ಮೌಖಿಕ ಮಹಾಕಾವ್ಯಗಳ ಶೋಧ ಮತ್ತು ಸತ್ವದ ಹುಡುಕಾಟದ ‘ಹಾಡು ಕಲಿಸಿದ ಹರ’

Update: 2022-01-20 05:15 GMT

ಜನಪದ ಮಹಾಕಾವ್ಯಗಳು ಕಟ್ಟಿಕೊಡುವ ಜೀವನ ಪ್ರೀತಿ ಮತ್ತು ಬದುಕಿನ ವಾಸ್ತವಗಳು ಎಲ್ಲಾ ಕಾಲಕ್ಕೂ ಸತ್ಯವಾದವುಗಳು. ಜನಪದ ಸಾಹಿತ್ಯ ಶಿಷ್ಟ ಸಾಹಿತ್ಯದ ಮೇಲೆ ಉಂಟುಮಾಡಿರುವ ಪರಿಣಾಮಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮಲ್ಲಿ ಇಲ್ಲದ ಹೊರತು, ಒಬ್ಬ ನಿಜವಾದ ಸಂಶೋಧಕ, ಸಾಹಿತಿ ಸುಳ್ಳು ಹೇಳುವ ಸೋಗಲಾಡಿಯಾಗಿಬಿಡುತ್ತಾನೆ.

ಮೌಖಿಕ ಸಾಹಿತ್ಯದ ಸತ್ವ ಮತ್ತು ಶಕ್ತಿ, ಶಿಷ್ಟ ಸಾಹಿತ್ಯದ ಎಲ್ಲಾ ಪ್ರಕಾರಗಳ ಮೇಲೆ ಉಂಟುಮಾಡಿರುವ ಪ್ರಭಾವವನ್ನು ಒಪ್ಪಿಕೊಳ್ಳಲೇ ಬೇಕು. ಜಗತ್ತಿನ ಯಾವುದೇ ಸಾಹಿತ್ಯವನ್ನು ನೋಡಿದರು ಜನಪದ ಸಂಸ್ಕೃತಿ, ಆಚರಣೆಗಳು ಉಂಟುಮಾಡಿರುವ ಪ್ರಭಾವ ಬೇರಾವುದು ಮಾಡಿಲ್ಲ ಎಂಬ ಸತ್ಯವನ್ನು ತಿಳಿಸುವ ಅನಿವಾರ್ಯತೆ ಮತ್ತು ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಆ ಹಿನ್ನೆಲೆಯಲ್ಲಿ ಸುರೇಶ್ ನಾಗಲಮಡಿಕೆ ಅವರ ‘ಹಾಡು ಕಲಿಸಿದ ಹರ’ ಎಂಬ ಕೃತಿಯ ಮೂಲಕ ಜನಪದ ಮಹಾಕಾವ್ಯಗಳ ಹಿನ್ನೆಲೆಯಲ್ಲಿ ಮಾಡಿರುವ ಕೆಲಸ ಸತ್ಯದ ಸಂಶೋಧನೆಯನ್ನು ಹುಡುಕುವಲ್ಲಿ ಪ್ರಾಮಾಣಿಕ ಪ್ರಯತ್ನ ಯಶಸ್ವಿಯಾಗಿದೆ. ಶೈವ ಸಂಪ್ರದಾಯದ ಹಿನ್ನೆಲೆಯಲ್ಲಿ ಶಿವನ ಭಿನ್ನ ಆಯಾಮಗಳನ್ನು ಜನಪದರು ಕಂಡುಕೊಂಡ ರೀತಿಯನ್ನು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ.

ಇದೊಂದು ಸಂಶೋಧನಾ ಕೃತಿಯಾಗಿದ್ದು, ಜನಪದ ಮಹಾಕಾವ್ಯಗಳಲ್ಲಿನ ಸಂಸ್ಕೃತಿ ಸಂಕಥನಗಳು ಹೇಗೆ ಆಧುನಿಕ ಸಂದರ್ಭದಲ್ಲಿ ಎದುರುಗೊಳ್ಳುತ್ತವೆ ಎಂಬುದನ್ನು ತಿಳಿಸಿದ್ದಾರೆ. ಜನಪದ ಸಾಹಿತ್ಯದ ಜೀವಂತಿಕೆಯನ್ನು ಕೃತಿಯುದ್ದಕ್ಕೂ ತಿಳಿಸುತ್ತಾ ಹೋಗುತ್ತಾರೆ. ಆಧುನಿಕ ಸಂದರ್ಭದಲ್ಲಿ ಮೌಖಿಕ ಸಾಹಿತ್ಯ ಗ್ರಂಥಸ್ಥವಾದ ನಂತರದ ಕಾಲಘಟ್ಟದಲ್ಲಿ ಉಂಟಾದ ಪಲ್ಲಟಗಳನ್ನು ಕುರಿತು ಕೃತಿಕಾರರು ಚರ್ಚಿಸಿದ್ದಾರೆ.

ಶೈವ ಪಂಥದ ನೆಲೆ ಮತ್ತು ಅದರ ವಿಸ್ತಾರತೆಯನ್ನು ಜನಪದ ಮಹಾಕಾವ್ಯಗಳಲ್ಲಿ ಸ್ಪಷ್ಟವಾಗಿ ಗುರುತಿಸಿದ್ದಾರೆ. ಜನಪದ ಸಾಹಿತ್ಯ ಪರಂಪರೆ, ಜನಪದರ ಶ್ರಮ ಮತ್ತು ಬದುಕನ್ನು ಮಾತ್ರ ಅನಾವರಣಗೊಳಿಸದೆ, ಅದು ಆದಿಮ ಬದುಕಿನ ಕುಲ-ಕಸುಬುಗಳ ಸಂಬಂಧವನ್ನು ಹೇಗೆ ಕಟ್ಟಿಕೊಡಲಾಗಿದೆ ಎಂಬುದನ್ನು ತಿಳಿಸುತ್ತದೆ.

‘ಹಾಡು ಕಲಿಸಿದ ಹರ’ ಕೃತಿಯಲ್ಲಿ ಸುರೇಶ್ ನಾಗಲಮಡಿಕೆ ಅವರು ದಕ್ಷಿಣ ಮತ್ತು ಉತ್ತರಗಳ ಮೌಖಿಕ ಪರಂಪರೆಯ ಮುಖಾಮುಖಿಯನ್ನು ಮಾಡಿರುವುದನ್ನು ಕಾಣಬಹುದು. ದಕ್ಷಿಣೋತ್ತರ ಮಾರ್ಗಗಳ ನಡುವಿನ ಭಿನ್ನತೆ ಮತ್ತು ಸಾಮ್ಯತೆಗಳು ಹೇಗೆ ಎದುರುಗೊಳ್ಳುತ್ತವೆ ಎಂಬುದನ್ನು ಈ ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ. ದಕ್ಷಿಣದ ಮೌಖಿಕ ಕಾವ್ಯಗಳು ಜನಪ್ರಿಯವಾದಷ್ಟು, ಉತ್ತರದ ಕಾವ್ಯಗಳಿಗೆ ಆ ಜನಪ್ರಿಯತೆಯಾಗಲಿ, ಚರ್ಚೆಯಾಗಲಿ ಸಿಗದಿರುವ ಬಗ್ಗೆ ಕೃತಿಕಾರರು ವಿಷಾದ ವ್ಯಕ್ತಪಡಿಸುತ್ತಾರೆ. ಅದು ಸತ್ಯವೂ ಕೂಡ. ಇದೊಂದು ಪ್ರಾದೇಶಿಕ ತಾರತಮ್ಯ ಮತ್ತು ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ಆದ ಅನ್ಯಾಯಗಳನ್ನು ನಾವು ಸಾಹಿತ್ಯದ ನೆಲೆಯಲ್ಲಿ ಚರ್ಚಿಸದಿರುವುದು ವಿಪರ್ಯಾಸವೇ ಸರಿ.

ಮಾರ್ಗ ಮತ್ತು ದೇಶಿ ಸಾಹಿತ್ಯಗಳ ನಡುವಿನ ವೈಶಿಷ್ಟತೆಗಳು ಸಾಹಿತ್ಯದಲ್ಲಿ ಹೇಗೆ ಮಿಳಿತಗೊಂಡಿರುತ್ತವೆಯೋ, ಹಾಗೆ ಈ ಸಂಶೋಧನೆ ಅವುಗಳ ಚರ್ಚೆಗಳನ್ನು ಮುಂದುವರಿಸಿದೆ. ದೇಶಿ ಸಾಹಿತ್ಯದ ಸತ್ವ ಮತ್ತು ಮೂಲ ನೆಲೆಗಳು ಹೇಗೆ ಆಕರಗಳಾಗಿ ಮಾರ್ಪಾಟನ್ನು ಹೊಂದಿವೆ ಎಂಬುದನ್ನು ಚರ್ಚಿಸಲಾಗಿದೆ. ದೇಶಿ ಸಾಹಿತ್ಯದ ಸತ್ವ ಮಾರ್ಗದ ಮೇಲೆ ಉಂಟುಮಾಡಿದ ಪರಿಣಾ ಮವೇ ಇಂದು ಮಾರ್ಗದ ಶ್ರೇಷ್ಠತೆಯ ವ್ಯಸನದ ವಾಸನೆ ಗಬ್ಬುಗೊಂಡಿರುವುದನ್ನು ಕಾಣಬಹುದು.

ಈ ಕೃತಿಯಲ್ಲಿ, ಒಟ್ಟು ಐದು ಅಧ್ಯಾಯಗಳ ಮೂಲಕ, ಐದು ಮಹಾಕಾವ್ಯಗಳನ್ನು (ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ, ಹಾಲುಮತ, ಸಿದ್ಧರು) ಪ್ರಧಾನ ನೆಲೆಯಲ್ಲಿ ಚರ್ಚಿಸಿರುವುದನ್ನು ಕಾಣಬಹುದು. ಇದರ ಜೊತೆಗೆ ಅಲ್ಲಲ್ಲಿ ಪ್ರಾಸಂಗಿಕವಾಗಿ ಹಲವು ಕಾವ್ಯಗಳ ಚರ್ಚೆ ಬಂದಿರುವುದನ್ನು ಕಾಣಬಹುದು. ಈ ಅಧ್ಯಾಯಗಳಲ್ಲಿ ಪಂಪಪೂರ್ವಯುಗದಿಂದ ಆಧುನಿಕ ಸಾಹಿತ್ಯದವರೆಗೂ ಚರ್ಚೆಮಾಡಲಾಗಿದೆ. ಸಾಹಿತ್ಯ ಚರಿತ್ರೆ ಚರ್ಚೆಮಾಡುವ ಮತ್ತು ಒಳಗುಮಾಡಿಕೊಂಡಿರುವ ಸಾಹಿತ್ಯದ ವಿಚಾರಗಳು ಯಾವುವು ಎನ್ನುವುದನ್ನು ಪ್ರಾರಂಭದ ಅಧ್ಯಯಗಳಲ್ಲಿ ಚರ್ಚಿಸಲಾಗಿದೆ. ಸಾಹಿತ್ಯ ಚರಿತ್ರೆ ಕೇವಲ ಪಠ್ಯಗಳನ್ನು ಆಧರಿಸಿ ಚರಿತ್ರೆಯನ್ನು ರೂಪಿಸಿಕೊಂಡಿರುವ ಹಿನ್ನೆಲೆಯನ್ನು ಕುರಿತು ವಿವರಿಸಲಾಗಿದೆ. ಯಾಕೆ ಸಾಹಿತ್ಯ ಚರಿತ್ರೆ ಜನಪದ ಸಾಹಿತ್ಯವನ್ನು ಸಾಹಿತ್ಯದ ಭಾಗವಾಗಿ ನೋಡಿಲ್ಲ? ಅದನ್ನು ಸಾಹಿತ್ಯ ಚರಿತ್ರೆಯ ಒಳಗೆ ಇಟ್ಟು ನೋಡುವ ಪರಿಜ್ಞಾನವನ್ನು ಬೆಳೆಸಿಕೊಳ್ಳದಿರುವ ಹಿಂದಿನ ರಾಜಕಾರಣವನ್ನು ತಿಳಿದುಕೊಳ್ಳುವ ವಿಚಾರಗಳನ್ನು ವಿವೇಚಿಸಬೇಕು. ಸಾಹಿತ್ಯ ಚರಿತ್ರೆಯು ಜನಚರಿತೆ ಮತ್ತು ಮೌಖಿಕ ಚರಿತ್ರೆಗಳನ್ನು ಗೌಣಗೊಳಿಸಿರುವುದರ ಬಗ್ಗೆ ಕೃತಿಕಾರರು ಬಹಳ ವಿಸ್ತೃತವಾಗಿ ವಿವರಿಸಿದ್ದಾರೆ.

ಕನ್ನಡ ಸಾಹಿತ್ಯ ಚರಿತ್ರೆಗಳು ಜನಪದ ವಿಚಾರಗಳನ್ನು ಅವಲೋಕಿಸಿರುವುದು ಬಹಳ ಕಡಿಮೆ. ಇವುಗಳ ಬಗೆಗೆ ಜಾಣ ಮೌನವಹಿಸಿರುವುದು ಸಹಜವೇ. ಆಧುನಿಕ ಸಾಹಿತ್ಯ ಚರಿತ್ರೆ ಮತ್ತು ಆರಂಭಿಕ ಸಾಹಿತ್ಯ ವಿಮರ್ಶೆಗಳು ಜನಪದ ಸಾಹಿತ್ಯವನ್ನು ಹೊರಗಿಟ್ಟು ಚರ್ಚಿಸಲಾಗಿದೆ. ಇದರ ಹಿನ್ನೆಲೆಯ ಬಗೆಗೆ ಹೊಸ ತಲೆಮಾರಿನ ಓದುಗ ವಲಯ ಮತ್ತು ವಿಮರ್ಶಕರು ಹೆಚ್ಚು ಚರ್ಚಿಸುವ ಅನಿವಾರ್ಯತೆ ಇದೆ.

ದಕ್ಷಣ ಕರ್ನಾಟಕದ ಮಲೆಯ ಮಾದಪ್ಪ, ಮಂಟೇಸ್ವಾಮಿ ಇತ್ಯಾದಿ ನಾಯಕರ ಬಗೆಗೆ ಕಟ್ಟಲ್ಪಟ್ಟ ಮಹಾಕಾವ್ಯಗಳು ಹೆಚ್ಚು ಜನಪ್ರಿಯಗೊಂಡಂತೆ, ಉತ್ತರ ಕರ್ನಾಟಕದ ಮೈಲಾರಲಿಂಗ, ಹಾಲುಮತ ಕಾವ್ಯ, ಜುಂಜಪ್ಪಇತರ ಕಾವ್ಯಗಳ ಬಗೆಗೆ ಹೆಚ್ಚು ಜನಪ್ರಿಯತೆಗೊಳ್ಳದಿರುವುದರ ಹಿನ್ನೆಲೆಯನ್ನು ಕೃತಿಕಾರರು ಬಹಳ ನಿಕರವಾದ ಅಂಶಗಳೊಂದಿಗೆ ವಿಶ್ಲೇಷಿಸಿದ್ದಾರೆ.

Writer - ಶಿವಣ್ಣ ಕೆಂಸಿ, ಬೆಂಗಳೂರು

contributor

Editor - ಶಿವಣ್ಣ ಕೆಂಸಿ, ಬೆಂಗಳೂರು

contributor

Similar News

ಜಗದಗಲ
ಜಗ ದಗಲ