ಸ್ಕಾರ್ಫ್ ವಿವಾದ; ಉಡುಪಿ ಸರಕಾರಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರಿಂದ ಭಿತ್ತಿಪತ್ರ ಪ್ರದರ್ಶನ

Update: 2022-01-20 17:30 GMT

ಉಡುಪಿ, ಜ.20: ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿನ ಸ್ಕಾರ್ಫ್(ಹಿಜಾಬ್) ವಿವಾದಕ್ಕೆ ಸಂಬಂಧಿಸಿ ಕಳೆದ ಮೂರು ವಾರಗಳಿಂದ ತರಗತಿಯಿಂದ ಹೊರಗೆ ಉಳಿಯಲ್ಪಟ್ಟ ವಿದ್ಯಾರ್ಥಿನಿಯರು ಗುರುವಾರ ಕಾಲೇಜಿನ ಗೇಟ್ ಬಳಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

‘ಹಿಜಾಬ್ ನನ್ನ ಹಕ್ಕು, ಅದನ್ನು ಪಡೆದೆ ತೀರುತ್ತೇವೆ, ನಮಗೆ ನ್ಯಾಯ ಬೇಕು’, ‘ಇದು ನನ್ನ ಮೂಲಭೂತ ಹಕ್ಕು’, ‘ನಾವು ಹಿಜಾಬ್ ಹಾಕಿದ ಕಾರಣಕ್ಕಾಗಿ ತರಗತಿಯಿಂದ ಹೊರಗೆ ಕುಳಿತುಕೊಂಡಿದ್ದೇವೆ’ ಎಂಬ ಬಿತ್ತಿ ಪತ್ರಗಳನ್ನು ಐವರು ವಿದ್ಯಾರ್ಥಿನಿಯರು ಪ್ರದರ್ಶಿಸಿದರು. ಇವರು ಇಂದು ಕೂಡ ಹಿಜಾಬ್ ಧರಿಸಿ ಕೊಂಡು ಕಾಲೇಜಿಗೆ ಬಂದ ಕಾರಣಕ್ಕೆ ತರಗತಿಗೆ ಪ್ರವೇಶ ಇಲ್ಲದೆ ಕಾಲೇಜಿನಿಂದ ಹೊರಗೆ ಉಳಿದಿದ್ದರು.

ಕಳೆದ ಮೂರು ವಾರಗಳಿಂದ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಈ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಕಾಲೇಜಿನ ದ್ವಿತೀಯ ಪಿಯುಸಿಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತಲಾ ಮೂವರು ಹಾಗೂ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತಲಾ ಒಬ್ಬರು ಸೇರಿದಂತೆ ಒಟ್ಟು ಎಂಟು ಮಂದಿ ವಿದ್ಯಾರ್ಥಿನಿಯರು ಈ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು ಇವರಲ್ಲಿ ಮೂವರು ವಿದ್ಯಾರ್ಥಿಗಳು ಇಂದು ಅನಾರೋಗ್ಯದ ಕಾರಣ ಕಾಲೇಜಿಗೆ ಬಂದಿರಲಿಲ್ಲ.

ವರ್ಷದಿಂದ ಹೋರಾಟ

‘ಪ್ರಥಮ ಪಿಯುಸಿ ಸೇರಿದಾಗ ಸ್ಕಾರ್ಫ್ ಹಾಕಿಕೊಂಡು ಬಂದಿರಲಿಲ್ಲ. ಆನ್ ಲೈನ್ ಬಳಿಕ ಆರಂಭಗೊಂಡ ಆಫ್‌ಲೈನ್ ತರಗತಿಗೆ ಸ್ಕಾರ್ಫ್ ಹಾಕಿಕೊಂಡು ಬಂದೆವು. ಆಗ ನಮಗೆ ತುಂಬಾ ಮಾನಸಿಕ ಹಿಂಸೆ ನೀಡಿದರು. ತರಗತಿಯಿಂದ ಹೊರಗೆ ಹಾಕಿದರು. ಮನವಿ ಮಾಡಿದರೂ ತರಗತಿಗೆ ಸೇರಿಸಲಿಲ್ಲ. ಒತ್ತಡ ಹಾಕಿ ಸ್ಕಾರ್ಫ್ ತೆಗೆಸಿದರು’ ಎಂದು ವಿದ್ಯಾರ್ಥಿನಿ ಆಲಿಯಾ ಬಾನು ತಿಳಿಸಿದರು.

‘ಮುಂದೆ ನಾವು ದ್ವಿತೀಯ ಪಿಯುಸಿಗೆ ಸೇರಿದೆವು. ಈ ವರ್ಷವೂ ಕೂಡ ನಾವು ಏಕಾಏಕಿಯಾಗಿ ಸ್ಕಾರ್ಫ್ ಹಾಕಿಕೊಂಡು ಬರಲಿಲ್ಲ. ಸ್ಕಾರ್ಫ್ ಹಾಕಲು ಅವಕಾಶ ನೀಡುವಂತೆ ಪೋಷಕರ ಮೂಲಕ ಪ್ರಾಂಶುಪಾಲರ ಬಳಿ ಮನವಿ ಮಾಡಿಸಿದೆವು. ಆದರೆ ಪ್ರಾಂಶುಪಾಲರು ಅದನ್ನು ತಿರಸ್ಕರಿಸಿದರು’ ಎಂದು ಅವರು ಹೇಳಿದರು.

‘ನಮ್ಮ ಮನವಿಗಳಿಗೆ ಪ್ರಾಂಶುಪಾಲರಿಂದ ಯಾವುದೇ ಸರಕಾತ್ಮಕ ಸ್ಪಂದನೆ ಸಿಗದಿದ್ದಾಗ ಡಿಸೆಂಬರ್ ಕೊನೆಯ ವಾರದಲ್ಲಿ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬಂದೆವು. ಅದಕ್ಕಾಗಿ ನಮ್ಮನ್ನು ಹೊರಗಡೆ ನಿಲ್ಲಿಸಿದರು. ಮತ್ತೆ ಮತ್ತೆ ಮನವಿ ಮಾಡಿದರೂ ತರಗತಿ ಪ್ರವೇಶಕ್ಕೆ ಅವಕಾಶ ಸಿಗಲಿಲ್ಲ. ನಾವು ತರಗತಿ ಹೊರಗಡೆ ನಿಲ್ಲುವುದು ಯಾರಿಗೂ ತಿಳಿಯಬಾರದೆಂಬ ಉದ್ದೇಶದಿಂದ ಸ್ಟಾಫ್ ರೂಮಿನಲ್ಲಿ, ಕೆಲವೊಮ್ಮೆ ಲೈಬ್ರರಿ ಯಲ್ಲಿ ಕುಳ್ಳಿರಿಸಿದರು’

‘ಸಮವಸ್ತ್ರದಲ್ಲಿನ ನೀಲಿ ಹಿಜಾಬ್’

‘ನಾವು ಕಪ್ಪು ಹಿಜಾಬ್ ಹಾಕುವುದಿಲ್ಲ. ಕಾಲೇಜಿನ ಸಮವಸ್ತ್ರದಲ್ಲಿರುವ ನೀಲಿ ಬಣ್ಣದ ಹಿಜಾಬ್ ಹಾಕಿಕೊಂಡು ಬರುತ್ತೇವೆ ಎಂದು ಕೇಳುತ್ತಿದ್ದೇವೆ. ಅದಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಆಲಿಯಾ ಬಾನು ನೋವು ಹೇಳಿಕೊಂಡರು.

ಪೋಷಕರು ನಮಗೆ ಬೆಂಬಲ ನೀಡುತ್ತಿದ್ದಾರೆ. ಇದು ಸರಕಾರಿ ಕಾಲೇಜು ಆಗಿರುವುದರಿಂದ ನಮಗೆ ಸ್ಕಾರ್ಫ್ ಹಾಕಲು ಅವಕಾಶ ನೀಡಬೇಕು. ನಮ್ಮ ಪಾಠ ತಪ್ಪಿ ಹೋಗುತ್ತಿದೆ. ನೋಟ್ಸ್ ಕೇಳಿದರೆ ಇತರ ವಿದ್ಯಾರ್ಥಿಗಳು ನೀಡುತ್ತಿಲ್ಲ. ಯಾಕೆಂದರೆ ಅವರಿಗೆ ಉಪನ್ಯಾಸಕರ ಭಯ ಇದೆ. ಹೀಗಾಗಿ ನಾವು ನಮ್ಮ ಶಿಕ್ಷಣದಿಂದಲೂ ವಂಚಿತರಾಗುತಿ್ತದ್ದೇವೆ ಎಂದು ಅವರು ದೂರಿದರು.

‘ನಾವು ಶಿಕ್ಷಣ ಮತ್ತು ಹಿಜಾಬ್‌ಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಪ್ರತಿದಿನ ಬಂದು ಪ್ರಾಂಶುಪಾಲರ ಬಳಿ ಅನುಮತಿ ಕೇಳುತ್ತಿದ್ದೇವೆ. ಆದರೆ ನಮ್ಮ ಮನವಿ ಸ್ಪಂದಿಸುತ್ತಿಲ್ಲ. ಪ್ರಥಮ ಪಿಯುಸಿಯಲ್ಲೂ ಸ್ಕಾರ್ಫ್ ಹಾಕಿದ್ದೇವೆ. ಆಗ ಒತ್ತಾಯ ಪೂರ್ವಕವಾಗಿ ತೆಗೆಸಿದರು ಎಂದು ವಿದ್ಯಾರ್ಥಿನಿ ಆಲಿಯಾ ಅಸದಿ ಆರೋಪಿಸಿದರು.

ಈ ವಿವಾದದ ಹಿನ್ನೆಲೆಯಲ್ಲಿ ಕಾಲೇಜಿನ ಆವರಣದಲ್ಲಿ ಪೊಲೀಸ್ ಭದ್ರತೆ ಯನ್ನು ಒದಗಿಸಲಾಗಿದ್ದು, ಮಾಧ್ಯಮದವರು ಸೇರಿದಂತೆ ಸಾರ್ವಜನಿಕರು ಒಳಗೆ ಪ್ರವೇಶಿಸದಂತೆ ಕಾಲೇಜಿನ ಗೇಟಿಗೆ ಬೀಗ ಜಡಿಯಲಾಗಿತ್ತು.

ಸೂಚಿಸಿದಂತೆ ಪತ್ರ ಬರೆಯುವಂತೆ ಒತ್ತಡ!

ಹೋರಾಟ ಮಾಡುತ್ತಿರುವ ಎಂಟು ವಿದ್ಯಾರ್ಥಿನಿಯರ ಪೈಕಿ ಮೂವರ ಹೊರತು ಪಡಿಸಿ ಉಳಿದವರು ಅನಾರೋಗ್ಯದ ಕಾರಣದಿಂದ ಜ.14ರಂದು ಕಾಲೇಜಿಗೆ ಬಂದಿರಲಿಲ್ಲ. ಆಗ ಈ ಮೂವರು ಪತ್ರ ಬರೆಯುವಂತೆ ಒತ್ತಡ ಹಾಕಿದರು ಎಂದು ಆಲಿಯಾ ಬಾನು ಆರೋಪಿಸಿದರು.

‘ಹಿಜಾಬ್ ಹಾಕಿದ ಕಾರಣಕ್ಕೆ ನಮಗೆ ತರಗತಿಗೆ ಅವಕಾಶ ನೀಡುತ್ತಿಲ್ಲ ಎಂದು ಬರೆದ ಪತ್ರವನ್ನು ಕಸದ ಬುಟ್ಟಿಗೆ ಹಾಕಲಾಯಿತು. ಮಾಧ್ಯಮದಲ್ಲಿ ಹೇಳಿರುವುದೆಲ್ಲ ಸುಳ್ಳು. ಇಷ್ಟು ದಿನ ಕಾಲೇಜಿಗೆ ಬಾರದಿರಲು ಅನಾರೋಗ್ಯವೇ ಕಾರಣ ಎಂಬುದಾಗಿ ಬರೆಯುವಂತೆ ಒತ್ತಡ ಹಾಕಿದರು. ಇಂಟರ್ನಲ್ ಅಂಕ, ಹಾಜ ರಾತಿ ನೀಡಲ್ಲ ಎಂದು ಬೆದರಿಸಿದರು. ಹೀಗೆ ತುಂಬಾ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಅವರು ಆರೋಪಿಸಿದರು.

‘ಈ ಕಾಲೇಜಿನ ಪೂಜೆ ಹಾಗೂ ಇತರ ಆಚರಣೆ ಮಾಡುತ್ತಾರೆ. ಇದು ಕಾಲೇಜು ಆಗಿರುವುದರಿಂದ ನಾವು ಅದಕ್ಕೆ ಗೌರವ ಕೊಡುತ್ತೇವೆ. ಅದೇ ರೀತಿ  ನಮ್ಮ ಮೂಲಭೂತ ಹಕ್ಕು ಆಗಿರುವ ಹಿಜಾಬ್ ಹಾಕಿ ತರಗತಿಯಲ್ಲಿ ಕುಳಿತು ಕೊಳ್ಳಲು ಅವಕಾಶ ನೀಡಬೇಕು’
-ಆಲಿಯಾ ಬಾನು, ವಿದ್ಯಾರ್ಥಿನಿ

''ಈ ಕಾಲೇಜಿನಲ್ಲಿ ಸಮವಸ್ತ್ರ ಬೇಕೆ ಬೇಡವೇ ಎಂಬುದಾಗಿ ಈಗಾಗಲೇ ನಾವು ಸರಕಾರಕ್ಕೆ ಪತ್ರ ಬರೆದಿದ್ದೇವೆ. ಸರಕಾರದಿಂದ ಈ ಬಗ್ಗೆ ಯಾವುದೇ ನಿರ್ಧಾರ ಬಂದಿಲ್ಲ. ಆ ಹೆಣ್ಣು ಮಕ್ಕಳು ಒಂದೂವರೆ ವರ್ಷದಿಂದ ಹಿಜಾಬ್ ಹಾಕದೆ ಕಾಲೇಜಿಗೆ ಬಂದಿದ್ದಾರೆ. ಕಾಲೇಜಿನಲ್ಲಿ ಶಿಸ್ತು ಎಂಬುದು ಬಹಳಷ್ಟು ಮುಖ್ಯ. ಇವರು ಸರಕಾರ ನಿರ್ಧಾರ ಬರುವವರೆಗೆ ಹಿಜಾಬ್ ತೆಗೆದು ತರಗತಿಗೆ ಹೋಗಲಿ. ಸರಕಾರ ಸಮವಸ್ತ್ರ ಬೇಡ ಎಂದು ಸೂಚಿಸಿದರೆ ಕಾಲೇಜಿನಲ್ಲಿ ಸಮವಸ್ತ್ರ ವ್ಯವಸ್ಥೆಯನ್ನೇ ತೆಗೆದು ಹಾಕುವ ಬಗ್ಗೆ ಈಗಾಗಲೇ ಸಮಿತಿ ನಿರ್ಣಯ ಮಾಡಿದೆ''.

-ರಘುಪತಿ ಭಟ್, ಶಾಸಕರು ಮತ್ತು ಅಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News