ಅಬುಧಾಬಿ ಮೇಲೆ ಹೌದಿ ಡ್ರೋನ್ ದಾಳಿ ಪ್ರಕರಣ : ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಗೆ ಯುಎಇ ಕೋರಿಕೆ

Update: 2022-01-19 16:42 GMT

ಅಬುಧಾಬಿ, ಜ.19: ಸೋಮವಾರ ಯುಎಇ ಮೇಲೆ ಯೆಮನ್‌ನ ಹೌದಿ ಬಂಡುಗೋರರು ಡ್ರೋನ್ ದಾಳಿ ನಡೆಸಿರುವುದಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಿರುವ ಸೌದಿ ಅರೆಬಿಯಾ ನೇತೃತ್ವದ ಮಿಲಿಟರಿ ಒಕ್ಕೂಟ ಯೆಮನ್ ರಾಜಧಾನಿ ಸನಾದ ಮೇಲೆ ವಾಯುದಾಳಿ ನಡೆಸಿದೆ. ಈ ಮಧ್ಯೆ, ಸೋಮವಾರದ ದಾಳಿಯನ್ನು ಖಂಡಿಸಿರುವ ಯುಎಇ, ಭಯೋತ್ಪಾದಕರ ದಾಳಿಯ ಬಗ್ಗೆ ಚರ್ಚಿಸಲು ತಕ್ಷಣ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಸಭೆ ಕರೆಯಬೇಕೆಂದು ಕೋರಿದೆ.

    ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಸೋಮವಾರ ಅಬುಧಾಬಿಯ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದು, ಈ ದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯರು ಒಮ್ಮತದಿಂದ ಮತ್ತು ಒಕ್ಕೊರಲಿನಿಂದ ಖಂಡಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಯುಎಇ ರಾಯಭಾರಿ ಲನಾ ನುಸೈಬಾ ಒತ್ತಾಯಿಸಿದ್ದು, ನಮ್ಮ ವಲಯದಲ್ಲಿ ಭಯೋತ್ಪಾದನೆಯನ್ನು ಹರಡುವ ಹೌದಿಗಳ ಉದ್ದೇಶದ ಮುಂದುವರಿದ ಉಪಕ್ರಮ ಇದಾಗಿದೆ ಎಂದಿದ್ದಾರೆ.

ಹೌದಿ ಬಂಡುಗೋರರು ಸೋಮವಾರ ಅಬುಧಾಬಿಯ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ 3 ಮಂದಿ ಮೃತಪಟ್ಟಿದ್ದರು ಹಾಗೂ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದೊಂದು ಭಯೋತ್ಪಾದಕ ದಾಳಿ ಎಂದು ಖಂಡಿಸಿದ್ದ ಯುಇಎ, ಕಠಿಣ ಪ್ರತ್ಯುತ್ತರದ ಎಚ್ಚರಿಕೆ ನೀಡಿತ್ತು. ಮಂಗಳವಾರ ಮಿಲಿಟರಿ ಒಕ್ಕೂಟ ಯೆಮನ್‌ನ ರಾಜಧಾನಿ ಸನಾವನ್ನು ಗುರಿಯಾಗಿಸಿ ನಡೆಸಿದ ವಾಯುದಾಳಿಯಲ್ಲಿ ನಾಗರಿಕರ ಸಹಿತ ಕನಿಷ್ಟ 20 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತರಲ್ಲಿ ಹೌದಿ ವಾಯುಯಾನ ಅಕಾಡೆಮಿಯ ಮುಖ್ಯಸ್ಥ ಅಬ್ದುಲ್ಲಾ ಖಾಸಿಂ ಅಲ್-ಜುನೈದ್, ಅವರ ಪತ್ನಿ, 25 ವರ್ಷದ ಪುತ್ರ ಹಾಗೂ ಕುಟುಂಬದ ಸದಸ್ಯರೂ ಸೇರಿದ್ದಾರೆ ಎಂದು ಹೌದಿ ಸಂಘಟನೆಯ ಸ್ವಾಮ್ಯದ ಸಬಾ ಸುದ್ಧಿಸಂಸ್ಥೆ ವರದಿ ಮಾಡಿದೆ. ಮಂಗಳವಾರ ಸನಾದ ಮೇಲೆ ಮತ್ತಷ್ಟು ವಾಯುದಾಳಿ ನಡೆಸಿದ್ದು ಹೌದಿಗಳ ಗೋದಾಮು, ಡ್ರೋನ್‌ಗಳಿಗೆ ಸಂಬಂಧಿಸಿದ ಸಂಪರ್ಕ ವ್ಯವಸ್ಥೆಯನ್ನು ನಾಶಗೊಳಿಸಲಾಗಿದೆ ಎಂದು ಮಿಲಿಟರಿ ಒಕ್ಕೂಟ ಹೇಳಿದೆ.

ಈ ವಾರಾಂತ್ಯ ಭದ್ರತಾ ಸಮಿತಿಯ ಸಭೆ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉದ್ದೇಶಿಸಿ ರಾಯ್ಟರ್ಸ್ ವರದಿ ಮಾಡಿದೆ. ಎಲ್ಲಾ ನಾಗರಿಕ ಮಾನದಂಡಗಳಿಗೆ ವಿರುದ್ಧವಾದ ಇಂತಹ ಭಯೋತ್ಪಾದಕ ಕೃತ್ಯಗಳನ್ನು ಎದುರಿಸಲು ಯುಎಇ ಜತೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ವಿಶ್ವಸಂಸ್ಥೆ ಮಹಾಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಟ್ವೀಟ್ ಮಾಡಿದ್ದಾರೆ.

   ಈ ಮಧ್ಯೆ, ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ಮಾರಣಾಂತಿಕ ಪ್ರತ್ಯುತ್ತರವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಟೀಕಿಸಿದ್ದಾರೆ. ಹಲವಾರು ನಾಗರಿಕರ ಸಾವುನೋವುಗಳಿಗೆ ಕಾರಣವಾದ ಮೈತ್ರಿಪಡೆಗಳ ವಾಯುದಾಳಿಯ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥರು ಕಳವಳ ಮತ್ತು ದುಃಖ ವ್ಯಕ್ತಪಡಿಸಿದ್ದು ಸಂಘರ್ಷ ಮತ್ತಷ್ಟು ಉಲ್ಬಣಿಸದಂತೆ ಗರಿಷ್ಟ ಸಂಯಮದಿಂದ ವರ್ತಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯವರ ವಕ್ತಾರ ಸ್ಟೀಫನ್ ಡ್ಯುಜರಿಕ್ ಮಂಗಳವಾರ ಹೇಳಿದ್ದಾರೆ.

ಸೋಮವಾರದ ಡ್ರೋನ್ ದಾಳಿಯ ಬಳಿಕ, ಇಂತಹ ಆಕ್ರಮಣಕಾರಿ ಕೃತ್ಯಗಳನ್ನು ಜಂಟಿಯಾಗಿ ಎದುರಿಸಲು ಅಬುಧಾಬಿಯ ಯುವರಾಜ ಮುಹಮ್ಮದ್ ಬಿನ್ ಝಾಯೆದ್ ಮತ್ತು ಸೌದಿ ಅರೆಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಒಪ್ಪಿದ್ದಾರೆ ಎಂದು ಯುಎಇಯ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News