ಉತ್ತರಪ್ರದೇಶ: ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆ

Update: 2022-01-19 05:29 GMT
Photo: Twitter/@ANI

ಹೊಸದಿಲ್ಲಿ: ಸಮಾಜವಾದಿ ಪಕ್ಷದ ಧುರೀಣ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬುಧವಾರ ಬಿಜೆಪಿಗೆ ಸೇರಿದ್ದಾರೆ ಎಂದು NDTV ವರದಿ ಮಾಡಿದೆ.

ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಅಪರ್ಣಾ ಬಿಜೆಪಿ ಪಕ್ಷವನ್ನು ಸೇರಿದ್ದು ಸಮಾಜವಾದಿ ಪಕ್ಷಕ್ಕೆ ಹಿನ್ನಡೆಯಾಗಿದೆ.

ಅಪರ್ಣಾ ಯಾದವ್ ಅವರು ಅಖಿಲೇಶ್ ಯಾದವ್ ಅವರ ಸಹೋದರ ಹಾಗೂ  ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ.

ಇತ್ತೀಚೆಗೆ ಮೂವರು ರಾಜ್ಯ ಸಚಿವರು ಸೇರಿದಂತೆ ಹಲವು ಹಿಂದುಳಿದ ಜಾತಿಗಳ ನಾಯಕರು  ಬಿಜೆಪಿಯನ್ನು ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಇದೀಗ ಸಮಾಜವಾದಿ ಪಕ್ಷದ ನಾಯಕಿಯನ್ನು ಬಿಜೆಪಿ ತನ್ನತ್ತ ಸೆಳೆದಿದೆ.

ಯೋಗಿ ಆದಿತ್ಯನಾಥ್ ಸರಕಾರದಿಂದ ಪ್ರಮುಖ ನಾಯಕರು ನಿರ್ಗಮಿಸುತ್ತಿರುವಾಗ ಮುಲಾಯಂ ಅವರ  ಸೊಸೆ ಅಪರ್ಣಾ ಯಾದವ್ ಪ್ರತಿಸ್ಪರ್ಧಿ ಪಕ್ಷಕ್ಕೆ ಸೇರುತ್ತಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದು, ಅದೀಗ ನಿಜವಾಗಿದೆ.

ಮೂವರು ಮಾಜಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಹಾಗೂ ದಾರಾ ಸಿಂಗ್ ಚೌಹಾಣ್ ಅವರನ್ನು  ಅಖಿಲೇಶ್ ಯಾದವ್ ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News