ನೀಟ್ ಪ್ರವೇಶಾತಿ: ಒಬಿಸಿ ವಿಭಾಗಕ್ಕೆ ಶೇ. 27 ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2022-01-20 09:21 GMT

ಹೊಸದಿಲ್ಲಿ: ನೀಟ್ ವೈದ್ಯಕೀಯ ಪದವಿ ಮತ್ತು ಸ್ನಾತ್ತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿಗಳಿಗೆ ಇತರ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿಯನ್ನು ಇಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಮೀಸಲಾತಿ ಅರ್ಹತೆಗೆ ವಿರುದ್ಧವಾಗಿಲ್ಲ ಬದಲು ಅದರ ವಿತರಣಾ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಜನವರಿ 7ರಂದು ಜಸ್ಟಿಸ್ ಡಿ ವೈ ಚಂದ್ರಚೂಡ್ ಹಾಗೂ ಜಸ್ಟಿಸ್ ಎ ಎಸ್ ಬೋಪಣ್ಣ ಅವರ ಪೀಠವು ತನ್ನ ಸಂಕ್ಷಿಪ್ತ ಆದೇಶದಲ್ಲಿ ಇತರ ಹಿಂದುಳಿದ ವರ್ಗಗಳ ಮೀಸಲಾತಿಯ ಸಂವಿಧಾನಿತ ಮಾನ್ಯತೆಯನ್ನು ಎತ್ತಿ ಹಿಡಿದಿತ್ತು. ಆರ್ಥಿಕವಾಗಿ ದುರ್ಬಲ ವರ್ಗಗಳವರಿಗೆ ಮೀಸಲಾತಿಗೆ ಅರ್ಹತೆ ಪಡೆಯಲು ಪ್ರಸ್ತುತ ದಾಖಲಾತಿಗಾಗಿ ರೂ. 8 ಲಕ್ಷ ವಾರ್ಷಿಕ ಆದಾಯ ಮಿತಿಯನ್ನು ಅನುಮೋದಿಸಿತ್ತು. ಈ ನಿರ್ಧಾರಕ್ಕೆ ವಿಸ್ತೃತ ಕಾರಣ ನೀಡುವ ಆದೇಶವನ್ನು ಶೀಘ್ರದಲ್ಲಿಯೆ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿತ್ತು.

ಇಂದು ಈ ವಿಸ್ತೃತ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಸ್ಪರ್ಧಾತ್ಮಕ ಪರೀಕ್ಷೆಗಳು ಕೆಲವು ವರ್ಗಗಳಿಗೆ ಒಂದು ಸಮಯಾವಧಿಯಲ್ಲಿ ದೊರೆಯುವ ಆರ್ಥಿಕ ಸಾಮಾಜಿಕ ಪ್ರಯೋಜನವನ್ನು ಪ್ರತಿಬಿಂಬಿಸುವುದಿಲ್ಲ ಹಾಗೂ ಅರ್ಹತೆಯನ್ನು ಸಾಮಾಜಿಕವಾಗಿ ಸಂದರ್ಭೋಚಿತಗೊಳಿಸಬೇಕು ಎಂದು ಹೇಳಿದೆ.

ಮೀಸಲಾತಿ ಕುರಿತು ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಅಖಿಲ ಭಾರತ ಮೀಸಲಾತಿ ಸೀಟುಗಳಿಗೆ ಮೀಸಲಾತಿ ಅನುಮೋದಿಸುವಾಗ ಸರಕಾರ ನ್ಯಾಯಾಲಯದ ಅನುಮತಿ ಕೇಳುವ ಅಗತ್ಯವಿಲ್ಲ ಮತ್ತು ಸರಕಾರದ ನಿರ್ಧಾರ ಸರಿಯಾಗಿದೆ ಎಂದು ಹೇಳಿದೆ.

ನ್ಯಾಯಾಲಯದಿಂದ ಇನ್ನಷ್ಟು ಹಸ್ತಕ್ಷೇಪ ನಡೆದಿದ್ದರೆ ಈ ವರ್ಷದ ಪ್ರವೇಶಾತಿ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುತ್ತಿತ್ತು, ಕೌನ್ಸೆಲಿಂಗ್ ಬಾಕಿಯಿರುವಾಗ ಮೀಸಲಾತಿಯನ್ನು ತಡೆಹಿಡಿಯುವುದು ಸರಿಯಾಗದು ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದ ಅರ್ಜಿದಾರರು, ಇತರ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ಮೀಸಲಾತಿ ನೀಡಿದ ಮೆಡಿಕಲ್ ಕೌನ್ಸೆಲಿಂಗ್ ಸಮಿತಿಯ ಜುಲೈ 29, 2021 ಅಧಿಸೂಚನೆಯನ್ನು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News