಿಷ್ ಸಂಜಾತ ನವಜೋತ್ ಸಾಹ್ನಿ ರಜೆಯಲ್ಲಿ ಭಾರತಕ್ಕೆ ಬಂದಾಗ, ಇರಾಕ್‌ನಲ್ಲಿರುವ ಮಹಿಳಾ ನಿರಾಶ್ರಿತರು ತನಗೆ ಎಂದೆಂದಿಗೂ ಕೃತಜ್ಞರಾಗಿರುತ್ತಾರೆ ಎಂಬುದಾಗಿ ಎಂದೂ ಯೋಚಿಸಿರಲಿಲ್ಲ. ಅವರು ಆವಿಷ್ಕರಿಸಿದ ವಾಶಿಂಗ್ ಮಶಿನ್‌ನಿಂದ ಇಂದು ಅದು ಸಾಧ್ಯವಾಗಿದೆ.

ಬ್ರಿಟನ್‌ನಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ನವಜೋತ್ ವಾಶಿಂಗ್ ಮಶಿನ್‌ನ ಆವಿಷ್ಕಾರಕ್ಕಾಗಿ ತನ್ನ ಇಂಜಿನಿಯರಿಂಗ್ ಕೌಶಲಗಳನ್ನು ಸಂಪೂರ್ಣವಾಗಿ ಬಳಸಿದರು. ಹೀಗೆ ಮಾಡಬೇಕೆಂದು ಅವರಿಗೆ ಅನಿಸಿದ್ದು ರಜೆಯಲ್ಲಿ ತಮಿಳುನಾಡಿನ ಕುಯಿಲಪಾಳಯಮ್ ಎಂಬ ಗ್ರಾಮದಲ್ಲಿರುವ ಗೃಹಿಣಿ ದಿವ್ಯಾರನ್ನು ಅವರು ಭೇಟಿಯಾದಾಗ.

ಕೈಯಿಂದ ಬಟ್ಟೆ ತೊಳೆಯುತ್ತಿದ್ದುದರಿಂದ ದಿವ್ಯಾ ಬೆನ್ನು ನೋವು ಮತ್ತು ಚರ್ಮದ ಅಲರ್ಜಿಯಿಂದ ಬಳಲುತ್ತಿದ್ದರು. ಅದನ್ನು ನೋಡಿದ ಅವರು ಕಡಿಮೆ ವೆಚ್ಚದ ಕೈಯಿಂದ ಚಲಾಯಿಸುವ ವಾಶಿಂಗ್ ಮಶಿನ್ ಒಂದನ್ನು ನಿರ್ಮಿಸಿದರು. ಈ ವಾಶಿಂಗ್ ಮಶಿನ್‌ಗೆ ವಿದ್ಯುತ್‌ನ ಅಗತ್ಯವಿಲ್ಲ ಹಾಗೂ ಅದು ತುಂಬಾ ಕಡಿಮೆ ನೀರನ್ನು ಬಳಸುತ್ತದೆ. ಅದು ಬಟ್ಟೆಗಳನ್ನು ತೊಳೆಯುವುದು ಮಾತ್ರವಲ್ಲ, ಬಟ್ಟೆಗಳನ್ನು ಶೇ. 70-80ರಷ್ಟು ಒಣಗಿಸುತ್ತದೆ ಕೂಡ.

5,000 ದಿಂದ 6,000 ರೂಪಾಯಿ ಬೆಲೆಯ ಈ ಅದ್ಭುತ ಸಂಶೋಧನೆಯು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ ಹಾಗೂ ಜಗತ್ತಿನಾದ್ಯಂತದ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಪರೋಪಕಾರಿ ಸಂಸ್ಥೆಗಳ ಬೆಂಬಲವನ್ನು ಪಡೆದಿದೆ.

ಅವರು ಮೊದಲ ಯಂತ್ರವನ್ನು 2018 ಆಗಸ್ಟ್ ನಲ್ಲಿ ಹೊರ ತಂದರು. ಅಂದಿನಿಂದ ಈವರೆಗೆ ಅವರು ಇರಾಕ್ ಮತ್ತು ಲೆಬನಾನ್‌ನಲ್ಲಿ ಇಂತಹ 150 ಯಂತ್ರಗಳನ್ನು ವಿತರಿಸಿದ್ದಾರೆ. ಆ ಮೂಲಕ ಅವರು ತನ್ನ ‘ದ ವಾಶಿಂಗ್ ಮಶಿನ್ ಪ್ರಾಜೆಕ್ಟ್’ ಮೂಲಕ ಸುಮಾರು 1,350 ಜನರ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದಾರೆ. ಈ ಯೋಜನೆಯಲ್ಲಿ ಸಂಘಟನೆಗಳು ಅವರಿಂದ ವಾಶಿಂಗ್ ಮಶಿನ್‌ಗಳನ್ನು ಖರೀದಿಸಿ ಅಗತ್ಯವಿದ್ದವರಿಗೆ ಉಚಿತವಾಗಿ ವಿತರಿಸುತ್ತವೆ.

‘‘ನಾನು ರಜೆಯಲ್ಲಿ ಭಾರತಕ್ಕೆ ಬರುವ ಮೊದಲು ಉನ್ನತ ತಂತ್ರಜ್ಞಾನದ ವ್ಯಾಕ್ಯೂಮ್ ತಯಾರಿಕಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಗ್ರಾಮೀಣ ಜೀವನ ಶೈಲಿ ಮತ್ತು ಅದರ ಸಮಸ್ಯೆಗಳನ್ನು ನೋಡಿದ ಬಳಿಕ, ಉಳ್ಳವರಿಗೆ ಅನುಕೂಲ ಮಾಡಿಕೊಡುವ ಉತ್ಪನ್ನಗಳನ್ನು ತಯಾರಿಸಲು ನನ್ನ ಕೌಶಲಗಳನ್ನು ಬಳಸುವುದು ಸರಿಯೆಂದು ನನಗೆ ಕಾಣಲಿಲ್ಲ. ಹಾಗಾಗಿ, ನಾನು ಕೆಲಸವನ್ನು ತೊರೆದೆ ಹಾಗೂ ಸುಮಾರು ಒಂದು ವರ್ಷ ಕೆಲಸ ಮಾಡಿ ಈ ವಾಶಿಂಗ್ ಮಶಿನ್ ತಯಾರಿಸಿದೆ’’ ಎಂದು ‘ದ ಬೆಟರ್ ಇಂಡಿಯ’ ಜೊತೆಗೆ ಮಾತನಾಡಿದ ನವಜೋತ್ ಹೇಳಿದ್ದಾರೆ.

ಸಲಾಡ್ ಸ್ಪಿನ್ನರ್‌ನಂತೆ ವಿನ್ಯಾಸ

ಶುಚಿತ್ವ, ವಿದ್ಯುತ್, ನೀರು ಮತ್ತು ಶಿಕ್ಷಣದವರೆಗೆ ಗ್ರಾಮೀಣ ಜೀವನವನ್ನು ಬಾಧಿಸುವ ಎಲ್ಲ ವಿಷಯಗಳನ್ನು ನವಜೋತ್ ಹತ್ತಿರದಿಂದ ನೋಡಿದವರು. ಈ ಸಮಸ್ಯೆಗಳೊಂದಿಗೆ ಹೊಂದಿಕೊಂಡು ಹೋಗುವ ಬಲವಂತಕ್ಕೆ ಜನರು ಒಳಗಾಗಿರುವುದನ್ನು ನೋಡಿ ಅವರು ಆಶ್ಚರ್ಯಪಟ್ಟರು.

ಅವರ ಮೊದಲ ಆವಿಷ್ಕಾರ ಶುಭ್ರ ಅಡುಗೆ ಸ್ಟೋವ್‌ಗಳು. ಅದು 2017ರಲ್ಲಿ ಹೊರ ಬಂತು. ಅಡುಗೆ ತಯಾರಿಸಲು ಕಟ್ಟಿಗೆಗಾಗಿ ಅರಣ್ಯಕ್ಕೆ ಹೋಗುವ ಮಹಿಳೆಯರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿತ್ತು.

ಬಳಿಕ ಅವರು ತನ್ನ ಗಮನವನ್ನು ಬಟ್ಟೆಗಳನ್ನು ಕೈಯಿಂದ ತೊಳೆಯುವ ವಿಷಯದತ್ತ ಹರಿಸಿದರು.

‘‘ಮಹಿಳೆಯರು ನದಿಯ ದಂಡೆಗಳಲ್ಲಿ ಬಟ್ಟೆಗಳನ್ನು ತೊಳೆಯುವಾಗ ನಗುತ್ತಾ ಹರಟುವುದನ್ನು ನಾವು ನೋಡುತ್ತೇವೆ. ಆದರೆ, ಬಟ್ಟೆ ಒಗೆಯಲು ಬೇಕಾಗುವ ಸಮಯ, ಸಾಮರ್ಥ್ಯ ಮತ್ತು ಶಕ್ತಿಯ ಪ್ರಮಾಣ ನಮ್ಮ ಗಮನಕ್ಕೆ ಬರುವುದಿಲ್ಲ. ನನ್ನ ನೆರೆಯ ದಿವ್ಯಾಗೆ ನೀರಿನಿಂದ ಹರಡುವ ಕಾಯಿಲೆ ಮತ್ತು ಚರ್ಮದ ಅಲರ್ಜಿ ಕಾಡಿತು. ಅಷ್ಟೇ ಅಲ್ಲ, ಬಟ್ಟೆ ಒಗೆಯುವುದಕ್ಕೆ ಅವರು ತನ್ನ ಸಮಯದ ಹೆಚ್ಚಿನ ಪಾಲನ್ನು ಮೀಸಲಿಡಬೇಕಾಗಿತ್ತು. ಹಾಗಾಗಿ, ಅವರ ಗಳಿಕೆಯ ಅವಕಾಶಗಳು ತಪ್ಪುತ್ತಿದ್ದವು. ಕೆಲವು ಸಲ ಅವರ ಮಗಳು ಕೂಡ ಬಟ್ಟೆ ಒಗೆಯುವುದಕ್ಕಾಗಿ ಕಲಿಕೆಯನ್ನು ನಿಲ್ಲಿಸಬೇಕಾಗಿತ್ತು’’ ಎಂದು ನವಜೋತ್ ಹೇಳುತ್ತಾರೆ.

ಅದರ ಬಳಿಕ, ನವಜೋತ್ 12 ಅಭಿವೃದ್ಧಿಶೀಲ ದೇಶಗಳಿಗೆ ಹೋದರು ಹಾಗೂ 2,500ಕ್ಕೂ ಅಧಿಕ ಕುಟುಂಬಗಳೊಂದಿಗೆ ಮಾತನಾಡಿ ಕೈಯಿಂದ ಬಟ್ಟೆ ಒಗೆಯುವ ವಿಷಯದಲ್ಲಿ ಸಮೀಕ್ಷೆ ಮಾಡಿದರು. ಈ ಸಮಸ್ಯೆಯು ವಿಶ್ವವ್ಯಾಪಿಯಾಗಿದೆ ಹಾಗೂ ಇದು ಮಹಿಳೆಯರು ಮತ್ತು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಹಾಗೂ ಅವರ ಕ್ಷೇಮ ಮತ್ತು ಜೀವನೋಪಾಯಕ್ಕೆ ಅಡ್ಡಿಯಾಗುತ್ತದೆ ಎನ್ನುವುದನ್ನು ಕಂಡುಕೊಂಡರು.

ಕೃಪೆ: thebetterindia.com

Writer - ಗೋಪಿ ಕರೇಲಿಯಾ

contributor

Editor - ಗೋಪಿ ಕರೇಲಿಯಾ

contributor

Similar News