ಮಂಗಳೂರು; ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ದಾರಿಗೆ ಅಡ್ಡಿ: 40 ಕಿ.ಮೀ.ವರೆಗೂ ಸತಾಯಿಸಿದ ಕಾರು ಚಾಲಕ!

Update: 2022-01-20 14:04 GMT

ಮಂಗಳೂರು, ಜ.20: ನಗರದಿಂದ ಭಟ್ಕಳಕ್ಕೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಗೆ ದಾರಿಬಿಟ್ಟು ಕೊಡದ ಚಾಲಕ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ವಿಕೃತ ಮೆರೆದ ಘಟನೆ ಬುಧವಾರ ಸಂಜೆ ನಡೆದಿದೆ.

ಇದೇ ಕಾರಿನ ಚಾಲಕನು ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್‌ಗೆ ಇದೇ ರೀತಿ ಕಿರುಕುಳ ನೀಡಿದ್ದಾನೆ ಎಂಬ ಆರೋಪವೂ ವ್ಯಕ್ತವಾಗಿದೆ. ಈ ಮಧ್ಯೆ ಕಾರು ಚಾಲಕನ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ರೋಗಿಯನ್ನು ಬುಧವಾರ ಸಂಜೆ ಭಟ್ಕಳಕ್ಕೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸೇರಿ ಸಲು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುಲಾಗುತ್ತಿತ್ತು. ಈ ಆ್ಯಂಬುಲೆನ್ಸನ್ನು ಬೆಳ್ತಂಗಡಿಯ ಅಯ್ಯೂಬ್ ಎಂಬವರು ಚಲಾಯಿಸುತ್ತಿದ್ದರು.

ಮಂಗಳೂರಿನಿಂದ ಹೊರಟ ಆ್ಯಂಬುಲೆನ್ಸ್ ಮುಲ್ಕಿ ತಲುಪಿದಾಗ ಶೆವರ್ಲೆ ಬೀಟ್ ಕಾರು ಓವರ್‌ ಟೇಕ್ ಮಾಡಿತು. ಆ ಬಳಿಕ ಎಲ್ಲೂ ಸೈಡ್ ಬಿಟ್ಟುಕೊಡದೆ ಉಡುಪಿಯವರೆಗೂ ಕಾರು ಚಾಲಕ ಸತಾಯಿಸಿದ್ದು, ಇದನ್ನು ಆ್ಯಂಬುಲೆನ್ಸ್‌ನಲ್ಲಿದ್ದವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಕಾರು ಚಾಲಕನ ಈ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

ಸುಮಾರು 30 ಕಿ.ಮೀ.ವರೆಗೂ ಕಾರು ಚಾಲಕನು ರಸ್ತೆ ಬಿಟ್ಟುಕೊಡದೆ ತೊಂದರೆ ನೀಡಿದ್ದಾರೆ. ಕಾರಿನಲ್ಲಿ ಇನ್ನೂ ಒಬ್ಬನಿದ್ದ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯೆ ನೀಡಿದ ಆ್ಯಂಬುಲೆನ್ಸ್ ಚಾಲಕ ಅಯ್ಯೂಬ್ ಬೆಳ್ತಂಗಡಿ ''ನಾನು ಕಳೆದ 25 ವರ್ಷದಿಂದ ಆ್ಯಂಬುಲೆನ್ಸ್ ಚಲಾಯಿಸುತ್ತಿದ್ದೇನೆ. ಇಂತಹ ಕಹಿ ಅನುಭವ ನನಗೆ ಎಂದೂ ಆಗಿಲ್ಲ. ಆ್ಯಂಬಲೆನ್ಸ್‌ನಲ್ಲಿ ರೋಗಿಯನ್ನು ಭಟ್ಕಳಕ್ಕೆ ಕರೆದೊಯ್ಯಬೇಕಿತ್ತು. ಅದಕ್ಕಾಗಿ ದಾರಿ ಬಿಟ್ಟು ಕೊಡುವಂತೆ ಹಾರ್ನ್ ಮಾಡಿದರೂ ಕಾರು ಚಾಲಕ ಸ್ಪಂದಿಸಲಿಲ್ಲ. ಅಡ್ಡಾದಿಡ್ಡಿ ಕಾರು ಚಲಾಯಿಸಿ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕಾರಿನಲ್ಲಿದ್ದವರು ಆ್ಯಂಬುಲೆನ್ಸ್‌ಗೆ ದಾರಿ ಬಿಟ್ಟುಕೊಡದೆ ಕೈ ಸನ್ನೆ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದರು. ಆದಾಗ್ಯೂ ಐಸಿಯು ಆ್ಯಂಬುಲೆನ್ಸ್ ವೆಂಟಿಲೇಟರ್‌ನಲ್ಲಿದ್ದ ರೋಗಿಯನ್ನು 1:40 ನಿಮಿಷದಲ್ಲಿ ತಲುಪಿಸಿದ್ದೇನೆ. ಇದೇ ಕಾರಿನ ಚಾಲಕನು ಬುಧವಾರ ರಾತ್ರಿಯ ವೇಳೆ ಉಡುಪಿಯಿಂದ ಮಂಗಳೂರಿಗೆ ರೋಗಿಯನ್ನು ಕರೆದು ತರುತ್ತಿದ್ದ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಬಗ್ಗೆಯೂ ಮಾಹಿತಿ ಇದೆ ಎಂದು ಅಯ್ಯೂಬ್ ತಿಳಿಸಿದ್ದಾರೆ.

ತುರ್ತು ಸೇವೆಯ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಆ್ಯಂಬುಲೆನ್ಸ್ ಚಾಲಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News