ರಶ್ಯಾಕ್ಕೆ ನೀಡುವ ಭೇಟಿಯಿಂದ ದ್ವಿಪಕ್ಷೀಯ ಬಾಂಧವ್ಯಕ್ಕೆ ನಿರ್ಣಾಯಕ ತಿರುವು : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ

Update: 2022-01-19 16:48 GMT
Twitter.com/@htTweets

  ಟೆಹ್ರಾನ್, ಜ.19: ರಶ್ಯಾಕ್ಕೆ ತಾನು ನೀಡುವ ಭೇಟಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ನಿರ್ಣಾಯಕ ತಿರುವು ನೀಡಬಹುದು ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿದ್ದಾರೆ.

ಈ ವಲಯದಲ್ಲಿ ರಶ್ಯಾ ಮತ್ತು ಇರಾನ್ ಬಲಿಷ್ಟ, ಸ್ವತಂತ್ರ ಮತ್ತು ಪ್ರಭಾವಶಾಲಿ ದೇಶಗಳಾಗಿದ್ದು ನಿಕಟ ಸಂವಾದದ ಮೂಲಕ ತಮ್ಮ ಭದ್ರತೆ ಮತ್ತು ವ್ಯಾಪಾರಕ್ಕೆ ಉತ್ತೇಜನ ನೀಡಬಹುದಾಗಿದೆ . . ನಾವು ರಶ್ಯಾದೊಂದಿಗೆ ಸಾಮಾನ್ಯ ಹಿತಾಸಕ್ತಿಯನ್ನು ಹೊಂದಿದ್ದು ನಮ್ಮ ಸಹಯೋಗ ಮತ್ತು ಸಾಮಾನ್ಯ ಹಿತಾಸಕ್ತಿಗಳು ಈ ವಲಯದಲ್ಲಿ ಭದ್ರತೆಯನ್ನು ಸೃಷ್ಟಿಸಿ ಏಕಪಕ್ಷೀಯತೆಯ ವಿರುದ್ಧ ಹೋರಾಡಲು ನೆರವಾಗಬಹುದು ಎಂದವರು ಹೇಳಿದ್ದಾರೆ. 2 ದಿನಗಳ ರಶ್ಯಾ ಪ್ರವಾಸಕ್ಕೆ ರೈಸಿ ಬುಧವಾರ ಮಾಸ್ಕೋಗೆ ತೆರಳುವ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದರು . ಉಭಯ ದೇಶಗಳ ವಿರುದ್ಧ ವಿವಿಧ ರೀತಿಯ ನಿರ್ಬಂಧ ವಿಧಿಸಿರುವ ಅಮೆರಿಕವನ್ನು ಪರೋಕ್ಷವಾಗಿ ಉಲ್ಲೇಖಿಸಿ ರೈಸಿ ಈ ಹೇಳಿಕೆ ನೀಡಿದ್ದಾರೆ.

ಉಭಯ ದೇಶಗಳ ಮಧ್ಯೆ ಈಗ ಇರುವ ಮಟ್ಟದ ಸಹಕಾರ ಸಂಬಂಧ ಎರಡೂ ದೇಶಗಳಿಗೆ ಸಮಾಧಾನ ತಂದಿಲ್ಲ. ಆದ್ದರಿಂದ ಸಹಕಾರ ಸಂಬಂಧದಲ್ಲಿ ಸುಧಾರಣೆ ತರಲು ಈ ಭೇಟಿ ನೆರವಾಗಲಿದೆ ಎಂಬುದು ಎರಡೂ ದೇಶಗಳ ನಿರೀಕ್ಷೆಯಾಗಿದೆ. ರಾಜಕೀಯ, ಆರ್ಥಿಕ, ಇಂಧನ, ವ್ಯಾಪಾರ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರ ಸಂಬಂಧ ರಶ್ಯಾ ಅಧ್ಯಕ್ಷ ಪುಟನ್ ಜತೆಗಿನ ಮಾತುಕತೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗಲಿದೆ ಎಂದು ರೈಸಿ ಸ್ಪಷ್ಟಪಡಿಸಿದ್ದಾರೆ.

 ಉಭಯ ದೇಶಗಳ ನಡುವಿನ ಈ ಹಿಂದಿನ 20 ವರ್ಷದ ಒಪ್ಪಂದ ಕಳೆದ ವರ್ಷ ಅಂತ್ಯಗೊಂಡಿದೆ. ಇನ್ನೊಂದು 5 ವರ್ಷದವರೆಗೆ ಈ ಒಪ್ಪಂದವನ್ನು ಸ್ವಯಂಚಾಲಿತವಾಗಿ ನವೀಕರಿಸಬಹುದಾದರೂ, ಇದರಲ್ಲಿ ಕೆಲವೊಂದು ಸುಧಾರಣೆಗಳ ಅಗತ್ಯವಿದೆ ಎಂದು ಎರಡೂ ದೇಶಗಳು ಒಪ್ಪಿಕೊಂಡಿವೆ.

ಸೆಪ್ಟಂಬರ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಶೃಂಗಸಭೆಯ ನೇಪಥ್ಯದಲ್ಲಿ ಪುಟಿನ್ ಮತ್ತು ರೈಸಿ ಮಧ್ಯೆ ಸಭೆ ನಡೆಯುವುದೆಂದು ನಿರ್ಧರಿಸಲಾಗಿತ್ತು. ಆದರೆ ಪುಟನ್‌ಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣ ಈ ಸಭೆ ರದ್ದಾಗಿತ್ತು. ಇರಾನ್‌ಗೆ ಎಸ್‌ಸಿಒದ ಸದಸ್ಯತ್ವ ನೀಡುವ ಪ್ರಸ್ತಾವನೆಗೆ ಎಲ್ಲಾ 7 ಕಾಯಂ ಸದಸ್ಯರೂ ಒಪ್ಪಿಗೆ ನೀಡಿದ್ದರು. ಅಮೆರಿಕದ ಕಠಿಣ ನಿರ್ಬಂಧದ ಮಧ್ಯೆಯೂ ಇದು ಇರಾನ್‌ಗೆ ದೊರೆತ ರಾಜತಾಂತ್ರಿಕ ಗೆಲುವಾಗಿದೆ ಎಂದು ವಿಶ್ಲೇಷಿಸಲಾಗಿತ್ತು.

2017ರ ಬಳಿಕ ರಶ್ಯಾಕ್ಕೆ ಭೇಟಿ ನೀಡಿರುವ ಪ್ರಥಮ ಇರಾನ್ ಅಧ್ಯಕ್ಷರಾಗಿರುವ ರೈಸಿ ಗುರುವಾರ ರಶ್ಯಾ ಸಂಸತ್ತಿನ ಕೆಳಮನೆ ಡ್ಯೂಮಾವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News