ಪೆಲೆಸ್ತೀನೀಯರ ಮನೆ ಧ್ವಂಸಗೊಳಿಸಿದ ಇಸ್ರೇಲ್ ಪಡೆ : ವರದಿ

Update: 2022-01-19 16:33 GMT
Twitter.com/@AJEnglish

ಜೆರುಸಲೇಂ, ಜ.19: ಆಕ್ರಮಿತ ಪೂರ್ವ ಜೆರುಸಲೇಂನ ಬಳಿಯ ಶೇಖ್ ಜರಾ ಪಟ್ಟಣದಲ್ಲಿ ಪೆಲೆಸ್ತೀನಿಯನ್ ಕುಟುಂಬವೊಂದರ ಮನೆಯನ್ನು ಇಸ್ರೇಲ್ ಪಡೆ ಧ್ವಂಸಗೊಳಿಸಿರುವುದಾಗಿ ವರದಿಯಾಗಿದೆ.

  ಮನೆಯನ್ನು ನೆಲಸಮಗೊಳಿಸುವ ಪ್ರಯತ್ನ ನಡೆಸಿದರೆ ಮನೆಯನ್ನು ಸ್ಫೋಟಿಸುವುದಾಗಿ ಕೆಲ ದಿನದ ಹಿಂದೆ ಕುಟುಂಬದವರು ಎಚ್ಚರಿಸಿದ್ದರು. ಆದರೆ ಇದಕ್ಕೆ ಕಿವಿಗೊಡದ ಇಸ್ರೇಲ್ ಪೊಲೀಸ್ ಮತ್ತು ವಿಶೇಷ ಪಡೆ ಬುಧವಾರ ಬೆಳಿಗ್ಗೆ ಮನೆಯನ್ನು ಸುತ್ತುವರಿದರು ಎಂದು ಮೂಲಗಳು ಹೇಳಿವೆ. ತಾವು ನಿದ್ದೆಯಲ್ಲಿದ್ದಾಗ ಮನೆಗೆ ನುಗ್ಗಿದ ಇಸ್ರೇಲ್ ಪಡೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮನೆಯ ಯಜಮಾನ ಮಹ್ಮೂದ್ ಸಲಿಯ ಸಹಿತ 6 ಮಂದಿಯನ್ನು ಬಂಧಿಸಿದೆ ಎಂದು ಕುಟುಂಬದ ಸದಸ್ಯರನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ. ಮನೆ ನೆಲಸಮಗೊಳಿಸುವುದನ್ನು ವಿರೋಧಿಸಿದ ಕುಟುಂಬದ ಬೆಂಬಲಕ್ಕೆ ನಿಂತಿದ್ದ ಕನಿಷ್ಟ 18 ಇತರ ಪೆಲೆಸ್ತೀನೀಯರನ್ನೂ ಬಂಧಿಸಲಾಗಿದೆ . ಮನೆ ನೆಲಸಮಗೊಂಡ ಕಾರಣ 18 ಸದಸ್ಯರ ಕುಟುಂಬ ಈಗ ನಿರಾಶ್ರಿತವಾಗಿದೆ ಎಂದು ವರದಿ ತಿಳಿಸಿದೆ.

ಮನೆಗೆ ನುಗ್ಗುವ ಮುನ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಲ್ಲದೆ ಮನೆಯ ಒಳಗೆ ಮತ್ತು ಹೊರಭಾಗದಲ್ಲಿ ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದ್ದಾರೆ. ಸುಮಾರು 50 ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿ ಮಹಿಳೆಯರು ಮಕ್ಕಳ ಸಹಿತ ಎದುರಿಗೆ ಸಿಕ್ಕವರನ್ನು ಥಳಿಸಿದ್ದಾರೆ ಎಂದು ಕುಟುಂಬದ ಸದಸ್ಯೆ ಯಾಸ್ಮೀನ್ ಸಲಿಯ ಹೇಳಿದ್ದಾರೆ. ಪೊಲೀಸ್ ಕಾರ್ಯಾಚರಣೆಯ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪತ್ರಕರ್ತರು ಹಾಗೂ ಮಾನವಹಕ್ಕು ಕಾರ್ಯಕರ್ತರ ಮೇಲೆ ರಬ್ಬರ್ ಲೇಪಿತ ಬುಲೆಟ್ ಪ್ರಯೋಗಿಸಿದಾಗ ಹಲವರು ಗಾಯಗೊಂಡಿದ್ದಾರೆ ಎಂದವರು ಹೇಳಿದ್ದಾರೆ.

 ನೆಲಸಮ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಇಸ್ರೇಲ್ ಅಧಿಕಾರಿಗಳು, ಇಲ್ಲಿ ನೆರೆಹೊರೆಯ ನಿವಾಸಿಗಳಿಗೆ ವಿಶೇಷ ವಸತಿಶಾಲೆಯನ್ನು ನಿರ್ಮಿಸುವ ಉದ್ದೇಶವಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News