ಜಮ್ಮು ಕಾಶ್ಮೀರ: ಹಿಮಪಾತದಲ್ಲಿ ಸಿಲುಕಿದ 30 ನಾಗರಿಕರ ರಕ್ಷಣೆ

Update: 2022-01-19 02:29 GMT

ಹೊಸದಿಲ್ಲಿ, ಜ. 18: ಹಿಮಪಾತದಿಂದಾಗಿ ಜಮ್ಮು ಹಾಗೂ ಕಾಶ್ಮೀರದ ಚೌಕಿಬಾಲ್-ತಂಗ್ದಾರ್ ರಸ್ತೆಯಲ್ಲಿ ಸಿಲುಕಿಕೊಂಡದ್ದ 30 ಮಂದಿ ನಾಗರಿಕರನ್ನು ಶಸಸ್ತ್ರ ಸೇನಾ ಪಡೆ ಸೋಮವಾರ ತಡ ರಾತ್ರಿ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಎರಡು ಹಿಮಪಾತ ಸಂಭವಿಸಿದ ಬಳಿಕ ಖೂನಿ ನಾಲಾ ಹಾಗೂ ಎಸ್.ಎಂ. ಹಿಲ್ನ ಸಮೀಪ ಹಿಮದಲ್ಲಿ ನಾಗರಿಕರು ಸಿಲುಕಿಕೊಂಡಿದ್ದರು.

ನಾಗರಿಕರು ವಾಹನಗಳೊಂದಿಗೆ ಹಿಮದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಎನ್ಸಿ ಪಾಸ್ನಲ್ಲಿದ್ದ ಸೇನಾ ಪಡೆಗೆ ತಲುಪಿದ ಕೂಡಲೇ ಸೇನಾ ಪಡೆಯ ಎರಡು ಹಿಮಪಾತ ರಕ್ಷಣಾ ತಂಡ ಹಾಗೂ ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್ (ಜಿಆರ್ಇಎಫ್)ನ ತಂಡ ಘಟನಾ ಸ್ಥಳಕ್ಕೆ ಧಾವಿಸಿತು. ಎರಡು ಹಿಮಪಾತದ ಕಾರಣಕ್ಕಾಗಿ ಹವಾಮಾನ ಪ್ರತಿಕೂಲವಾದ ಹೊರತಾಗಿಯೂ 14 ನಾಗರಿಕರನ್ನು ರಕ್ಷಿಸಿ ನೀಲಂಗೆ ಹಾಗೂ 16 ನಾಗರಿಕರನ್ನು ರಕ್ಷಿಸಿ ಎನ್ಸಿ ಪಾಸ್ಗೆ ಕರೆ ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಿಸಲಾದ ಎಲ್ಲ ನಾಗರಿಕರಿಗೆ ರಾತ್ರಿ ಆಹಾರ, ವೈದ್ಯಕೀಯ ಸೌಲಭ್ಯ ಹಾಗೂ ವಸತಿ ನೀಡಲಾಗಿದೆ. ಹಿಮಪಾತದ ಬಳಿಕ ಹಿಮವನ್ನು ತೆರವುಗೊಳಿಸಿ 12 ವಾಹನಗಳನ್ನು ಹೊರ ತೆಗೆಯಲಾಗಿದೆ. ಸಂಪೂರ್ಣ ರಕ್ಷಣಾ ಕಾರ್ಯಾಚರಣೆ 5ರಿಂದ 6 ಗಂಟೆ ಕಾಲ ಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News