ಉಡುಪಿ ಜಿಲ್ಲೆಯಲ್ಲಿ 683 ಮಂದಿಗೆ ಕೋವಿಡ್‌ ಪಾಸಿಟಿವ್

Update: 2022-01-19 16:00 GMT

ಉಡುಪಿ, ಜ.19: ಜಿಲ್ಲೆಯಲ್ಲಿ ಬುಧವಾರ ಒಟ್ಟು 683 ಮಂದಿ ಹೊಸದಾಗಿ ಕೊರೋನಕ್ಕೆ ಪಾಸಿಟಿವ್ ಬಂದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸದ್ಯ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 4764ಕ್ಕೇರಿದೆ. ದಿನದಲ್ಲಿ 220 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 683 ಮಂದಿಯಲ್ಲಿ 311 ಮಂದಿ ಪುರುಷರು ಹಾಗೂ 372 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 456 ಮಂದಿ ಉಡುಪಿ ತಾಲೂಕಿಗೆ ಸೇರಿದವರಾಗಿದ್ದಾರೆ. ಕುಂದಾಪುರ ತಾಲೂಕಿನ 159 ಹಾಗೂ ಕಾರ್ಕಳ ತಾಲೂಕಿನ 62 ಮಂದಿಯೊಂದಿಗೆ ಹೊರಜಿಲ್ಲೆಗಳ ಆರು ಮಂದಿಯೂ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

ಬುಧವಾರ ಪಾಸಿಟಿವ್ ಬಂದ 683 ಮಂದಿಯಲ್ಲಿ 23 ಮಂದಿಯನ್ನು ಕೋವಿಡ್ ಕೇರ್‌ಸೆಂಟರ್‌ಗೂ, 12 ಮಂದಿಯನ್ನು ಕೋವಿಡ್ ಆಸ್ಪತ್ರೆಗೂ, 17 ಮಂದಿಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿದ್ದು, ಉಳಿದ 631 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಜಿಲ್ಲೆಯಲ್ಲಿ ಒಟ್ಟು 156 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು ಇವರಲ್ಲಿ 11 ಮಂದಿ ವೆಂಟಿಲೇಟರ್, 19 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಮಂಗಳವಾರ 220 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 1237ಕ್ಕೇರಿದೆ. ನಿನ್ನೆ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 3385 ಮಂದಿ, ಕುಂದಾಪುರದಲ್ಲಿ 1242 ಹಾಗೂ ಕಾರ್ಕಳ ತಾಲೂಕಿನ 1104 ಮಂದಿ ಸೇರಿದಂತೆ ಒಟ್ಟು 5731 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 5853ಕ್ಕೇರಿದೆ.

716 ಮಂದಿಗೆ ಮುನ್ನೆಚ್ಚರಿಕೆ ಡೋಸ್: ಜಿಲ್ಲೆಯಲ್ಲಿ ಇಂದು ಒಟ್ಟು 716 ಮಂದಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 60 ವರ್ಷಕ್ಕೂ ಮೇಲ್ಪಟ್ಟ 491 ಮಂದಿ ಲಸಿಕೆ ಪಡೆದರೆ, 159 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 66 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಸೇರಿದ್ದಾರೆ.

2020 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 2020 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 215 ಮಂದಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲಾಗಿದೆ. ಒಟ್ಟಾರೆಯಾಗಿ ದಿನದಲ್ಲಿ 608 ಮಂದಿ ಮೊದಲ ಡೋಸ್ ಹಾಗೂ 1312 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದ್ದಾರೆ.

ಜಿಲ್ಲೆಯಲ್ಲೀಗ 25 ಕಂಟೈನ್‌ಮೆಂಟ್ ಝೋನ್

ಉಡುಪಿ ಜಿಲ್ಲೆಯಲ್ಲಿ ಸದ್ಯ 25 ಸಕ್ರಿಯ ಕಂಟೈನ್‌ಮೆಂಟ್ ವಲಯಗಳಿವೆ. ಇವುಗಳಲ್ಲಿ ಒಟ್ಟು 331 ಮಂದಿ ಕೋವಿಡ್ ಪಾಸಿಟಿವ್ ಬಂದವರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಉಡುಪಿ ತಾಲೂಕಿನಲ್ಲಿ 11 ಕಂಟೈನ್‌ಮೆಂಟ್ ವಲಯಗಳಿದ್ದು, ಇಲ್ಲಿ 100 ಮಂದಿ ಪಾಸಿಟಿವ್ ಬಂದವರಿದ್ದಾರೆ. ಕುಂದಾಪುರದಲ್ಲಿ 5 ವಲಯಗಳಿದ್ದು 136, ಕಾರ್ಕಳದಲ್ಲಿ 5 ವಲಯಗಳಲ್ಲಿ 40, ಕಾಪುವಿನ 2 ವಲಯಗಳಲ್ಲಿ 11 ಮಂದಿ, ಬ್ರಹ್ಮಾವರದ 2 ವಲಯಗಳಲ್ಲಿ 44 ಮಂದಿ ಕೋವಿಡ್ ಪಾಸಿಟಿವ್ ಸೋಂಕಿತರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚುತ್ತಿದೆ ಪಾಸಿಟಿವಿಟಿ ಪ್ರಮಾಣ: ಜಿಲ್ಲೆಯಲ್ಲಿ ಜ.17ರವರೆಗಿನ ಮಾಹಿತಿಯಂತೆ ಜಿಲ್ಲೆಯ ಹಿಂದಿನ 14 ದಿನಗಳ ಪಾಸಿಟಿವಿಟಿ ರೇಟ್ 5.48 ಆಗಿದೆ. ಅದೇ ಏಳು ದಿನಗಳ ಪ್ರಮಾಣ ಶೇ.7.93 ಆಗಿದ್ದರೆ, ಮೂರು ದಿನಗಳ ಪ್ರಮಾಣ 10.41 ಆಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News