ಟೆಲಿ ಪ್ರಾಂಪ್ಟರ್ ವೈಫಲ್ಯ ಅಲ್ಲ , ಪ್ರಧಾನಿ ಮೋದಿ ಭಾಷಣ ನಿಲ್ಲಿಸಿದ್ದು ತಾಂತ್ರಿಕ ಸಮಸ್ಯೆಯಿಂದ !

Update: 2022-01-18 17:53 GMT

ಹೊಸದಿಲ್ಲಿ: ವಿಶ್ವ ಆರ್ಥಿಕ ವೇದಿಕೆಯ (WEF) ಆನ್ ಲೈನ್ ದಾವೋಸ್ ಅಜೆಂಡಾ 2022 ಕಾರ್ಯಕ್ರಮವನ್ನು ಉದ್ದೇಶಿಸಿ ಜನವರಿ 17 ರಂದು ಮಾತಾಡಿದರು. ಆದರೆ ಅವರು ಭಾಷಣ ನಿಲ್ಲಿಸಿದ ಗಳಿಗೆಯ ಬಗ್ಗೆಯೇ ಮಂಗಳವಾರ ಇಡೀ ದಿನ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯಿತು. ಟೆಲಿ ಪ್ರಾಂಪ್ಟರ್ ವೈಫಲ್ಯವಾಗಿ ಪ್ರಧಾನಿ ಮೋದಿ ಭಾಷಣ ನಿಲ್ಲಿಸಬೇಕಾಯಿತು, ಅವರಿಗೆ ಸ್ವತಃ ಭಾಷಣ ಮುಂದುವರಿಸಲು ಆಗಲಿಲ್ಲ ಎಂದು ವಿಪಕ್ಷ ನಾಯಕರು, ಮೋದಿ ಟೀಕಾಕಾರರು ಪ್ರಧಾನಿ ಹಾಗು ಬಿಜೆಪಿಯನ್ನು ಕುಟುಕಿದರು.

 ರಾಹುಲ್ ಗಾಂಧಿ ಸಹಿತ ಪ್ರಮುಖ ಕಾಂಗ್ರೆಸ್ ನಾಯಕರು, ಹಲವು ಪ್ರಮುಖ ಸೋಷಿಯಲ್ ಮೀಡಿಯಾ ಪೇಜುಗಳು , ಟ್ವಿಟರ್ ಬಳಕೆದಾರರು ಪ್ರಧಾನಿಯನ್ನು ಟೀಕಿಸಿದರು, ತಮಾಷೆ ಮಾಡಿದರು.   

ಆದರೆ ನಿಜವಾಗಿ ನಡೆದದ್ದೇನು ? altnews.in ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿ ಹೀಗೆ ವರದಿ ಮಾಡಿದೆ. 
 
ವಿಶ್ವ ಆರ್ಥಿಕ ವೇದಿಕೆಯ ಆನ್ ಲೈನ್ ಕಾರ್ಯಕ್ರಮದಲ್ಲಿ ನಿಜವಾಗಿ ನಡೆದದ್ದೇನು ಎಂದು ತಿಳಿದುಕೊಳ್ಳಲು ಈ ಸಮಸ್ಯೆ ಉಂಟಾದ ಕ್ಷಣದವರೆಗಿನ ಬೆಳವಣಿಗೆಗಳನ್ನು ಮೊದಲು ತಿಳಿದುಕೊಳ್ಳಬೇಕು.  

ಡಬ್ಲ್ಯು ಇ ಎಫ್ ಕಾರ್ಯಕ್ರಮದಲ್ಲಿ ಪ್ರಧಾನಿ ಮಾಡಿದ ಆನ್ ಲೈನ್ ಭಾಷಣ Narendra Modi, Doordarshan National ಹಾಗೂ World Economic Forum ಈ ಮೂರು ಯೂಟ್ಯೂಬ್ ಚಾನಲ್ ಗಳಲ್ಲಿ ಲಭ್ಯವಿದೆ. DD ಮತ್ತು WEF ನ ಚಾನಲ್ ಗಳಲ್ಲಿರುವ ವಿಡಿಯೋದಲ್ಲಿ ಮಾತ್ರ ಈ ಸಮಸ್ಯೆ ಕಾಣುತ್ತಿದೆ, ನರೇಂದ್ರ ಮೋದಿ ಯವರ  ಯೂಟ್ಯೂಬ್ ಚಾನಲ್ ನಲ್ಲಿ ಇದು ಕಾಣುತ್ತಿಲ್ಲ. 

DD ವಿಡಿಯೋದಲ್ಲಿ ಪ್ರಧಾನಿ ಮೋದಿ ಆಗಲೇ 6 ನಿಮಿಷ ಮಾತಾಡಿದ್ದು ಇದೆ. ಆದರೆ WEF ಚಾನಲ್ ನಲ್ಲಿ ಈ ಭಾಗ ಇಲ್ಲ. ನಿಜವಾಗಿ WEF ನ ಮೊದಲ 8 ನಿಮಿಷ ಖಾಲಿ ಇದೆ. ಬಳಿಕ ಪ್ರಾರಂಭವಾಗುವಾಗ ಪ್ರಧಾನಿ ಮೋದಿ ಆಗಲೇ ಭಾಷಣದ ಅರ್ಧ ಭಾಗ ಮುಗಿಸಿದಂತೆ ಕಾಣುತ್ತದೆ. ಇದರಿಂದ ಅಲ್ಲೇನೋ ತಾಂತ್ರಿಕ ಸಮಸ್ಯೆ ಆಗಿತ್ತು. ಇದರಿಂದ ಪ್ರಧಾನಿ ಭಾಷಣದ ಪ್ರಾರಂಭದ ಭಾಗ WEF ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರ ಆಗಿರಲಿಲ್ಲ ಎಂಬುದು ಸ್ಪಷ್ಟ.  

ಇನ್ನು ಮುಂದಿನ ಒಂದೊಂದೇ ಹಂತಗಳನ್ನು ಆಲ್ಟ್ ನ್ಯೂಸ್ ವಿವರಿಸುತ್ತದೆ. DD ಯೂಟ್ಯೂಬ್ ಚಾನಲ್ ನ ಮೊದಲ ನಾಲ್ಕು ನಿಮಿಷಗಳಲ್ಲಿ ಪ್ರಧಾನಿ ಮೋದಿ ಹಾಗು WEF ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. 5:04 ನಿಮಿಷಕ್ಕೆ ಪ್ರಧಾನಿ ಮೋದಿ ಭಾಷಣ ಆರಂಭಿಸುತ್ತಾರೆ. ಆದರೆ ಆಗ ಅವರ ಪರಿಚಯ ನೀಡಲಾಗುವುದಿಲ್ಲ. ಆದರೆ ಅದಕ್ಕಿನ ಕೆಲವೇ ಸೆಕೆಂಡುಗಳ ಮೊದಲು [5:00 to 5:01 ] ವ್ಯಕ್ತಿಯೊಬ್ಬ  "... ದಿ ಗ್ರಾಫಿಕ್ಸ್ ... ಸರ್ ?" ಎಂದು ಇಂಗ್ಲೀಷ್ ನಲ್ಲಿ ಹೇಳುವುದು ಕೇಳುತ್ತದೆ.  ಆ ಬಳಿಕ ಪ್ರಧಾನಿ 5:12 ನಿಮಿಷಕ್ಕೆ ತನ್ನ ಇಯರ್ ಪೀಸ್ ತೆಗೆದು ಮಾತಾಡಲು ಪ್ರಾರಂಭಿಸುತ್ತಾರೆ.   

ಆದರೆ 7:07 ನಿಮಿಷಕ್ಕೆ ಪ್ರಧಾನಿ ಮೋದಿ ಎಡಕ್ಕೆ ತಿರುಗಿ ನೋಡಿ ಮಾತಾಡುವುದನ್ನು ನಿಲ್ಲಿಸುತ್ತಾರೆ. 7:15 ನಿಮಿಷಕ್ಕೆ ಅವರು ಶ್ವಾಬ್ ಅವರನ್ನು ಹೆಸರು ಹೇಳಿ ಹೀಗೆ ಕೇಳುತ್ತಾರೆ , " ಕ್ಯಾನ್ ಯೂ ಹಿಯರ್ ಮೀ ? ( ನನ್ನ ಮಾತು ನಿಮಗೆ ಕೇಳುತ್ತಿದೆಯೇ ? ) ". ಆಗ ಶ್ವಾಬ್ ಕೇಳುತ್ತಿದೆ ಎಂದು ಪ್ರತಿಕ್ರಿಯಿಸುತ್ತಾರೆ. ಪ್ರಧಾನಿ ಮತ್ತೆ ಕೇಳುತ್ತಾರೆ , " ಈಸ್ ಅವರ್ ಇಂಟರ್ ಪ್ರೆಟರ್ ಆಡಿಬಲ್ ಆಸ್ ವೆಲ್ ? ( ನಮ್ಮ ಅನುವಾದಕನ ಧ್ವನಿಯೂ  ಕೇಳುತ್ತಿದೆಯೇ ?). ಶ್ವಾಬ್ ಅದಕ್ಕೂ ಹೌದು ಎಂದು ಪ್ರತಿಕ್ರಿಯಿಸಿ 7:45 ನಿಮಿಷಕ್ಕೆ ಅಧಿಕೃತ ಗೋಷ್ಠಿ ಮತ್ತೆ ಸಣ್ಣ ಪರಿಚಯ ಸಂಗೀತದೊಂದಿಗೆ ಪ್ರಾರಂಭವಾಗುತ್ತದೆ " ಎಂದು ಹೇಳುತ್ತಾರೆ.  

10:49 ನಿಮಿಷಕ್ಕೆ ಪ್ರಧಾನಿ ತನ್ನ ಭಾಷಣ ಮತ್ತೆ ಪ್ರಾರಂಭಿಸುತ್ತಾರೆ. ಈ ಭಾಷಣ ಅವರು 5:04 ನಿಮಿಷದವರೆಗೆ ಮಾಡಿದ ಭಾಷಣದ ಯಥಾವತ್ ರೂಪ ಎಂಬುದು ಗಮನಾರ್ಹ. ಇನ್ನು ಭಾಷಣಕ್ಕೆ ಟೆಲಿ ಪ್ರಾಂಪ್ಟರ್ ಬಳಸುವುದೂ ಸಾಮಾನ್ಯ ಎಂಬುದು ಇಲ್ಲಿ ಗಮನಾರ್ಹ.  

WEF ಯೂಟ್ಯೂಬ್ ಚಾನಲ್ ನಲ್ಲಿ ಅದೇ ವಿಡಿಯೋ ನೋಡಿದಾಗ , ಪ್ರಧಾನಿ ಮೋದಿ ಎಡಕ್ಕೆ ತಿರುಗಿದಾಗ ಇಡೀ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದ ತಂಡದ ಸದಸ್ಯನೊಬ್ಬ ಎಲ್ಲರೂ ಬಂದು ಸೇರಿದ್ದಾರೆಯೇ ಇಲ್ಲವೇ ಎಂದು ಕೇಳುವಂತೆ ಪ್ರಧಾನಿಗೆ ಸಲಹೆ ನೀಡುತ್ತಾನೆ. ಹಿಂದಿ ಧ್ವನಿಯೊಂದು ಪ್ರಧಾನಿಗೆ " ಸರ್, ಎಲ್ಲರೂ ಬಂದು ಸೇರಿದ್ದಾರೆಯೇ ಎಂದು ಒಮ್ಮೆ ಕೇಳಿ... " ಎಂದು ಹೇಳುತ್ತದೆ. ಆ ಬಳಿಕ ಪ್ರಧಾನಿ ನನ್ನ ಮತ್ತು ಅನುವಾದಕನ ಧ್ವನಿ ಕೇಳುತ್ತಿದೆಯೇ ಎಂದು ಕೇಳುತ್ತಾರೆ. ಹಾಗಾಗಿ ಕಾರ್ಯಕ್ರಮ ನಿರ್ವಹಿಸುತ್ತಿದ್ದ ತಂಡದವರು ಹೇಳಿದ್ದೇ  ಪ್ರಧಾನಿ  ಭಾಷಣ ನಿಲ್ಲಿಸಲು ಕಾರಣ.  

ಏನೋ ತಾಂತ್ರಿಕ ಸಮಸ್ಯೆಯಾಗಿದೆ ಎಂದು ತಿಳಿದ ಕೂಡಲೇ ಕ್ಲಾಸ್ ಶ್ವಾಬ್ ಅವರು ಪ್ರಧಾನಿ ಯವರನ್ನು ಪರಿಚಯಿಸಿದರು ಮತ್ತು ಪ್ರಧಾನಿ ಮತ್ತೆ ಶುರುವಿನಿಂದ ಭಾಷಣ ಪ್ರಾರಂಭಿಸಿದರು. ಹಾಗಾಗಿ ಇಡೀ ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿದಾಗ ಪ್ರಧಾನಿ ಭಾಷಣಕ್ಕೆ ತಡೆಯಾಗಿದ್ದು ತಾಂತ್ರಿಕ ಸಮಸ್ಯೆಯಿಂದಲೇ ಹೊರತು ಟೆಲಿ ಪ್ರಾಂಪ್ಟರ್ ಗೊಂದಲದಿಂದ ಅಲ್ಲ ಎಂಬುದು ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News