ಬ್ರೆಝಿಲ್‌ನಲ್ಲಿ ದಾಖಲೆ ಕೋವಿಡ್ ಪ್ರಕರಣ

Update: 2022-01-19 02:28 GMT
ಸಾಂದರ್ಭಿಕ ಚಿತ್ರ

ರಿಯೊ ಡಿ ಜನೈರೊ: ಬ್ರೆಝಿಲ್‌ನಲ್ಲಿ ಇದುವರೆಗಿನ ಗರಿಷ್ಠ ಅಂದರೆ 1.37 ಲಕ್ಷ ಕೊರೋನ ವೈರಸ್ ಪ್ರಕರಣಗಳು ಮಂಗಳವಾರ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

213 ದಶಲಕ್ಷ ಜನಸಂಖ್ಯೆ ಹೊಂದಿರುವ ಈ ದಕ್ಷಿಣ ಅಮೆರಿಕನ್ ದೇಶ, ಜಾಗತಿಕ ಮಟ್ಟದಲ್ಲಿ ಕೋವಿಡ್‌ನಿಂದ ಅತ್ಯಂತ ಬಾಧಿತವಾಗಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಇಡೀ ವಿಶ್ವದಲ್ಲಿ ಅಮೆರಿಕ ಹೊರತುಪಡಿಸಿದರೆ ಗರಿಷ್ಠ ಸಾವು ಬ್ರೆಝಿಲ್‌ ನಲ್ಲಿ ಸಂಭವಿಸಿದ್ದು, ಇದುವರೆಗೆ 6.2 ಲಕ್ಷ ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ತೀವ್ರವಾಗಿ ಹಾಗೂ ಕ್ಷಿಪ್ರವಾಗಿ ಹರಡುವ ಒಮೈಕ್ರಾನ್ ಪ್ರಬೇಧ ಪತ್ತೆಯಾದ ಬಳಿಕ ಅಂದರೆ ಈ ವರ್ಷಾರಂಭದಿಂದ ಪ್ರಕರಣಗಳ ಸಂಖ್ಯೆ ಬ್ರೆಝಿಲ್‌ ನಲ್ಲಿ ಹೆಚ್ಚುತ್ತಲೇ ಇದೆ. ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಳು ಇದಕ್ಕೆ ಮತ್ತಷ್ಟು ವೇಗ ನೀಡಿವೆ.

2021ರ ಕೊನೆಗೆ ದೇಶದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 8 ಸಾವಿರದ ಆಸುಪಾಸಿನಲ್ಲಿತ್ತು. ಬ್ರೆಝಿಲ್‌ನಲ್ಲಿ ಇದುವರೆಗೆ ಗರಿಷ್ಠ ಎಂದರೆ 2021ರ ಜೂನ್‌ನಲ್ಲಿ 1.15 ಲಕ್ಷ ಪ್ರಕರಣಗಳು ವರದಿಯಾಗಿದ್ದವು.
"ಇಷ್ಟಾಗಿಯೂ ದೇಶದಲ್ಲಿ ಸೋಂಕು ಇನ್ನೂ ಉತ್ತುಂಗ ತಲುಪಿಲ್ಲ. ಫೆಬ್ರುವರಿ ವೇಳೆಗೆ ಉತ್ತುಂಗಕ್ಕೇರಿ ಬಳಿಕ ಸ್ಥಿರವಾಗಲಿದೆ" ಎಂದು ಸಾಂಕ್ರಾಮಿಕ ರೋಗ ತಜ್ಞ ಎಥೆಲ್ ಮೈಕೆಲ್ ಹೇಳಿದ್ದಾರೆ.

ಹೆಚ್ಚುತ್ತಿರುವ ಪ್ರಕರಣಗಳು ಫೆಬ್ರುವರಿ ಕೊನೆಗೆ ನಡೆಯಲಿರುವ ಕಾರ್ನಿವಲ್ ಸಂಭ್ರಮದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಯಾ ಪಾಲೊ, ರಿಯಾ ಡಿ ಜನೈರೊ ಮತ್ತು ಸಾಲ್ವಡೋರ್ ಈಗಾಗಲೇ ಕಾರ್ನಿವನ್ ನಡೆಸದಿರಲು ನಿರ್ಧರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News